• Home
 • »
 • News
 • »
 • ipl
 • »
 • IPL 2021: ಐಪಿಎಲ್ ಆಡಿದ ಯಾವ ವಿದೇಶಿ ಆಟಗಾರರಿಗೆ ತವರಿಗೆ ಮರಳುವುದು ಕಷ್ಟ..?

IPL 2021: ಐಪಿಎಲ್ ಆಡಿದ ಯಾವ ವಿದೇಶಿ ಆಟಗಾರರಿಗೆ ತವರಿಗೆ ಮರಳುವುದು ಕಷ್ಟ..?

IPL 2021

IPL 2021

ಯುಕೆ ಸರ್ಕಾರ ತನ್ನ ನಾಗರಿಕರಿಗೆ ಮಾತ್ರ ಬರಲು ಅವಕಾಶ ನೀಡಿದೆ. ಆದಾಗ್ಯೂ, ಇಂಗ್ಲೆಂಡ್ ತಲುಪಿದ ನಂತರ, ಅವರು 10 ದಿನಗಳವರೆಗೆ ಕಟ್ಟುನಿಟ್ಟಾದ ಕ್ವಾರಂಟೈನ್​ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

 • Share this:

  ಕೊರೋನಾ ವೈರಸ್ ಕಾರಣದಿಂದ ಐಪಿಎಲ್ 2021 ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಇದೀಗ ಐಪಿಎಲ್ ತಂಡಗಳ ಆಟಗಾರರು ಮನೆಗೆ ಮರಳುತ್ತಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮುಂಬೈಗೆ ಮರಳಿದ್ದಾರೆ. ವಿದೇಶಿ ಆಟಗಾರರು ಇನ್ನೂ ಭಾರತದಲ್ಲಿಯೇ ಇದ್ದರೂ, ಶೀಘ್ರದಲ್ಲೇ ಮರಳುವ ವಿಶ್ವಾಸದಲ್ಲಿದ್ದಾರೆ. ಆಟಗಾರರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ತನ್ನ ಕಡೆಯಿಂದ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಬಿಸಿಸಿಐ ಹೇಳಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಆಟಗಾರರನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಬಿಸಿಸಿಐ ಯೋಜನೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.


  ಮತ್ತೊಂದೆಡೆ, ಮೇ 15 ರವರೆಗೆ ಭಾರತದಿಂದ ಬರುವ ವಿಮಾನಗಳ ನಿಷೇಧದಲ್ಲಿ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ಆಸ್ಟ್ರೇಲಿಯಾ ಸ್ಪಷ್ಟವಾಗಿ ಹೇಳಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘ ಜಂಟಿ ಹೇಳಿಕೆಯಲ್ಲಿ, "ಭಾರತದಿಂದ ಬರುವ ವಿಮಾನಗಳನ್ನು ಮೇ 15 ರವರೆಗೆ ನಿಷೇಧಿಸುವ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಮತ್ತು ಯಾವುದೇ ರಿಯಾಯಿತಿಗಳನ್ನು ಪಡೆಯುವುದಿಲ್ಲ" ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹಾಕ್ಲೆ ಬುಧವಾರ ಹೇಳಿದ್ದಾರೆ. ಇತ್ತ ಆಸ್ಟ್ರೇಲಿಯಾದ ಆಟಗಾರರಿಗೆ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮಾಡಲು ಬಿಸಿಸಿಐ ಮುಂದಾಗಿದೆ. ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆಸೀಸ್​ ಆಟಗಾರರು ಮನೆಗೆ ಹಿಂದಿರುಗುವ ಮೊದಲು ಮಾಲ್ಡೀವ್ಸ್ ಅಥವಾ ಶ್ರೀಲಂಕಾದಲ್ಲಿ ಉಳಿಯುವ ನಿರೀಕ್ಷೆಯಿದೆ. ಯಾವೆಲ್ಲಾ ದೇಶಗಳ ಆಟಗಾರರ ತವರಿಗೆ ಮರಳಲು ಕಷ್ಟವಾಗಲಿದೆ ಎಂದು ನೋಡುವುದಾದರೆ..


  ಆಸ್ಟ್ರೇಲಿಯಾ: ಭಾರತದಿಂದ ಬರುವ ಪ್ರಯಾಣಿಕರಿಗೆ ಮೇ 3 ರಿಂದ ಮೇ 14 ರವರೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಈ ನಿಷೇಧವನ್ನು ಭೇದಿಸುವ ಅಥವಾ ಬೇರೆ ಯಾವುದೇ ದೇಶದ ಮೂಲಕ ರಹಸ್ಯವಾಗಿ ಆಸ್ಟ್ರೇಲಿಯಾವನ್ನು ತಲುಪುವ ಪ್ರಯಾಣಿಕರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 50 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.


  ಇಂಗ್ಲೆಂಡ್: ಯುಕೆ ಸರ್ಕಾರ ತನ್ನ ನಾಗರಿಕರಿಗೆ ಮಾತ್ರ ಬರಲು ಅವಕಾಶ ನೀಡಿದೆ. ಆದಾಗ್ಯೂ, ಇಂಗ್ಲೆಂಡ್ ತಲುಪಿದ ನಂತರ, ಅವರು 10 ದಿನಗಳವರೆಗೆ ಕಟ್ಟುನಿಟ್ಟಾದ ಕ್ವಾರಂಟೈನ್​ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಂಗ್ಲೆಂಡ್‌ಗೆ ವಿಮಾನ ಏರುವ ಮೊದಲು ಆಟಗಾರರು ಎರಡು ಬಾರಿ ಕೋವಿಡ್ -19 ಟೆಸ್ಟ್‌ನಲ್ಲಿ ನೆಗೆಟಿವ್ ಫಲಿತಾಂಶ ಹೊಂದಿರಬೇಕು. ಜೋಸ್ ಬಟ್ಲರ್ ಮತ್ತು ಜಾನಿ ಬೈರ್‌ಸ್ಟೋವ್ ಸೇರಿದಂತೆ ಇಂಗ್ಲೆಂಡ್‌ನ 11 ಆಟಗಾರರಲ್ಲಿ ಎಂಟು ಮಂದಿ ಬುಧವಾರ ಮನೆಗೆ ಮರಳಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ನಾಯಕ ಇಯಾನ್ ಮೋರ್ಗನ್, ಡೇವಿಡ್ ಮಲಾನ್ ಮತ್ತು ಕ್ರಿಸ್ ಜೋರ್ಡನ್ ಭಾರತವನ್ನು ತೊರೆಯುವ ನಿರೀಕ್ಷೆಯಿದೆ.


  ನ್ಯೂಜಿಲೆಂಡ್: ಇಲ್ಲಿನ ಸರ್ಕಾರ ಕೂಡ ಇಂಗ್ಲೆಂಡ್‌ನಂತೆ ಕೊರೋನಾ ನಿಯಮಗಳನ್ನು ಜಾರಿಗೆ ತಂದಿದೆ. ಹೀಗಾಗಿ ಭಾರತದಿಂದ ನ್ಯೂಜಿಲೆಂಡ್​ಗೆ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪರ್ಯಾಯ ಮಾರ್ಗದ ಮೂಲಕ ತೆರಳಬೇಕಾಗುತ್ತದೆ.


  ದಕ್ಷಿಣ ಆಫ್ರಿಕಾ: ಭಾರತದಿಂದ ಬರುವ ವಿಮಾನಗಳಿಗೆ ಇಲ್ಲಿನ ಸರ್ಕಾರ ಯಾವುದೇ ನಿರ್ಬಂಧ ಹೇರಿಲ್ಲ. ಆಟಗಾರರು ಬೇಷರತ್ತಾಗಿ ಮನೆಗೆ ಮರಳಬಹುದು.


  ಬಾಂಗ್ಲಾದೇಶ: ಭಾರತದಿಂದ ಬಾಂಗ್ಲಾದೇಶಕ್ಕೆ ವಿಮಾನಯಾನ ನಿಷೇಧಿಸಲಾಗಿದೆ. ಇದಾಗ್ಯೂ ಭೂ ಮಾರ್ಗದ ಮೂಲಕ ಪ್ರಯಾಣಿಸಬಹುದು. ಅಲ್ಲದೆ ಭಾರತದಿಂದ ಬರುವವರು 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಬೇಕಾಗಿರುವುದು ಕಡ್ಡಾಯ.


  ಭಾರತದಲ್ಲಿ ಕೊರೋನಾ ಪ್ರಕರಣ ನಿರಂತರವಾಗಿ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಯುಎಇ ಸರ್ಕಾರವು ಪ್ರಯಾಣ ನಿಷೇಧದ ಅವಧಿಯನ್ನು ಅನಿರ್ದಿಷ್ಟವಾಗಿ ವಿಸ್ತರಿಸಿದೆ. ಇತ್ತ ಅಫ್ಘಾನಿಸ್ತಾನ ವಿಧಿಸಿರುವ ನಿರ್ಬಂಧಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇಲ್ಲ. ಹೀಗಾಗಿ ಭಾರತದಿಂದ ಯುಎಇಗೆ ತೆರಳಿ ತಮ್ಮ ದೇಶಗಳಿಗೆ ತೆರಳುವುದು ಕೂಡ ಕಷ್ಟಸಾಧ್ಯ ಎನ್ನಲಾಗಿದೆ.

  Published by:zahir
  First published: