HOME » NEWS » Ipl » IPL 2021 MATCH 10 RCB VS KKR HEAD TO HEAD RECORD HIGHEST RUN GETTERS TOP WICKET TAKERS ZP

IPL 2021: ಇಂದು ಮೊದಲ ಪಂದ್ಯದಲ್ಲಿ RCB vs KKR ಮುಖಾಮುಖಿ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

ಬೌಲಿಂಗ್ ವಿಭಾಗದಲ್ಲಿ ನೋಡಿದರೆ, ಆರ್​ಸಿಬಿ ವಿರುದ್ದ ಸುನೀಲ್ ನರೈನ್ 13 ಪಂದ್ಯಗಳಿಂದ 16 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 9 ಪಂದ್ಯಗಳಿಂದ ರಸೆಲ್ 7 ವಿಕೆಟ್ ಕಬಳಿಸಿದ್ದಾರೆ. ಇತ್ತ ಕೆಕೆಆರ್ ವಿರುದ್ದ ಯುಜುವೇಂದ್ರ ಚಹಲ್ 14 ಪಂದ್ಯಗಳಿಂದ 14 ವಿಕೆಟ್​ ಉರುಳಿಸಿ ಆರ್​ಸಿಬಿಯ ಯಶಸ್ವಿ ಬೌಲರ್​ ಎನಿಸಿಕೊಂಡಿದ್ದಾರೆ. ಅಲ್ಲದೆ ಮೊಹಮ್ಮದ್ ಸಿರಾಜ್ ಕೂಡ 5 ಪಂದ್ಯಗಳಿಂದ 6 ವಿಕೆಟ್ ಕಬಳಿಸಿದ್ದಾರೆ.

news18-kannada
Updated:April 18, 2021, 2:23 PM IST
IPL 2021: ಇಂದು ಮೊದಲ ಪಂದ್ಯದಲ್ಲಿ RCB vs KKR ಮುಖಾಮುಖಿ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?
rcb vs kkr
  • Share this:
ಐಪಿಎಲ್ ಅಂಗಳದ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿದೆ. ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಬೀಗಿರುವ ಆರ್​ಸಿಬಿ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯ ಸಾಧಿಸುವ ಇರಾದೆಯಲ್ಲಿದೆ. ಅತ್ತ ಮುಂಬೈ ಇಂಡಿಯನ್ಸ್ ವಿರುದ್ದ 10 ರನ್​ಗಳಿಂದ ಸೋತಿರುವ ಕೆಕೆಆರ್​ ಆರ್​ಸಿಬಿ ವಿರುದ್ದ ಗೆಲ್ಲಲು ಕಠಿಣ ಪೈಪೋಟಿ ನಡೆಸಲಿದೆ. ಆದರೆ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿಯನ್ನು ಮಣಿಸುವುದು ಸುಲಭವಲ್ಲ. ಹೀಗಾಗಿ ಕೆಕೆಆರ್​ ಬಲಿಷ್ಠ ಪಡೆಯನ್ನೇ ಆರ್​ಸಿಬಿ ವಿರುದ್ದ ಕಣಕ್ಕಿಳಿಸಲಿದೆ.

ಉಭಯ ತಂಡಗಳು ಇದುವರೆಗೆ 26 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಕೆಕೆಆರ್​ 14 ಬಾರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ 12 ಬಾರಿ ವಿಜಯದ ನಗೆ ಬೀರಿದೆ. ಕೊನೆಯ 10 ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಆರ್​ಸಿಬಿ ಕೆಕೆಆರ್ ವಿರುದ್ದ ಕೇವಲ 3 ಬಾರಿ ಮಾತ್ರ ಗೆದ್ದಿದೆ. ಅಂದರೆ ಕೊಲ್ಕತ್ತಾ ಕೊನೆಯ 10 ಮುಖಾಮುಖಿಯಲ್ಲಿ 7 ಬಾರಿ ವಿಜಯ ಸಾಧಿಸಿದೆ. ಆದರೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಕೆಕೆಆರ್​ ವಿರುದ್ದ ಪಾರುಪತ್ಯ ಮೆರೆದಿತ್ತು ಎಂಬುದು ವಿಶೇಷ.

ಯುಎಇನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಕೆಕೆಆರ್ ವಿರುದ್ದ 82 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಮತ್ತೊಂದು ಪಂದ್ಯದಲ್ಲಿ 8 ವಿಕೆಟ್​ಗಳ ವಿಜಯ ತನ್ನದಾಗಿಸಿಕೊಂಡಿತ್ತು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಆರ್​ಸಿಬಿ ಕಣಕ್ಕಿಳಿಯಲಿದೆ.

ಇನ್ನು ಆರ್​ಸಿಬಿ ವಿರುದ್ದ ಅತ್ಯಂತ ಯಶಸ್ವಿ ಬ್ಯಾಟ್ಸ್​ಮನ್ ಎಂದರೆ ಆ್ಯಂಡ್ರೆ ರಸೆಲ್. ರಸೆಲ್ ಇದುವರೆಗೆ ಆರ್​ಸಿಬಿ ವಿರುದ್ದ 9 ಇನಿಂಗ್ಸ್​ಗಳಿಂದ 308 ರನ್​ ಕಲೆಹಾಕಿದ್ದಾರೆ. ಹಾಗೆಯೇ ಸುನೀಲ್ ನರೈನ್ 7 ಇನಿಂಗ್ಸ್​ಗಳಿಂದ 194, ಹಾಗೂ ನಿತೀಶ್ ರಾಣ 6 ಇನಿಂಗ್ಸ್​ನಿಂದ 180 ರನ್ ಬಾರಿಸಿ ಆರ್​ಸಿಬಿ ವಿರುದ್ದ ಉತ್ತಮ ಫಾರ್ಮ್​ ಪ್ರದರ್ಶಿಸಿದ್ದಾರೆ.

ಅತ್ತ ಆರ್​ಸಿಬಿಯ ಕಿಂಗ್.. ಕೊಹ್ಲಿ ಕೆಕೆಆರ್ ವಿರುದ್ದ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದುವರೆಗೆ 24 ಇನಿಂಗ್ಸ್​ಗಳಿಂದ ಇದುವರೆಗೆ ಕೊಹ್ಲಿ ಕಲೆಹಾಕಿದ್ದು 725 ರನ್​ಗಳು. ಹಾಗೆಯೇ ಎಬಿಡಿ ಕೂಡ ಕೆಕೆಆರ್​ ವಿರುದ್ದ 16 ಇನಿಂಗ್ಸ್​ಗಳಿಂದ 388 ರನ್​ ಬಾರಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ಆರ್​ಸಿಬಿ ಸ್ಕೋರ್​ನಲ್ಲಿ ಈ ಇಬ್ಬರ ಬ್ಯಾಟಿಂಗ್ ಪ್ರಮುಖ ಪಾತ್ರವಹಿಸಲಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ನೋಡಿದರೆ, ಆರ್​ಸಿಬಿ ವಿರುದ್ದ ಸುನೀಲ್ ನರೈನ್ 13 ಪಂದ್ಯಗಳಿಂದ 16 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 9 ಪಂದ್ಯಗಳಿಂದ ರಸೆಲ್ 7 ವಿಕೆಟ್ ಕಬಳಿಸಿದ್ದಾರೆ. ಇತ್ತ ಕೆಕೆಆರ್ ವಿರುದ್ದ ಯುಜುವೇಂದ್ರ ಚಹಲ್ 14 ಪಂದ್ಯಗಳಿಂದ 14 ವಿಕೆಟ್​ ಉರುಳಿಸಿ ಆರ್​ಸಿಬಿಯ ಯಶಸ್ವಿ ಬೌಲರ್​ ಎನಿಸಿಕೊಂಡಿದ್ದಾರೆ. ಅಲ್ಲದೆ ಮೊಹಮ್ಮದ್ ಸಿರಾಜ್ ಕೂಡ 5 ಪಂದ್ಯಗಳಿಂದ 6 ವಿಕೆಟ್ ಕಬಳಿಸಿದ್ದಾರೆ.

ಇನ್ನು ಉಭಯ ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್​ಮನ್​ಗಳಿರುವುದು ವಿಶೇಷ. ಆರ್​ಸಿಬಿ ತಂಡದಲ್ಲಿ ಆರಂಭಿಕರಾಗಿ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಇದ್ದರೆ, ಕೆಕೆಆರ್ ತಂಡದಲ್ಲಿ ನಿತೀಶ್ ರಾಣಾ ಇದ್ದಾರೆ. ಇನ್ನು ಇತ್ತ ಗ್ಲೆನ್ ಮ್ಯಾಕ್ಸ್​ವೆಲ್ ಇದ್ದರೆ, ಅತ್ತ ಇಯಾನ್ ಮೋರ್ಗನ್ ಇದ್ದಾರೆ. ಅದೇ ರೀತಿ ಆರ್​ಸಿಬಿಯಲ್ಲಿ ಅಬ್ಬರಿಸಲು ಎಬಿಡಿ ಇದ್ದರೆ, ಕೆಕೆಆರ್​ ತಂಡದಲ್ಲಿ ಸ್ಪೋಟಕ ದಾಂಡಿಗ ಆಂಡ್ರೆ ರಸೆಲ್ ಇದ್ದಾರೆ. ಇದಾಗ್ಯೂ ವಿರಾಟ್ ಕೊಹ್ಲಿ ಆಟಕ್ಕೆ ಸರಿಸಾಟಿಯಾಗಬಲ್ಲ ಬ್ಯಾಟ್ಸ್​ಮನ್​ ಕೆಕೆಆರ್ ತಂಡದಲ್ಲಿಲ್ಲ ಎಂಬುದು ವಿಶೇಷ.ಇನ್ನು ಬೌಲರುಗಳ ವಿಭಾಗದಲ್ಲಿ ಪ್ರಸಿದ್ ಕೃಷ್ಣ ಅವರಿಗಿಂತ ಉತ್ತಮವಾಗಿ ಕಳೆದೆರಡು ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡಿದ್ದಾರೆ. ಹಾಗೆಯೇ ಕೈಲ್ ಜೇಮಿಸನ್ ಕೂಡ ಅದ್ಭುತ ಸ್ಪೆಲ್ ಮಾಡಿದ್ದಾರೆ. ಕೆಕೆಆರ್​ ತಂಡದಲ್ಲಿ ಪ್ಯಾಟ್​ ಕಮಿನ್ಸ್ ಇದ್ದರೂ, ಕಳೆದ ಎರಡು ಪಂದ್ಯಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿಲ್ಲ. ಇನ್ನು ಕೆಕೆಆರ್​ ತಂಡದಲ್ಲಿ ಅನುಭವಿ ಹರ್ಭಜನ್ ಸಿಂಗ್ ಇದ್ದರೆ, ಆರ್​ಸಿಬಿ ತಂಡದ ಹೊಸ ವೇಗದ ಅಸ್ತ್ರವಾಗಿ ಹರ್ಷಲ್ ಪಟೇಲ್ ಇದ್ದಾರೆ. ಹಾಗೆಯೇ ವರುಣ್ ಚಕ್ರವರ್ತಿಗೆ ಸವಾಲಾಗಬಲ್ಲ ಯಜುವೇಂದ್ರ ಚಹಲ್ ಹಾಗೂ ಶಬಾಜ್ ಅಹ್ಮದ್ ಆರ್​ಸಿಬಿ ತಂಡದಲ್ಲಿದ್ದಾರೆ. ಹೀಗಾಗಿ ಆಟಗಾರರ ನಡುವಣ ಪೈಪೋಟಿಯಲ್ಲೂ ಆರ್​ಸಿಬಿ ತಂಡದ ಮೇಲುಗೈ ಎಂದೇ ಹೇಳಬಹುದು.

ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ ಕೆಕೆಆರ್​ ಮೇಲುಗೈ ಸಾಧಿಸಿದರೂ, ಕಳೆದ 2 ಸೀಸನ್​ಗಳಿಂದ ಆರ್​ಸಿಬಿ ತಂಡದ ಪ್ರದರ್ಶನಕ್ಕೆ ಕೆಕೆಆರ್​ ಸರಿಸಾಟಿಯಾಗುವಂತಹ ಪ್ರದರ್ಶನ ನೀಡಿಲ್ಲ. ಹಾಗೆಯೇ ಕೆಕೆಆರ್​ ತಂಡಕ್ಕಿಂತ ಆರ್​ಸಿಬಿ ತಂಡವೇ ಸಮತೋಲನದಿಂದ ಕೂಡಿದೆ. ಹೀಗಾಗಿ ಕೆಕೆಆರ್​​ ತಂಡಕ್ಕಿಂತ ಆರ್​ಸಿಬಿ ಎಲ್ಲಾ ರೀತಿಯಲ್ಲೂ ಬಲಿಷ್ಠವಾಗಿದೆ ಎಂದು ಹೇಳಬಹುದು.

ಪಂದ್ಯದ ಸಮಯ: 3.30

ಸ್ಥಳ: ಚೆನ್ನೈನ ಚಿದಂಬರಂ ಸ್ಟೇಡಿಯಂ

ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಹಾಟ್​ ಸ್ಟಾರ್ಸ್​
Published by: zahir
First published: April 18, 2021, 2:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories