ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳನ್ನು ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳು ಮುನ್ನಡೆಸುತ್ತಿರುವುದು ವಿಶೇಷ. ಚೊಚ್ಚಲ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡ ರಿಷಭ್ ಪಂತ್ ಮೊದಲ ಪಂದ್ಯದಲ್ಲೇ ಗೆಲುವಿನ ರುಚಿ ನೋಡಿದರೆ, ನಾಯಕನಾಗಿ ಮೊದಲ ಪಂದ್ಯದಲ್ಲೇ ಸಂಜು ಸ್ಯಾಮ್ಸನ್ ಕಹಿಯುಂಡಿದ್ದಾರೆ.
ಇದಾಗ್ಯೂ ಪಂಜಾಬ್ ಕಿಂಗ್ಸ್ ವಿರುದ್ದ ನಾಯಕನಾಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಭರ್ಜರಿ ಶತಕದೊಂದಿಗೆ ತಂಡವನ್ನು ಗೆಲುವಿನ ಸಮೀಪಕ್ಕೆ ತಲುಪಿಸಿದ್ದರು ಎಂಬುದು ವಿಶೇಷ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಪಂದ್ಯದಲ್ಲಿ ಬಲಿಷ್ಠ ಸಿಎಸ್ಕೆಗೆ ಸೋಲುಣಿಸಿ ಅಭಿಯಾನ ಆರಂಭಿಸಿದೆ. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಆರ್ಆರ್ ವಿರುದ್ದ ಕೂಡ ಕಣಕ್ಕಿಳಿಯಲಿದೆ.
ಉಭಯ ತಂಡಗಳು ಐಪಿಎಲ್ನಲ್ಲಿ ಇದುವರೆಗೆ 22 ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ 11 ಜಯ ಸಾಧಿಸುವ ಮೂಲಕ ಫಲಿತಾಂಶದಲ್ಲಿ ಸಮಬಲ ಹೊಂದಿರುವುದು ವಿಶೇಷ. ಹೀಗಾಗಿ ಇಂದಿನ ಪಂದ್ಯವು ಇಬ್ಬರಲ್ಲಿ ಯಾರು ಬೆಸ್ಟ್ ಎಂಬುದನ್ನು ನಿರ್ಧರಿಸಲಿದೆ ಎಂದರೆ ತಪ್ಪಾಗಲಾರದು. ಇನ್ನು ಕಳೆದ ಸೀಸನ್ನ ಅಂಕಿ ಅಂಶಗಳನ್ನು ಗಮನಿಸಿದರೆ, ರಾಜಸ್ಥಾನ್ ರಾಯಲ್ಸ್ಗೆ 2 ಪಂದ್ಯಗಳಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಸೋಲುಣಿಸಿದೆ. ಹಾಗೆಯೇ ಕಳೆದ 10 ಪಂದ್ಯಗಳಲ್ಲಿ ರಾಜಸ್ಥಾನ್ 5 ರಲ್ಲಿ ಗೆಲುವು ಸಾಧಿಸಿದರೆ, ಡೆಲ್ಲಿ ಕೂಡ ಅಷ್ಟೇ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದಾಗ್ಯೂ ಕೊನೆಯ 4 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ಗೆ ಡೆಲ್ಲಿ ವಿರುದ್ದ ಗೆಲ್ಲಲಾಗಲಿಲ್ಲ ಎಂಬುದು ವಿಶೇಷ. ಹೀಗಾಗಿ ಡೆಲ್ಲಿ ವಿರುದ್ದದ ಸೋಲಿನ ಸರಪಳಿಯಿಂದ ಹೊರಬರಲು ಇಂದಿನ ಪಂದ್ಯದಲ್ಲಿ ಆರ್ಆರ್ ಗೆಲ್ಲಲೇಬೇಕು.
ಇನ್ನು ಬ್ಯಾಟ್ಸ್ಮನ್ಗಳ ಅಂಕಿ ಅಂಶಗಳನ್ನು ಗಮನಿಸಿದರೆ ಎರಡೂ ತಂಡಗಳಲ್ಲಿ ಮಿಂಚಿದ ಆಟಗಾರರು ಪ್ರಸ್ತುತ ತಂಡಗಳಿಲ್ಲ ಎಂಬುದು ವಿಶೇಷ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರಾಜಸ್ಥಾನ್ ಪರ ಅಜಿಂಕ್ಯ ರಹಾನೆ 601 ರನ್ ಕಲೆಹಾಕಿದ್ದಾರೆ. ಆದರೆ ರಹಾನೆ ಇದೀಗ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಹಾಗೆಯೇ ರಾಜಸ್ಥಾನ್ ವಿರುದ್ದ ಅತೀ ಹೆಚ್ಚು ರನ್ ಕಲೆಹಾಕಿದ ಡೆಲ್ಲಿ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ವಿರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದಾರೆ. ವೀರು ಆರ್ಆರ್ ವಿರುದ್ದ ಒಟ್ಟು 295 ಬಾರಿಸಿರುವುದು ಶ್ರೇಷ್ಠ ದಾಖಲೆ. ಅದೇ ರೀತಿ ಡೆಲ್ಲಿ ವಿರುದ್ದ ರಾಜಸ್ಥಾನ್ ಪರ ರಾಹುಲ್ ದ್ರಾವಿಡ್ ಕೂಡ ಒಟ್ಟು 253 ರನ್ ಕಲೆಹಾಕಿದ್ದಾರೆ. ಆದರೆ ಇವರ್ಯಾರು ಪ್ರಸ್ತುತ ತಂಡಗಳನ್ನು ಪ್ರತಿನಿಧಿಸುತ್ತಿಲ್ಲ. ಹೀಗಾಗಿ ಬ್ಯಾಟ್ಸ್ಮನ್ಗಳ ಅಂಕಿ ಅಂಶ ಪರಿಗಣನೆಗೆ ಬರುವುದಿಲ್ಲ ಎಂದೇ ಹೇಳಬಹುದು.
ಹಾಗೆಯೇ ಬೌಲರುಗಳ ವಿಭಾಗದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾ ಉತ್ತಮ ಬೌಲಿಂಗ್ ಮಾಡಿದ್ದಾರೆ. ಮಿಶ್ರಾ ಇದುವರೆಗೆ 20 ವಿಕೆಟ್ ಉರುಳಿಸುವ ಮೂಲಕ ಉಭಯ ತಂಡಗಳಲ್ಲಿನ ಟಾಪ್ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಡೆಲ್ಲಿ ಪರ ಆಡಿದ್ದ ಪರ್ವೇಜ್ ಮೆಹರೂಫ್ 11 ವಿಕೆಟ್ ಪಡೆದಿದ್ದರು. ಹಾಗೆಯೇ ಆರ್ಆರ್ ಪರ ಆಡಿದ್ದ ಶೇನ್ ವಾಟ್ಸನ್ ಡೆಲ್ಲಿ ವಿರುದ್ದ 9 ವಿಕೆಟ್ ಕಬಳಿಸಿದ್ದರು.
ಇನ್ನು ಕಳೆದ ಸೀಸನ್ನಲ್ಲಿನ ಫಾರ್ಮ್ ಗಮನಿಸಿದರೆ ಶಿಖರ್ ಧವನ್ ಟಾಪ್ನಲ್ಲಿದ್ದಾರೆ. ಯುಎಇನಲ್ಲಿ ನಡೆದ ಐಪಿಎಲ್ನಲ್ಲಿ ಧವನ್ ಡೆಲ್ಲಿ ಪರ 618 ರನ್ ಕಲೆಹಾಕಿದ್ದರು. ಹಾಗೆಯೇ ರಾಜಸ್ಥಾನ್ ಪರ ಸಂಜು ಸ್ಯಾಮ್ಸನ್ 375 ರನ್ ಬಾರಿಸಿದ್ದರು. ಅಲ್ಲದೆ ಈ ಇಬ್ಬರು ಆಟಗಾರರು ಈ ಬಾರಿ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಇವರಿಬ್ಬರ ಆಟದ ಮೇಲೆ ಪಂದ್ಯ ಸ್ಕೋರ್ ನಿರ್ಧಾರವಾಗುವ ಸಾಧ್ಯತೆಯಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಕಳೆದ ಸೀಸನ್ನಲ್ಲಿ 30 ವಿಕೆಟ್ ಪಡೆದಿರುವ ಕಗಿಸೊ ರಬಾಡ ಇಂದು ಕಣಕ್ಕಿಳಿಯುವ ಸಾಧ್ಯತೆಯಿದೆ. ಆದರೆ ಅತ್ತ ರಾಜಸ್ಥಾನ್ ಪರ ಕಳೆದ ಸೀಸನ್ನಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದ ಜೋಫ್ರಾ ಆರ್ಚರ್ (20 ವಿಕೆಟ್) ಈ ಬಾರಿ ಐಪಿಎಲ್ ಆಡುತ್ತಿಲ್ಲ. ಇದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಅಂಕಿ ಅಂಶಗಳ ಪ್ರಕಾರ ಉಭಯ ತಂಡಗಳು ಸಮಬಲ ಹೊಂದಿದ್ದರೂ, ಪ್ರಸ್ತುತ ಫಾರ್ಮ್ ಗಮನಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತುಸು ಮೇಲುಗೈ ಹೊಂದಿದೆ ಎನ್ನಬಹುದು.
ರಾಜಸ್ಥಾನ್ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ರಿಯಾನ್ ಪರಾಗ್, ಶ್ರೇಯಾಸ್ ಗೋಪಾಲ್, ರಾಹುಲ್ ತೇವಟಿಯಾ, ಮಹಿಪಾಲ್ ಲೊಮರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಜಯದೇವ್ ಉನಾದ್ಕತ್, ಮಾಯಾಂಕ್ ಮಾರ್ಕಂಡೆ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನಮ್ ವೊಹ್ರಾ , ಕ್ರಿಸ್ ಮೋರಿಸ್, ಚೇತನ್ ಸಕರಿಯಾ, ಕೆ.ಸಿ.ಕರಿಯಪ್ಪ, ಲಿಯಾಮ್ ಲಿವಿಂಗ್ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್.
ಡೆಲ್ಲಿ ಕ್ಯಾಪಿಟಲ್ಸ್: ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಅವೇಶ್ ಖಾನ್, ಅಕ್ಸರ್ ಪಟೇಲ್, ಇಶಾಂತ್ ಶರ್ಮಾ, ಕಗಿಸೊ ರಬಾಡ, ಪೃಥ್ವಿ ಶಾ, ಆರ್ ಅಶ್ವಿನ್, ರಿಷಭ್ ಪಂತ್, ಶಿಖರ್ ಧವನ್, ಲಲಿತ್ ಯಾದವ್, ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಸ್ಟೀವ್ ಸ್ಮಿತ್, ಉಮೇಶ್ ಯಾದವ್ , ರಿಪಾಲ್ ಪಟೇಲ್, ಲುಕ್ಮನ್ ಹುಸೇನ್ ಮೆರಿವಾಲಾ, ಎಂ ಸಿದ್ಧಾರ್ಥ್, ಟಾಮ್ ಕರ್ರನ್, ಸ್ಯಾಮ್ ಬಿಲ್ಲಿಂಗ್ಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ