ಕೊರೋನಾ ಕಾರಣದಿಂದ ಐಪಿಎಲ್ 2021 ಅನ್ನು ಮುಂದೂಡಲಾಯಿತು. ಇದುವರೆಗೆ ಲೀಗ್‌ನ 29 ಪಂದ್ಯಗಳನ್ನು ಆಡಲಾಗಿದ್ದು, ಇನ್ನು ಫೈನಲ್ ಸೇರಿದಂತೆ 31 ಪಂದ್ಯಗಳು ನಡೆಯಬೇಕಿತ್ತು. ಇದಾಗ್ಯೂ ದಿಢೀರಣೆ ಟೂರ್ನಿಯನ್ನು ಮುಂದೂಡಲು ಕಾರಣ ಆಟಗಾರರು ಕೊರೋನಾ ಸೋಂಕಿಗೆ ಒಳಗಾಗಿರುವುದು. ಇದಕ್ಕೂ ಮುನ್ನವೇ ಭಾರತದಲ್ಲಿನ ಬಯೋಬಬಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಆರ್ಸಿಬಿ ಆಟಗಾರರಾದ ಆ್ಯಡಂ ಝಂಪಾ ಹಾಗೂ ಕೇನ್ ರಿಚರ್ಡ್ಸನ್ ಟೂರ್ನಿಯನ್ನು ತೊರೆದಿದ್ದರು. ಅಲ್ಲದೆ ರಾಜಸ್ಥಾನ್ ಆಟಗಾರರಾದ ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಆ್ಯಂಡ್ರ್ಯೂ ಟೈ ಸಹ ಅರ್ಧದಲ್ಲೇ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ ಉಳಿದ ವಿದೇಶಿ ಆಟಗಾರರು ತವರಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ.
ಈ ಬಾರಿಯ ಐಪಿಎಲ್ಗೆ ಆರಂಭದಿಂದಲೇ ಕೋರೋನಾಂತಕ ಇದ್ದಿದ್ದರೂ, ಬಿಸಿಸಿಐ ಸಕಲ ಮುಂಜಾಗೃತೆ ತೆಗೆದುಕೊಂಡಿತ್ತು. ಇದಾಗ್ಯೂ ಒಂದೇ ದಿನದಲ್ಲಿ ನಾಲ್ಕು ಆಟಗಾರರಲ್ಲಿ ಸೋಂಕಿಗೆ ಒಳಗಾಗಿರುವುದು ಬಿಸಿಸಿಐಯನ್ನು ಚಿಂತೆಗೆ ದೂಡಿತ್ತು. ಅಲ್ಲದೆ ಕೊರೋನಾ ಸವಾಲಿನೊಂದಿಗೆ ಐಪಿಎಲ್ ಅನ್ನು ಮುಂದುವರೆಸುವ ನಿರ್ಧಾರದಿಂದ ಹಿಂದೆ ಸರಿಯುವ ತೀರ್ಮಾನಕ್ಕೆ ಬರಲಾಯಿತು.
ಏಕೆಂದರೆ ಇಲ್ಲಿಯವರೆಗೂ ಐಪಿಎಲ್ನಲ್ಲಿ 11 ಮಂದಿ ಸೋಂಕಿಗೆ ಒಳಗಾಗಿದ್ದರು. ಆರಂಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ನಿತೀಶ್ ರಾಣಾ ಸೋಂಕಿಗೆ ಒಳಗಾಗಿದ್ದರೆ, ಅದರ ಬೆನ್ನಲ್ಲೇ ಆರ್ಸಿಬಿ ಆರಂಭಿಕ ದೇವದತ್ ಪಡಿಕ್ಕಲ್ ಅವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಕೊರೋನಾಗೆ ತುತ್ತಾಗಿದ್ದರು. ಈ ಮೂವರು ಆ ಬಳಿಕ ಚೇತರಿಸಿಕೊಂಡು ಟೂರ್ನಿಯಲ್ಲಿ ಮುಂದುವರೆದಿದ್ದರು.
ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನ್ರಿಕ್ ನೋಕಿಯಾ ಹಾಗೂ ಆರ್ಸಿಬಿಯ ಡೇನಿಯಲ್ ಸ್ಯಾಮ್ಸ್ ಅವರಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಇವರು ಕೂಡ ಚೇತರಿಸಿಕೊಂಡು ಟೂರ್ನಿಯಲ್ಲಿ ಮುಂದುವರೆಯುತ್ತಿದ್ದ ಬೆನ್ನಲ್ಲೇ ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಅವರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಎಲ್ಲರನ್ನು ದಂಗು ಬಡಿಸಿತ್ತು. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಅವರಲ್ಲೂ ಸೋಂಕಿ ಲಕ್ಷಣಗಳು ಕಂಡು ಬಂದಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ