ಅಹಮದಾಬಾದ್ನಲ್ಲಿ ನಡೆದ ಐಪಿಎಲ್ನ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ರನ್ನಿಂದ ರೋಚಕ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಆರ್ಸಿಬಿ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಂತಿಮ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಒಂದು ಹಂತದಲ್ಲಿ ನಾನು ಪಂದ್ಯ ಕೈ ತಪ್ಪಿ ಹೋಯ್ತು ಎಂದೇ ಭಾವಿಸಿದ್ದೆ. ಆದರೆ ಕೊನೆಯ ಓವರ್ನ್ನು ಸಿರಾಜ್ ನೀಡಿದಾಗ ಎಲ್ಲೋ ಒಂದು ಕಡೆ ಗೆಲ್ಲುತ್ತೇವೆ ಎಂಬ ನಂಬಿಕೆಯಿತ್ತು. ಕೊನೆಯಲ್ಲಿ ಎರಡು ಬೌಂಡರಿ ನೀಡಿದರೂ ಅಂತಿಮವಾಗಿ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದೆವು ಎಂದು ಕೊಹ್ಲಿ ತಿಳಿಸಿದ್ದಾರೆ.
ಕಳೆದ ಪಂದ್ಯದಲ್ಲಿ ಸೋತಿದ್ದರೂ ಈ ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನವನ್ನೇ ನೀಡಿದ್ದೆವು. ಕೇವಲ 30 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮ್ಯಾಕ್ಸ್ವೆಲ್, ರಜತ್ ಪಾಟಿದಾರ್ ಹಾಗೂ ಎಬಿ ಡಿವಿಲಿಯರ್ಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಬಳಿಕ ಬೌಲರುಗಳೂ ಕೂಡ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ಅಂತಿಮ 4 ಓವರ್ನಲ್ಲಿ ಹೆಟ್ಮೆಯರ್ ಅಬ್ಬರಿಸಿದರೂ, ಕೊನೆಯ ಓವರ್ ಮೂಲಕ ನಾವು ಗೆಲ್ಲುವಲ್ಲಿ ಯಶಸ್ವಿಯಾದೆವು ಎಂದು ಕೊಹ್ಲಿ ತಿಳಿಸಿದ್ದಾರೆ.
ನಾವು 160-165 ರನ್ ಸುಲಭ ಗುರಿಯಾಗುತ್ತೆ ಅಂದುಕೊಂಡಿದ್ದೆವು. ಹೀಗಾಗಿ ಅದಕ್ಕಿಂತ 10 ರನ್ ಜಾಸ್ತಿ ಬರಬೇಕು ಎಂದು ಬಯಸಿದ್ದೆವು. ಅದರಂತೆ 171 ರನ್ಗಳು ಮೂಡಿಬಂದವು. ಟಾಸ್ ಸೋತರೂ ಸೆಕೆಂಡ್ ಇನಿಂಗ್ಸ್ ಬೌಲಿಂಗ್ ವೇಳೆ ಇಬ್ಬನಿ ಇಲ್ಲದಿರುವುದು ನಮಗೆ ಅನುಕೂಲವಾಯಿತು. ರಿಷಭ್ ಪಂತ್ ಇಬ್ಬನಿ ಇರಲಿದೆ ಎಂದೇ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದರು. ಆದರೆ ಇಬ್ಬನಿ ಇಲ್ಲದಿದ್ದಕ್ಕೆ ದೊಡ್ಡ ಥ್ಯಾಂಕ್ಸ್ ಹೇಳುತ್ತೇನೆ. ಹೀಗಾಗಿ ಡ್ರೈ ಬಾಲ್ನಲ್ಲೇ ಬೌಲಿಂಗ್ ಮಾಡಲು ಆರ್ಸಿಬಿಗೆ ಸಾಧ್ಯವಾಯಿತು ಎಂದು ಕೊಹ್ಲಿ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಆರು ಬೌಲರುಗಳನ್ನು ಬಳಸಿಕೊಂಡಿರುವ ಬಗ್ಗೆ ಮಾತನಾಡಿದ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ರನ್ನು ನಾನು 7ನೇ ಆಯ್ಕೆಯಾಗಿ ಬಳಸಲು ಬಯಸುತ್ತೇನೆ. ಆದರೆ ಅದರ ಅಗತ್ಯತೆ ಇನ್ನೂ ಬಂದಿಲ್ಲ ಎಂದು ಕೊಹ್ಲಿ ಹೇಳಿದರು. ಅಲ್ಲದೆ ಈ ಗೆಲುವಿನ ಸಂಪೂರ್ಣ ಕ್ರೆಡಿಟ್ ಎಬಿ ಡಿವಿಲಿಯರ್ಸ್ಗೆ ಸಲ್ಲುತ್ತೆ. ಒಂದಾರ್ಥದಲ್ಲಿ ಆತ ನಮ್ಮ ತಂಡದ ಆಸ್ತಿ. ಏಕೆಂದರೆ ಕಳೆದ ಐದು ತಿಂಗಳಿಂದ ಯಾವುದೇ ಮ್ಯಾಚ್ ಆಡದೇ ಎಬಿಡಿ ಅದ್ಭುತ ಬ್ಯಾಟಿಂಗ್ ಮೂಲಕ ಗೆಲುವು ತಂದುಕೊಟ್ಟಿದ್ದಾರೆ. ಮುಂದೆಯೂ ಕೂಡ ಅವರ ಅದ್ಭುತ ಪ್ರದರ್ಶನ ನೋಡಲಿದ್ದೀರಿ ಎಂದು ಕೊಹ್ಲಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ