MI vs RCB: ಹರ್ಷಲ್ ಪಟೇಲ್ ಕರಾರುವಾಕ್ ದಾಳಿ ಮುಂದೆ ಮಂಡಿಯೂರಿದ ಮುಂಬೈ ಬ್ಯಾಟ್ಸ್​ಮನ್​ಗಳು

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 29 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಮುಂಬೈ 19 ಗೆಲುವು ದಾಖಲಿಸಿದರೆ, ಆರ್​ಸಿಬಿ 10 ಪಂದ್ಯಗಳನ್ನು ಗೆದ್ದುಕೊಂಡಿದೆ.

ಆರ್​ಸಿಬಿ

ಆರ್​ಸಿಬಿ

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಸೀಸನ್​ಗೆ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್​ನ್ನು ಎದುರಿಸುತ್ತಿದ್ದು, ಟಾಸ್ ಗೆದ್ದಿರುವ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

  ಅದರಂತೆ ಮೊಹಮ್ಮದ್ ಸಿರಾಜ್ 14ನೇ ಸೀಸನ್ ಐಪಿಎಲ್​ನ ಮೊದಲ ಓವರ್​ ಮಾಡಿದರೆ, ರೋಹಿತ್ ಶರ್ಮಾ ಮೊದಲ ಎಸೆತವನ್ನು ಎದುರಿಸಿದರು. ಈ ಓವರ್​ನಲ್ಲಿ ಕೇವಲ 5 ರನ್​ ನೀಡುವ ಮೂಲಕ ಸಿರಾಜ್ ಆರ್​ಸಿಬಿಗೆ ಉತ್ತಮ ಆರಂಭ ಒದಗಿಸಿದರು.

  ಇನ್ನು ಚೊಚ್ಚಲ ಐಪಿಎಲ್ ಪಂದ್ಯವಾಡುತ್ತಿರುವ ಕೈಲ್ ಜೇಮಿಸನ್ ತಮ್ಮ ಮೊದಲ ಓವರ್​ನಲ್ಲಿ ಕೇವಲ 1 ರನ್​ ನೀಡಿ ಗಮನ ಸೆಳೆದರು. ಹಾಗೆಯೇ ಮೂರನೇ ಓವರ್​ನಲ್ಲಿ ಸಿರಾಜ್ 6 ರನ್​ ನೀಡಿದರು. 3ನೇ ಓವರ್​ನಲ್ಲಿ ಫೋರ್ ಹಾಗೂ ಚಹಲ್ ಎಸೆದ ನಾಲ್ಕನೇ ಓವರ್​ನಲ್ಲಿ ಸಿಕ್ಸ್ ಸಿಡಿಸುವ ಮೂಲಕ 14ನೇ ಸೀಸನ್ ಐಪಿಎಲ್​ನಲ್ಲಿ ರೋಹಿತ್ ಶರ್ಮಾ ಬೌಂಡರಿಗಳ ಖಾತೆ ತೆರೆದರು. ಇದರ ಬೆನ್ನಲ್ಲೇ ಕ್ರಿಸ್ ಲಿನ್ ನೀಡಿದ ತಪ್ಪು ರನ್ ಕರೆಯಿಂದ ರೋಹಿತ್ ಶರ್ಮಾ (19) ರನೌಟ್ ಆದರು.

  ಈ ವೇಳೆ ಕ್ರೀಸ್​ಗೆ ಆಗಮಿಸಿದ ಸೂರ್ಯಕುಮಾರ್ ಯಾದವ್ ಜೇಮಿಸನ್ ಅವರ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಶುಭಾರಂಭ ಮಾಡಿದರು. ಅಲ್ಲದೆ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 41 ಕ್ಕೆ ತಂದು ನಿಲ್ಲಿಸಿದರು.

  ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ 7ನೇ ಓವರ್​ನಲ್ಲಿ ಫೋರ್-ಸಿಕ್ಸ್ ಸಿಡಿಸುವ ಮೂಲಕ ಕ್ರಿಸ್ ಲಿನ್ 14 ರನ್​ ಕಲೆಹಾಕಿದರು. ಅಲ್ಲದೆ ಸೂರ್ಯಕುಮಾರ್ ಜೊತೆಗೂಡಿ ರನ್​ ಗತಿ ಹೆಚ್ಚಿಸಿದ ಲಿನ್ ಹತ್ತು ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 86 ಕ್ಕೆ ತಂದು ನಿಲ್ಲಿಸಿದರು.

  11ನೇ ಓವರ್​ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್​ರನ್ನು (31) ಔಟ್​ ಮಾಡುವ ಮೂಲಕ ಆರ್​ಸಿಬಿ ತಂಡದ ಹೊಸ ವೇಗಿ ಕೈಲ್ ಜೇಮಿಸನ್ ತಮ್ಮ ಐಪಿಎಲ್ ವಿಕೆಟ್ ಖಾತೆ ತೆರೆದರು. ಇನ್ನು 13ನೇ ಓವರ್​ನಲ್ಲಿ ದಾಳಿಗಿಳಿದ ವಾಷಿಂಗ್ಟನ್​ ಸುಂದರ್ ತಮ್ಮ ಮೊದಲ ಓವರ್​ನಲ್ಲೇ ಆರ್​ಸಿಬಿ ಮತ್ತೊಂದು ಯಶಸ್ಸು ತಂದುಕೊಟ್ಟರು.

  35 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ ಸಿಡಿಸಿ ಅಪಾಯಕಾರಿಯಾಗಿ ಪರಿಣಮಿಸಿದ್ದ ಕ್ರಿಸ್ ಲಿನ್ (49) ಅವರನ್ನು ಅರ್ಧಶತಕ ಅಂಚಿನಲ್ಲಿ ಔಟ್ ಮಾಡುವಲ್ಲಿ ಸುಂದರ್ ಯಶಸ್ವಿಯಾದರು. ಈ ಹಂತದಲ್ಲಿ ಜೊತೆಗೂಡಿದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ನಡೆಸಿದರು. ಪರಿಣಾಮ 15 ಓವರ್ ಮುಕ್ತಾಯದ ವೇಳೆ ತಂಡದ ಮೊತ್ತ 130 ಗಡಿಗೆ ಬಂದು ನಿಂತಿತು.

  ಇನ್ನು 16ನೇ ಓವರ್​ನಲ್ಲಿ ಹರ್ಷಲ್ ಪಟೇಲ್ ಎಸೆದ ಸ್ಪೋ ಫುಲ್​ಟಾಸ್ ಬಾಲ್​ನ್ನು ಗುರುತಿಸುವಲ್ಲಿ ಎಡವಿದ ಹಾರ್ದಿಕ್ ಪಾಂಡ್ಯ (13) ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು. ಇನ್ನು ಮೊಹಮ್ಮದ್ ಸಿರಾಜ್ 17ನೇ ಓವರ್​ನಲ್ಲಿ 7 ರನ್​ಗಳೊಂದಿಗೆ 4 ಓವರ್​ನಲ್ಲಿ ಕೇವಲ 22 ರನ್ ನೀಡಿ ಗಮನ ಸೆಳೆದರು.

  ಈ ನಡುವೆ ಇಶಾನ್ ಕಿಶನ್ ಎರಡು ಜೀವದಾನ ಪಡೆದರು. ಸಿರಾಜ್ ಓವರ್​ನಲ್ಲಿ ವಾಷಿಂಗ್ಟನ್ ಸುಂದರ್ ಇಶಾನ್ ಕಿಶನ್ ಕ್ಯಾಚ್ ಕೈ ಚೆಲ್ಲಿದರೆ, ಹರ್ಷಲ್ ಪಟೇಲ್ ಎಸೆದ 18ನೇ ಓವರ್​ನಲ್ಲಿ ಸಿರಾಜ್ ಸುಲಭ ಕ್ಯಾಚ್ ಬಿಟ್ಟರು. ಇದರ ಬೆನ್ನಲ್ಲೇ ಕಿಶನ್ (28) ಅವರನ್ನು ಎಲ್​ಬಿ ಬಲೆಗೆ ಬೀಳಿಸಿದ ಹರ್ಷಲ್ ಪಟೇಲ್ ಆರ್​ಸಿಬಿಗೆ ಮತ್ತೊಂದು ಯಶಸ್ಸು ತಂದುಕೊಟ್ಟರು.

  19ನೇ ಓವರ್​ನ ಮೊದಲ ಎಸೆತದಲ್ಲೇ ಕೃನಾಲ್ ಬಾರಿಸಿದ ಚೆಂಡು ವಿರಾಟ್ ಕೊಹ್ಲಿ ಕೈಗೆ ತಲುಪಿದರು ಹಿಡಿಯುವಲ್ಲಿ ಆರ್​ಸಿಬಿ ನಾಯಕ ಎಡವಿದರು. ಈ ಓವರ್​ನಲ್ಲಿ ಜೇಮಿಸನ್ 12 ರನ್ ನೀಡಿದರು. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಕೃನಾಲ್ ಪಾಂಡ್ಯ (7) ಡೇನಿಯಲ್ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.  2ನೇ ಎಸೆತದಲ್ಲಿ ಪೊಲಾರ್ಡ್ (7) ಬಾರಿಸಿದ ಚೆಂಡನ್ನು ಬೌಂಡರಿ ಲೈನಲ್ಲಿ ವಾಷಿಂಗ್ಟನ್ ಸುಂದರ್ ಹಿಡಿದರು.

  3ನೇ ಎಸೆತದಲ್ಲಿ ಯಾವುದೇ ರನ್​ ಇಲ್ಲ. 4ನೇ ಎಸೆತದಲ್ಲಿ ಜಾನ್ಸನ್ ಕ್ಲೀನ್ ಬೌಲ್ಡ್, 5ನೇ ಎಸೆತದಲ್ಲೂ ಯಾವುದೇ ರನ್ ನೀಡಿದ ಹರ್ಷಲ್ ಪಟೇಲ್ ಕೊನೆಯ ಎಸೆತದಲ್ಲಿ 1 ರನ್​ ನೀಡಿ 20ನೇ ಓವರ್​ ಅಂತ್ಯಗೊಳಿಸಿದರು.  ಇತ್ತ ಮುಂಬೈ ಇಂಡಿಯನ್ಸ್​ 9 ವಿಕೆಟ್ ಕಳೆದುಕೊಂಡು 159 ರನ್​ಗಳಿಸಿತು. ಆರ್​ಸಿಬಿ ಪರ ಹರ್ಷಲ್ ಪಟೇಲ್ 4 ಓವರ್​ನಲ್ಲಿ 27 ರನ್​ ನೀಡಿ 5 ವಿಕೆಟ್ ಉರುಳಿಸಿ ಮಿಂಚಿದರು. ಹಾಗೆಯೇ ಚೊಚ್ಚಲ ಪಂದ್ಯವಾಡಿದ ಕೈಲ್ ಜೇಮಿಸನ್ 4 ಓವರ್​ನಲ್ಲಿ 27 ರನ್​ ನೀಡಿ 1 ವಿಕೆಟ್ ಪಡೆದರು.  ಮುಂಬೈ ಇಂಡಿಯನ್ಸ್​: ಸ್ಕೋರ್- 159/9

  ಓವರ್- 20

  IPL 2021, MI vs RCB Playing 11: RCB ತಂಡದ ಪ್ರಮುಖ ಆಟಗಾರ ಅಲಭ್ಯ: ಉಭಯ ತಂಡಗಳು ಇಂತಿವೆ

  ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಅತ್ತ 6ನೇ ಬಾರಿ ಚಾಂಪಿಯನ್​ ಪಟ್ಟದ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್​ಗೆ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸುವ ತುಡಿತದಲ್ಲಿದೆ. ಆದರೆ ಮೊದಲ ಪಂದ್ಯದಲ್ಲೇ ಶುಭಾರಂಭ ಮಾಡುವ ಮೂಲಕ ಈ ಬಾರಿ ಕಪ್ ಗೆದ್ದೇ ಗೆಲ್ಲಬೇಕೆಂಬ ಇರಾದೆಯಲ್ಲಿದೆ ಆರ್​ಸಿಬಿ.  ಎರಡೂ ತಂಡಗಳ ಬಲಾಬಲ ನೋಡುವುದಾದರೆ, ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ತಂಡದ್ದೇ ಮೇಲುಗೈ ಎನ್ನಬಹುದು. ಏಕೆಂದರೆ ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 29 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಮುಂಬೈ 19 ಗೆಲುವು ದಾಖಲಿಸಿದರೆ, ಆರ್​ಸಿಬಿ 10 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು ಕಳೆದ ಸೀಸನ್​ನಲ್ಲಿ ಮುಂಬೈ ಆರ್​ಸಿಬಿ ವಿರುದ್ಧ ಒಂದು ಪಂದ್ಯ ಗೆದ್ದುಕೊಂಡರೆ, ಆರ್​ಸಿಬಿ ಮುಂಬೈಯನ್ನು ಸೂಪರ್​ ಓವರ್​ನಲ್ಲಿ ಮಣಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳು ಗೆಲ್ಲಲು ಕಠಿಣ ಪೈಪೋಟಿ ನಡೆಸಬೇಕಾಗಿ ಬರಲಿದೆ.  ಪಂದ್ಯದ ಸಮಯ: ಸಂಜೆ- 7.30

  ನೇರಪ್ರಸಾರ: ಸ್ಟಾರ್ ಸ್ಪೋರ್ಟ್​​ ಚಾನೆಲ್​, ಹಾಟ್​ಸ್ಟಾರ್​
  Published by:zahir
  First published: