ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಸೀಸನ್ಗೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ವಿರಾಟ್ ಕೊಹ್ಲಿ ಮುನ್ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಕಳೆದ 13 ಸೀಸನ್ಗಳಲ್ಲಿ 29 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ 19 ಪಂದ್ಯಗಳನ್ನು ಗೆದ್ದಿದೆ. ಹಾಗೆಯೇ ಆರ್ಸಿಬಿ ತಂಡ ಕೇವಲ 10 ಪಂದ್ಯಗಳಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಎಂ.ಎ.ಚಿದಂಬರಂ ಸ್ಟೇಡಿಯಂ ಎರಡೂ ತಂಡಗಳು ಮೂರನೇ ಬಾರಿ ಮುಖಾಮುಖಿಯಾಗುತ್ತಿರುವುದು ವಿಶೇಷ. ಈ ಹಿಂದಿನ ಎರಡು ಮುಖಾಮುಖಿಯಲ್ಲಿ ತಲಾ ಒಂದೊಂದು ಜಯ ಸಾಧಿಸಿದೆ. 2011 ರಲ್ಲಿ ಮುಂಬೈ ಆರ್ಸಿಬಿ ವಿರುದ್ಧ 31 ರನ್ಗಳಿಂದ ಜಯಗಳಿಸಿತು. ಹಾಗೆಯೇ ಎರಡನೇ ಪಂದ್ಯವನ್ನು ಆರ್ಸಿಬಿ 43 ರನ್ಗಳಿಂದ ಗೆದ್ದುಕೊಂಡಿತ್ತು.
ಪಿಚ್ ರಿಪೋರ್ಟ್:
ಚೆನ್ನೈ ಪಿಚ್ ನಿಧಾನಗತಿ ಬೌಲಿಂಗ್ಗೆ ಸಹಕಾರಿ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಸ್ಪಿನ್ನರ್ಗಳಿಗೆ ಸ್ವರ್ಗ ಎಂದೇ ಹೇಳಲಾಗುತ್ತದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ನರ್ಗಳು ಸಂಪೂರ್ಣವಾಗಿ ಪ್ರಾಬಲ್ಯ ಹೊಂದಿರುವುದು ಇದಕ್ಕೆ ಸಾಕ್ಷಿ. ಮುಂಬೈ ಇಂಡಿಯನ್ಸ್ ತಂಡದಲ್ಲಿ ರಾಹುಲ್ ಚಹರ್, ಪಿಯೂಷ್ ಚಾವ್ಲಾ, ಜಯಂತ್ ಯಾದವ್ ಮತ್ತು ಕೃನಾಲ್ ಪಾಂಡ್ಯ ಅವರಂತಹ ಸ್ಪಿನ್ನರ್ಗಳನ್ನು ಹೊಂದಿದ್ದರೆ, ಆರ್ಸಿಬಿ ತಂಡದಲ್ಲಿ ಸ್ಪಿನ್ ವಿಭಾಗದ ನೇತೃತ್ವವನ್ನು ಯುಜ್ವೇಂದ್ರ ಚಹಲ್ ವಹಿಸಲಿದ್ದಾರೆ. ಹಾಗೆಯೇ ತಂಡದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಇದ್ದಾರೆ.
ಹವಾಮಾನ ವರದಿ: ಚೆನ್ನೈನಲ್ಲಿ ರಾತ್ರಿ 7.30 ಕ್ಕೆ ಉಭಯ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಸಂಜೆ ತಾಪಮಾನವು 28 ರಿಂದ 31 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಳೆಯಾಗುವ ಸಾಧ್ಯತೆಯಿಲ್ಲ. ಆದರೆ ತೇವಾಂಶವು ಶೇಕಡಾ 43 ರಷ್ಟು ಇರಲಿದೆ.
ಚೆನ್ನೈ ಪಿಚ್ ದಾಖಲೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈನ ಪಿಚ್ನಲ್ಲಿ ಐಪಿಎಲ್ನಲ್ಲಿ ಅತಿ ಕಡಿಮೆ ಸ್ಕೋರ್ ಗಳಿಸಿದ ತಂಡ ಎಂಬ ಅಪಕೀರ್ತಿಯನ್ನು ಹೊಂದಿದೆ. 2019 ರಲ್ಲಿ ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 70 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು 2010 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಐದು ವಿಕೆಟ್ ಕಳೆದುಕೊಂಡು 246 ರನ್ ಗಳಿಸಿರುವುದು ಇಲ್ಲಿನ ಅತ್ಯಧಿಕ ಮೊತ್ತ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೂರ್ಣ ತಂಡ: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಆ್ಯಡಂ ಝಂಪಾ, ಶಹಬಾಜ್ ಅಹ್ಮದ್, ಫಿನ್ ಅಲೆನ್, ಕೆನ್ ರಿಚರ್ಡ್ಸನ್, ಪವನ್ ದೇಶಪಾಂಡೆ, ಗ್ಲೆನ್ ಮ್ಯಾಕ್ಸ್ ವೆಲ್, ಸಚಿನ್ ಬೇಬಿ, ಹರ್ಷಲ್ ಪಟೇಲ್, ಸುಯೇಶ್ ಪ್ರಭುದೇಸಾಯಿ, ಕೆ.ಎಸ್.ಭರತ್, ಕೈಲ್ ಜೇಮಿಸನ್, ಡೇನಿಯಲ್ ಕ್ರಿಶ್ಚಿಯನ್.
ಮುಂಬೈ ಇಂಡಿಯನ್ಸ್ ಪೂರ್ಣ ತಂಡ: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿಕಾಕ್, ರಾಹುಲ್ ಚಹರ್, ಕ್ರಿಸ್ ಲಿನ್, ಸೌರಭ್ ತಿವಾರಿ, ಮೊಹ್ಸಿನ್ ಖಾನ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್ ನೈಲ್, ಪಿಯೂಷ್ ಚಾವ್ಲಾ, ಮಾರ್ಕೊ ಜಾನ್ಸೆನ್, ಯುಧ್ವೀರ್ ಸಿಂಗ್, ಜೇಮ್ಸ್ ನೀಶಮ್ ಮತ್ತು ಅರ್ಜುನ್ ತೆಂಡೂಲ್ಕರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ