IPL 2021, KKR vs MI: ರಸೆಲ್​ ಮಸಲ್ ಮುಂದೆ ಮಂಡಿಯೂರಿದ ಮುಂಬೈ ಬ್ಯಾಟ್ಸ್​ಮನ್​ಗಳು

ಉಭಯ ತಂಡಗಳ ನಡುವಣ ಕದನದ ಅಂಕಿ ಅಂಶಗಳನ್ನು ಗಮನಿಸಿದರೆ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠವಾಗಿದೆ. ಏಕೆಂದರೆ ಇದುವರೆಗೆ ಈ ತಂಡಗಳು 27 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ಗೆಲುವು ದಾಖಲಿಸಿರುವುದು ಕೇವಲ 6 ಬಾರಿ ಮಾತ್ರ. ಹಾಗೆಯೇ ಮುಂಬೈ ಇಂಡಿಯನ್ಸ್ 21 ಬಾರಿ ಜಯಗಳಿಸಿ ಕೆಕೆಆರ್​ ವಿರುದ್ದ ಪಾರುಪತ್ಯ ಸಾಧಿಸಿದೆ.

KKR

KKR

 • Share this:
  ಚೆನ್ನೈನಲ್ಲಿ ನಡೆಯುತ್ತಿರುವ ಐಪಿಎಲ್​ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ತಂಡ ಕೊಲ್ಕತ್ತಾ ನೈಟ್ ರೈಡರ್ಸ್​ಗೆ 153 ರನ್​ಗಳ ಟಾರ್ಗೆಟ್ ನೀಡಿದೆ. ಆ್ಯಂಡ್ರೆ ರಸೆಲ್ ಬೌಲಿಂಗ್ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಮುಂಬೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು 152 ರನ್​ಗಳಿಗೆ ಸರ್ವಪತನ ಕಾಣುವ ಮೂಲಕ ಸಾಧಾರಣ ಸವಾಲು ನೀಡಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡರು.

  ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್​ಗೆ 2ನೇ ಓವರ್​ನಲ್ಲೇ ಸ್ಪಿನ್ನರ್ ವರುಣ್ ಚಕ್ರವರ್ತಿ ಆಘಾತ ನೀಡಿದರು. 2 ರನ್​ಗಳಿಸಿದ್ದ ಕ್ವಿಂಟನ್ ಡಿಕಾಕ್ ವಿಕೆಟ್ ಪಡೆಯುವ ಮೂಲಕ ಕೆಕೆಆರ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಕ್ರೀಸ್​ಗೆ ಆಗಮಿಸಿದ ಸೂರ್ಯಕುಮಾರ್ ಯಾದವ್ ನಾಯಕ ರೋಹಿತ್ ಶರ್ಮಾ ಜೊತೆಗೂಡಿ ಉತ್ತಮ ಬ್ಯಾಟಿಂಗ್ ನಡೆಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆ ಮುಂಬೈ ಮೊತ್ತವು 42ಕ್ಕೆ ಬಂದು ನಿಂತಿತು.

  6 ಓವರ್​ಗಳ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಈ ಜೋಡಿ ಕೇವಲ 37 ಎಸೆತಗಳಲ್ಲಿ ಅರ್ಧಶತಕಗಳ ಜೊತೆಯಾಟ ಪೂರೈಸಿದರು. ಇದರ ಬಳಿಕ ಅಬ್ಬರಿಸಲಾರಂಭಿಸಿದ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು. ಅಲ್ಲದೆ ಮೊದಲ 10 ಓವರ್​ನಲ್ಲಿ ತಂಡದ ಮೊತ್ತವನ್ನು 81ಕ್ಕೆ ತಂದು ನಿಲ್ಲಿಸಿದರು.

  ಹಾಫ್ ಸೆಂಚುರಿ ಬೆನ್ನಲ್ಲೇ ಶಕೀಬ್ ಅಲ್ ಹಸನ್​ಗೆ ವಿಕೆಟ್ ಒಪ್ಪಿಸಿ ಸೂರ್ಯಕುಮಾರ್ ಯಾದವ್ (56) ಹೊರ ನಡೆದರು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಇಶಾನ್ ಕಿಶನ್ (1) ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಔಟಾಗಿ ನಿರ್ಗಮಿಸಿದರು. ಈ ಹಂತದಲ್ಲಿ ರೋಹಿತ್ ಶರ್ಮಾ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಇನಿಂಗ್ಸ್ ಕಟ್ಟುವ ಜವಾಬ್ದಾರಿವಹಿಸಿಕೊಂಡರು. ಅದರಂತೆ 14ನೇ ಓವರ್​ ವೇಳೆಗೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಆದರೆ ಪ್ಯಾಟ್ ಕಮಿನ್ಸ್ ಎಸೆದ 15ನೇ ಓವರ್​ನ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾ (43) ಕ್ಲೀನ್ ಬೌಲ್ಡ್ ಆದರು. ಹಾಗೆಯೇ 17ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯ (15) ಕೂಡ ವಿಕೆಟ್ ಒಪ್ಪಿಸಿದರು.

  17 ಓವರ್​ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್ ಮೊತ್ತವು 5 ವಿಕೆಟ್ ನಷ್ಟಕ್ಕೆ 125 ಆಗಿತ್ತು. ರಸೆಲ್ ಎಸೆದ 18ನೇ ಓವರ್​ನಲ್ಲಿ ಕೀರನ್ ಪೊಲಾರ್ಡ್ (5) ಕೂಡ ಕೀಪರ್ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಮೈದಾನಕ್ಕಿಳಿದ ಮಾರ್ಕೊ ಜಾನ್ಸನ್ ಬಂದ ವೇಗದಲ್ಲೇ ಶೂನ್ಯದೊಂದಿಗೆ ಮರಳಿದರು.

  ಕೊನೆಯ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಕೃನಾಲ್ ಪಾಂಡ್ಯ (24) ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿದರು. 4ನೇ ಎಸೆತದಲ್ಲಿ ಬುಮ್ರಾ ಕೂಡ ವಿಕೆಟ್ ಒಪ್ಪಿಸಿದರು. ಅಂತಿಮ ಎಸೆತದಲ್ಲಿ ರಾಹುಲ್ ಚಹರ್ ವಿಕೆಟ್ ಪಡೆಯುವುದರೊಂದಿಗೆ ಆ್ಯಂಡ್ರೆ ರಸೆಲ್ 5 ವಿಕೆಟ್​ಗಳನ್ನು ಕಬಳಿಸಿದರು. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡವನ್ನು 152 ರನ್​ಗಳಿಗೆ ಆಲೌಟ್ ಮಾಡಿದರು.

  ಕೇವಲ ಎರಡು ಓವರ್ ಎಸೆದ ರಸೆಲ್ 15 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಕೆಕೆಆರ್ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.

  ಉಭಯ ತಂಡಗಳು ಈಗಾಗಲೇ ತಲಾ ಒಂದು ಪಂದ್ಯವನ್ನಾಡಿದ್ದು, ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡ ಎಸ್​ಆರ್​ಹೆಚ್​ ವಿರುದ್ದ​ ಗೆಲುವು ದಾಖಲಿಸಿದರೆ, ಮುಂಬೈ ಇಂಡಿಯನ್ಸ್​ ಆರ್​ಸಿಬಿ ವಿರುದ್ದ ಉದ್ಘಾಟನಾ ಪಂದ್ಯದಲ್ಲಿ ಸೋಲುಂಡಿತ್ತು. ಹೀಗಾಗಿ ಇಂದಿನ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯಲು ರೋಹಿತ್ ಶರ್ಮಾ ಪಡೆ ಸಕಲ ಸಿದ್ದತೆಯಲ್ಲಿದೆ.

  IPL 2021, KKR vs MI Playing 11: ಮುಂಬೈ ಟೀಮ್​ನಲ್ಲಿ 1 ಬದಲಾವಣೆ: ಉಭಯ ತಂಡಗಳು ಹೀಗಿವೆ

  ಇನ್ನು ಉಭಯ ತಂಡಗಳ ನಡುವಣ ಕದನದ ಅಂಕಿ ಅಂಶಗಳನ್ನು ಗಮನಿಸಿದರೆ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠವಾಗಿದೆ. ಏಕೆಂದರೆ ಇದುವರೆಗೆ ಈ ತಂಡಗಳು 27 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ಗೆಲುವು ದಾಖಲಿಸಿರುವುದು ಕೇವಲ 6 ಬಾರಿ ಮಾತ್ರ. ಹಾಗೆಯೇ ಮುಂಬೈ ಇಂಡಿಯನ್ಸ್ 21 ಬಾರಿ ಜಯಗಳಿಸಿ ಕೆಕೆಆರ್​ ವಿರುದ್ದ ಪಾರುಪತ್ಯ ಸಾಧಿಸಿದೆ.
  Published by:zahir
  First published: