IPL 2021, CSK vs RCB: ಆರ್​ಸಿಬಿ ವಿರುದ್ದ ಬೃಹತ್ ಮೊತ್ತ ಪೇರಿಸಿದ ಸಿಎಸ್​ಕೆ

ಆರ್​ಸಿಬಿ-ಸಿಎಸ್​ಕೆ 26 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ 16 ಬಾರಿ ಗೆಲ್ಲುವ ಮೂಲಕ ಸಿಎಸ್​ಕೆ-ಆರ್​ಸಿಬಿ ವಿರುದ್ದ ಪಾರುಪತ್ಯ ಸಾಧಿಸಿದೆ. ಇದಾಗ್ಯೂ ಆರ್​ಸಿಬಿ ಚೆನ್ನೈ ವಿರುದ್ದ 9 ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

CSK vs RCB

CSK vs RCB

  • Share this:
    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

    ಅದರಂತೆ ಇನಿಂಗ್ಸ್ ಆರಂಭಿಸಿದ ಫಾಫ್ ಡುಪ್ಲೆಸಿಸ್​ ಹಾಗೂ ರುತುರಾಜ್ ಗಾಯಕ್ವಾಡ್ ಸಿಎಸ್​ಕೆ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದರು. ಆರಂಭದಿಂದಲೇ ಅಬ್ಬರಿಸಲಾರಂಭಿಸಿದ ಡುಪ್ಲೆಸಿಸ್​ ಪವರ್​ಪ್ಲೇನಲ್ಲಿ 3 ಬೌಂಡರಿ 1 ಸಿಕ್ಸರ್ ಸಿಡಿಸಿದರೆ, ಗಾಯಕ್ವಾಡ್ 4 ಆಕರ್ಷಕ ಫೋರ್ ಬಾರಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್​ ಮೊತ್ತ 51ಕ್ಕೇರಿತು.

    9 ಓವರ್​ನಲ್ಲಿ 74 ರನ್​ಗಳ ಜೊತೆಯಾಟವಾಡಿದ ಆರಂಭಿಕ ಜೋಡಿಯನ್ನು ವೇರ್ಪಡಿಸುವಲ್ಲಿ ಕೊನೆಗೂ ಸ್ಪಿನ್ನರ್ ಚಹಲ್ ಯಶಸ್ವಿಯಾದರು. ಚಹಲ್ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ರುತುರಾಜ್ ಗಾಯಕ್ವಾಡ್ (33) ಜೇಮಿಸನ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು.

    ಈ ಹಂತದಲ್ಲಿ ಜೊತೆಗೂಡಿದ ಡುಪ್ಲೆಸಿಸ್-ರೈನಾ 13ನೇ ಓವರ್​ನಲ್ಲಿ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದರು. ಅಲ್ಲದೆ 40 ಎಸೆತಗಳಲ್ಲಿ ಫಾಫ್ ಡುಪ್ಲೆಸಿಸ್ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದರ ಬೆನ್ನಲ್ಲೇ ಹರ್ಷಲ್ ಪಟೇಲ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ರೈನಾ (24) ನಿರ್ಗಮಿಸಿದರು. ಮರು ಎಸೆತದಲ್ಲೇ ಡುಪ್ಲೆಸಿಸ್ (50) ಕೂಡ ಡೇನಿಯಲ್ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿ ಔಟಾದರು.

    ಈ ವೇಳೆ ಕ್ರೀಸ್​ಗೆ ಆಗಮಿಸಿದ ರವೀಂದ್ರ ಜಡೇಜಾ ನೀಡಿದ ಕ್ಯಾಚ್​​ನ್ನು ಡೇನಿಯಲ್ ಕ್ರಿಶ್ಚಿಯನ್ ಕೈಚೆಲ್ಲಿದರು. ಆ ಬಳಿಕ ಜೊತೆಗೂಡಿದ ಅಂಬಾಟಿ ರಾಯುಡು ಹಾಗೂ ಜಡ್ಡು ಸಿಎಸ್​ಕೆ ಮೊತ್ತವನ್ನು ಹೆಚ್ಚಿಸುತ್ತಾ ಹೋದರು. ಆದರೆ 17ನೇ ಓವರ್​ನಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ಅಂಬಾಟಿ ರಾಯುಡು (14) ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದರು.

    ಹರ್ಷಲ್ ಪಟೇಲ್ ಎಸೆದ ಕೊನೆಯ ಓವರ್​ನ ಮೊದಲೆರಡು ಎಸೆತಗಳಲ್ಲಿ ಜಡೇಜಾ ಬ್ಯಾಕ್ ಟು ಬ್ಯಾಕ್ ಸಿಕ್ಸರ್​ ಸಿಡಿಸಿದರು. 3ನೇ ಎಸೆತ ನೋಬಾಲ್+ಸಿಕ್ಸರ್.  ಮತ್ತೆ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಜಡೇಜಾ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 4ನೇ ಎಸೆತದಲ್ಲಿ 2 ರನ್. 5ನೇ ಎಸೆತದಲ್ಲಿ ಸಿಕ್ಸರ್. ಕೊನೆಯ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಜಡೇಜಾ ಒಂದೇ ಓವರ್​ನಲ್ಲಿ 37 ರನ್​ ಕಲೆಹಾಕಿದರು. ಇದರೊಂದಿಗೆ ಸಿಎಸ್​ಕೆ ಮೊತ್ತ 4 ವಿಕೆಟ್ ನಷ್ಟಕ್ಕೆ 191ಕ್ಕೆ ಬಂದು ನಿಂತಿತು.

    ಸ್ಕೋರ್: 191/4

    ಓವರ್: 20

    ಉಭಯ ತಂಡಗಳು ಈಗಾಗಲೇ 4 ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಜಯಗಳಿಸುವ ಮೂಲಕ ಆರ್​ಸಿಬಿ ಪಾಯಿಂಟ್​ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಮೊದಲು ಸೋಲಿನ ಬಳಿಕ ಬಲಿಷ್ಠವಾಗಿ ಕಂಬ್ಯಾಕ್ ಮಾಡಿರುವ ಸಿಎಸ್​ಕೆ ಸತತ ಮೂರು ಗೆಲುವಿನೊಂದಿಗೆ 2ನೇ ಸ್ಥಾನದಲ್ಲಿದೆ. ಹೀಗಾಗಿ ಭಾನುವಾರದ ಪಂದ್ಯದಲ್ಲಿ ಸಿಎಸ್​ಕೆ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆದರೆ ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

    CSK vs RCB Playing 11: ಆರ್​ಸಿಬಿ ತಂಡದಲ್ಲಿ 2 ಪ್ರಮುಖ ಬದಲಾವಣೆ: ಉಭಯ ತಂಡಗಳು ಹೀಗಿವೆ

    ಈ ಹಿಂದಿನ ಅಂಕಿ ಅಂಶಗಳನ್ನು ನೋಡುವುದಾದರೆ ಆರ್​ಸಿಬಿ-ಸಿಎಸ್​ಕೆ 26 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ 16 ಬಾರಿ ಗೆಲ್ಲುವ ಮೂಲಕ ಸಿಎಸ್​ಕೆ-ಆರ್​ಸಿಬಿ ವಿರುದ್ದ ಪಾರುಪತ್ಯ ಸಾಧಿಸಿದೆ. ಇದಾಗ್ಯೂ ಆರ್​ಸಿಬಿ ಚೆನ್ನೈ ವಿರುದ್ದ 9 ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಸೀಸನ್​ನಲ್ಲಿ ಆರ್​ಸಿಬಿ-ಸಿಎಸ್​ಕೆ ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಹಾಗೆಯೇ ಕೊನೆಯ 5 ಮುಖಾಮುಖಿಗಳನ್ನು ನೋಡುವುದಾದರೆ ಸಿಎಸ್​ಕೆ ಆರ್​ಸಿಬಿ ವಿರುದ್ದ 3 ರಲ್ಲಿ ಜಯ ಸಾಧಿಸಿದೆ. ಇನ್ನು ತಟಸ್ಥ ಸ್ಥಳಗಳಲ್ಲಿ ಆಡಲಾದ 10 ಪಂದ್ಯಗಳಲ್ಲಿ ಸಿಎಸ್​ಕೆ 6 ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
    Published by:zahir
    First published: