HOME » NEWS » Ipl » IPL 2021 MATCH 8 PBKS VS CSK HEAD TO HEAD RECORD ZP

PBKS vs CSK: ಪಂಜಾಬ್ ಕಿಂಗ್ಸ್​ vs ಚೆನ್ನೈ ಸೂಪರ್ ಕಿಂಗ್ಸ್​: ಅಂಕಿ ಅಂಶಗಳ ಪ್ರಕಾರ ಯಾವ ಕಿಂಗ್ಸ್​ ಬಲಿಷ್ಠ..?

ಕಳೆದ ಸೀಸನ್​ನಲ್ಲಿ ಮೊಹಮ್ಮದ್ ಶಮಿ ಪಂಜಾಬ್ ಪರ ಅತೀ ಹೆಚ್ಚು ವಿಕೆಟ್ ಪಡೆದಿದ್ದರು. ಶಮಿ 20 ವಿಕೆಟ್ ಉರುಳಿಸಿದರೆ, ರವಿ ಬಿಷ್ಣೋಯ್ 13 ವಿಕೆಟ್ ಪಡೆದಿದ್ದರು. ಹಾಗೆಯೇ ಸಿಎಸ್​ಕೆ ಪರ ಸ್ಯಾಮ್ ಕರನ್ 18 ವಿಕೆಟ್ ಉರುಳಿಸಿ ಮಿಂಚಿದ್ದರು. 

news18-kannada
Updated:April 16, 2021, 6:00 PM IST
PBKS vs CSK: ಪಂಜಾಬ್ ಕಿಂಗ್ಸ್​ vs ಚೆನ್ನೈ ಸೂಪರ್ ಕಿಂಗ್ಸ್​: ಅಂಕಿ ಅಂಶಗಳ ಪ್ರಕಾರ ಯಾವ ಕಿಂಗ್ಸ್​ ಬಲಿಷ್ಠ..?
CSK vs PBKS
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 8ನೇ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಮೊದಲ ಜಯ ಸಾಧಿಸುವ ಇರಾದೆಯಲ್ಲಿದೆ ಸಿಎಸ್​ಕೆ. ಅತ್ತ ರಾಜಸ್ಥಾನ್ ವಿರುದ್ದ ರೋಚಕ ಜಯ ಸಾಧಿಸಿರುವ ಪಂಜಾಬ್ ಕಿಂಗ್ಸ್ ಇಂದು ಪರಿಪೂರ್ಣ ಜಯಗಳಿಸಲು ತುದಿಗಾಲಲ್ಲಿ ನಿಂತಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 221 ರನ್​ಗಳಿಸಿದರೆ, ಸಿಎಸ್​ಕೆ ತಂಡವು ಪ್ರಮುಖ ಆಟಗಾರರ ವೈಫಲ್ಯದ ನಡುವೆ 188 ರನ್​ ಕಲೆಹಾಕಿತ್ತು. ಅಂದರೆ ಎರಡೂ ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್​ಮನ್​ಗಳಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಬೃಹತ್ ಮೊತ್ತವನ್ನು ನಿರೀಕ್ಷಿಸಬಹುದಾಗಿದೆ.

ಇನ್ನು ಉಭಯ ತಂಡಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಎರಡು ತಂಡಗಳು 24 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಬಾರಿ ಗೆಲುವು ದಾಖಲಿಸುವ ಮೂಲಕ ಮೇಲುಗೈ ಹೊಂದಿದೆ. ಅತ್ತ 9 ಬಾರಿ ಮಾತ್ರ ಸಿಎಸ್​ಕೆ ವಿರುದ್ದ ಯಶಸ್ಸು ಸಾಧಿಸಿರುವ ಪಂಜಾಬ್ ಈ ಬಾರಿ ಗೆಲುವಿನ ಸಂಖ್ಯೆಯನ್ನು ಹತ್ತಕ್ಕೇರಿಸುವ ಇರಾದೆಯಲ್ಲಿದೆ.

ಕಳೆದ ಸೀಸನ್​ನಲ್ಲಿ ಸಿಎಸ್​ಕೆ ಹೀನಾಯ ಪ್ರದರ್ಶನ ನೀಡಿದರೂ, ಪಂಜಾಬ್ ವಿರುದ್ದದ ಎರಡು ಪಂದ್ಯಗಳಲ್ಲೂ ಜಯ ಸಾಧಿಸಿತ್ತು ಎಂಬುದು ವಿಶೇಷ. ಇನ್ನು ಕೊನೆಯ 10 ಪಂದ್ಯಗಳ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡರೆ ಅದರಲ್ಲಿ ಸಿಎಸ್​ಕೆ 6 ರಲ್ಲಿ ಜಯ ಸಾಧಿಸಿದರೆ, ಪಂಜಾಬ್ 4 ರಲ್ಲಿ ಮಾತ್ರ ಗೆಲುವಿನ ರುಚಿ ನೋಡಿದೆ.

ಇನ್ನು ಉಭಯ ತಂಡಗಳ ಬ್ಯಾಟ್ಸ್​ಮನ್​ಗಳ ಪ್ರದರ್ಶನವನ್ನು ನೋಡಿದರೆ, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ. ಏಕೆಂದರೆ ಪಂಜಾಬ್ ವಿರುದ್ದ ಸಿಎಸ್​ಕೆ ಎಡಗೈ ದಾಂಡಿಗ ಸುರೇಶ್ ರೈನಾ ಇದುವರೆಗೆ 711 ರನ್ ಬಾರಿಸಿದ್ದಾರೆ. ಹಾಗೆಯೇ ಧೋನಿ 525 ರನ್ ಕಲೆಹಾಕಿದ್ದಾರೆ. ಇನ್ನು ಫಾಫ್ ಡುಪ್ಲೆಸಿಸ್ ಕೂಡ ಪಂಜಾಬ್ ವಿರುದ್ದ ಉತ್ತಮ ಫಾರ್ಮ್​ ಪ್ರದರ್ಶಿಸಿದ್ದು, ಇದುವರೆಗೆ 481 ರನ್ ಬಾರಿಸಿದ್ದಾರೆ. ಆದರೆ ಪಂಜಾಬ್ ಬ್ಯಾಟ್ಸ್​ಮನ್​ಗಳು ಸಿಎಸ್​ಕೆ ವಿರುದ್ದ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ.

ಹಾಗೆಯೇ ಬೌಲರುಗಳ ವಿಭಾಗದಲ್ಲಿ ಪಂಜಾಬ್ ವಿರುದ್ದ ಸಿಎಸ್​ಕೆ ಪರ ಅತ್ಯುತ್ತಮ ಪ್ರದರ್ಶನ ನೀಡಿರುವುದು ರವಿಚಂದ್ರನ್ ಅಶ್ವಿನ್. ಅಶ್ವಿನ್ ಇದುವರೆಗೆ 18 ವಿಕೆಟ್ ಪಡೆದಿದ್ದಾರೆ. ಆದರೆ ಅಶ್ವಿನ್ ಪ್ರಸ್ತುತ ಸಿಎಸ್​ಕೆ ತಂಡದಲ್ಲಿಲ್ಲ. ಹೀಗಾಗಿ ಇದು ಪರಿಗಣನೆಗೆ ಬರುವುದಿಲ್ಲ. ಇದಾಗ್ಯೂ ಸಿಎಸ್​ಕೆ ಮಧ್ಯಮ ವೇಗಿ ಡ್ವೇನ್ ಬ್ರಾವೊ ಪಂಜಾಬ್ ವಿರುದ್ದ 14 ವಿಕೆಟ್ ಉರುಳಿಸುವ ಮೂಲಕ ಈ ಪಟ್ಟಿಯಲ್ಲಿರುವುದು ವಿಶೇಷ.

ಇನ್ನು ಕಳೆದ ಸೀಸನ್​ನಲ್ಲಿನ ಫಾರ್ಮ್​ ಗಮನಿಸಿದರೆ, ಪಂಜಾಬ್ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಯುಎಇನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ 670 ರನ್​ ಕಲೆಹಾಕಿದರೆ, ಮಯಾಂಕ್ 424 ರನ್ ಬಾರಿಸಿದ್ದರು. ಇನ್ನು ಸಿಎಸ್​ಕೆ ಪರ 449 ರನ್ ಬಾರಿಸುವ ಮೂಲಕ ಫಾಫ್ ಡುಪ್ಲೆಸಿಸ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಅದೇ ರೀತಿ ಕಳೆದ ಸೀಸನ್​ನಲ್ಲಿ ಮೊಹಮ್ಮದ್ ಶಮಿ ಪಂಜಾಬ್ ಪರ ಅತೀ ಹೆಚ್ಚು ವಿಕೆಟ್ ಪಡೆದಿದ್ದರು. ಶಮಿ 20 ವಿಕೆಟ್ ಉರುಳಿಸಿದರೆ, ರವಿ ಬಿಷ್ಣೋಯ್ 13 ವಿಕೆಟ್ ಪಡೆದಿದ್ದರು. ಹಾಗೆಯೇ ಸಿಎಸ್​ಕೆ ಪರ ಸ್ಯಾಮ್ ಕರನ್ 18 ವಿಕೆಟ್ ಉರುಳಿಸಿ ಮಿಂಚಿದ್ದರು.ಉಭಯ ತಂಡಗಳ ಅಂಕಿ ಅಂಶಗಳನ್ನು ಗಮನಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವೇ ಬಲಿಷ್ಠವಾಗಿದೆ. ಆದರೆ ಯುವ ಪಡೆಯೊಂದಿಗೆ ಅನುಭವಿಗಳ ಸಮಾಗಮ ಪಂಜಾಬ್ ಕಿಂಗ್ಸ್​ ತಂಡವನ್ನು ಈ ಬಾರಿ ಬಲಿಷ್ಠವಾಗಿಸಿದೆ. ಹೀಗಾಗಿ ಸೂಪರ್ ಕಿಂಗ್ಸ್​ ನೀಡುವ ಯಾವುದೇ ಸವಾಲನ್ನು ಎದುರಿಸಲು ಪಂಜಾಬ್ ಕಿಂಗ್ಸ್​ ಶಕ್ತವಾಗಿದೆ ಎಂದೇ ಹೇಳಬಹುದು.

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ, ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗೈಕ್ವಾಡ್, ಕೆ.ಎಂ.ಆಸಿಫ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಎಂ.ಹರಿಶಂಕರ್ ರೆಡ್ಡಿ, ಕೆ.ಭಗತ್ ವರ್ಮಾ, ಸಿ ಹರಿ ನಿಶಾಂತ್.

ಪಂಜಾಬ್ ಕಿಂಗ್ಸ್​: ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್​ದೀಪ್ ಸಿಂಗ್ , ಡೇವಿಡ್ ಮಲಾನ್, ಜೇ ರಿಚರ್ಡ್ಸನ್, ಶಾರುಖ್ ಖಾನ್, ರಿಲೆ ಮೆರೆಡಿತ್, ಮೊಯಿಸಸ್ ಹೆನ್ರಿಕ್ಸ್, ಜಲಜ್ ಸಕ್ಸೇನಾ, ಉತ್ಕರ್ಶ್ ಸಿಂಗ್, ಫ್ಯಾಬಿಯನ್ ಅಲೆನ್, ಸುಮಿತ್ ಕುಮಾರ್
Published by: zahir
First published: April 16, 2021, 6:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories