ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 12ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೆಣಸಲಿದೆ. ಉಭಯ ತಂಡಗಳು ಈಗಾಗಲೇ ಗೆಲುವಿನ ಖಾತೆ ತೆರೆದಿದೆ. ಆದರೆ ಆಡಿದ ಎರಡು ಪಂದ್ಯಗಳಲ್ಲಿ ಒಂದೊಂದು ಸೋಲನುಭವಿಸುವ ಮೂಲಕ ಅಂಕ ಪಟ್ಟಿಯಲ್ಲಿ 4ನೇ ಮತ್ತು 5ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಗೆಲುವಿನ ಮೂಲಕ ಸಿಎಸ್ಕೆ ನಾಲ್ಕನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿಯುವ ಇರಾದೆಯಲ್ಲಿದೆ. ಅತ್ತ ಬಲಿಷ್ಠ ಚೆನ್ನೈ ಪಡೆಗೆ ಸೋಲುಣಿಸಿ 5ನೇ ಸ್ಥಾನದಿಂದ ಜಿಗಿಯುವ ವಿಶ್ವಾಸದಲ್ಲಿದೆ ರಾಜಸ್ಥಾನ್ ರಾಯಲ್ಸ್.
ಎರಡೂ ತಂಡಗಳಲ್ಲೂ ಉತ್ತಮ ಆಲ್ರೌಂಡರ್ಗಳಿದ್ದು, ಬ್ಯಾಟಿಂಗ್ ಅಥವಾ ಬೌಲಿಂಗ್ನಲ್ಲಿ ಮಿಂಚುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಸಿಎಸ್ಕೆ ಪರ ಸುರೇಶ್ ರೈನಾ, ಫಾಫ್ ಡುಪ್ಲೆಸಿಸ್, ಸ್ಯಾಮ್ ಕರನ್ ಹಾಗೂ ಮೊಯೀನ್ ಅಲಿ ಮಿಂಚಿದರೆ, ರಾಜಸ್ಥಾನ್ ಪರ ಸಂಜು ಸ್ಯಾಮ್ಸನ್, ಡೇವಿಡ್ ಮಿಲ್ಲರ್ ಹಾಗೂ ಕ್ರಿಸ್ ಮೋರಿಸ್ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ಹಾಗೆಯೇ ಬೌಲಿಂಗ್ನಲ್ಲಿ ಆರ್ಆರ್ ಪರ ಜಯದೇವ್ ಉನಾದ್ಕಟ್, ಮುಸ್ತಾಫಿಜುರ್ ರೆಹಮಾನ್ ಹಾಗೂ ಚೇತನ್ ಸಕರಿಯಾ ರಾಜಸ್ಥಾನ್ ರಾಯಲ್ಸ್ ಪರ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಇತ್ತ ಪಂಜಾಬ್ ಪರ ಅದ್ಭುತ ಬೌಲಿಂಗ್ ಮೂಲಕ ಮಿಂಚಿರುವ ದೀಪಕ್ ಚಹರ್ ರಾಜಸ್ಥಾನ್ ರಾಯಲ್ಸ್ಗೂ ಕಠಿಣ ಸವಾಲಾಗುವುದರಲ್ಲಿ ಡೌಟೇ ಇಲ್ಲ.'
ಇದಾಗ್ಯೂ ಉಭಯ ತಂಡಗಳ ಆರಂಭಿಕ ಆಟಗಾರರು ವಿಫಲರಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಓಪನರ್ ರುತುರಾಜ್ ಗಾಯಕ್ವಾಡ್ ಅವರಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಅವರ ಸ್ಥಾನದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಹಾಗೆಯೇ ರಾಜಸ್ಥಾನ್ ರಾಯಲ್ಸ್ ಪರ ಇನಿಂಗ್ಸ್ ಆರಂಭಿಸುತ್ತಿರುವ ಮನನ್ ವೋಹ್ರಾ ಕೂಡ ಎರಡು ಇನಿಂಗ್ಸ್ಗಳಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ಎಡವಿದ್ದಾರೆ. ಹೀಗಾಗಿ ಸಿಎಸ್ಕೆ ವಿರುದ್ದದ ಪಂದ್ಯದಲ್ಲಿ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಸಬಹುದು. ಇದರ ಹೊರತಾಗಿ ಉಭಯ ತಂಡಗಳಲ್ಲಿ ಯಾವುದೇ ಬದಲಾವಣೆ ಕಂಡು ಬರುವ ಸಾಧ್ಯತೆ ಕಡಿಮೆ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ:-
ಚೆನ್ನೈ ಸೂಪರ್ ಕಿಂಗ್ಸ್ (ಸಂಭವನೀಯ ಇಲೆವೆನ್): ರಾಬಿನ್ ಉತ್ತಪ್ಪ, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್. ಧೋನಿ (ನಾಯಕ), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಮೊಯೀನ್ ಅಲಿ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ದೀಪಕ್ ಚಹರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ