ದುಬೈ, ಸೆ. 19: ಋತುರಾಜ್ ಗಾಯಕ್ವಡ್ (Ruturaj Gaikwad) ಅವರ ಅಮೋಘ ಬ್ಯಾಟಿಂಗ್ ಹಾಗೂ ಡ್ವೇನ್ ಬ್ರಾವೋ (Dwayne Bravo) ಅವರ ಆಲ್ರೌಂಡ್ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ (Chennai Super Kings) ಮುಂಬೈ (Mumbai Indians) ವಿರುದ್ಧದ ಐಪಿಎಲ್ ಎರಡನೇ ಲೆಗ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿತು. ಮೂವರು ಟಾಪ್ ಆಟಗಾರರು ಶೂನ್ಯ ಸುತ್ತಿದರೂ ಗಾಯಕ್ವಡ್ ಅವರ ಅದ್ಭುತ ಬ್ಯಾಟಿಂಗ್ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 156 ರನ್ಗಳ ಉತ್ತಮ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಗೆಲ್ಲಲು 157 ರನ್ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ದಡ ಮುಟ್ಟಲು ತಡವರಿಸಿತು. ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗಳ ಓಟಕ್ಕೆ ಚೆನ್ನೈ ಬೌಲರ್ಗಳು ಕಡಿವಾಣ ಹಾಕಿದರು. ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಮೊಯೀನ್ ಅಲಿ ಅವರು ಮುಂಬೈ ಬ್ಯಾಟುಗಾರರನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಬ್ಯಾಟಿಂಗ್ನಲ್ಲಿ ಗಾಯಕ್ವಡ್ ಜೊತೆ ಉತ್ತಮ ಜೊತೆಯಾಟ ನೀಡಿದ್ದ ಡ್ವೇನ್ ಬ್ರಾವೋ 3 ವಿಕೆಟ್ ಪಡೆದು ಸಿಎಸ್ಕೆ ಗೆಲುವಿನ ರೂವಾರಿಗಳಲ್ಲೊಬ್ಬರೆನಿಸಿದರು.
ಇದಕ್ಕೆ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ರನ್ಗೆ 3 ವಿಕೆಟ್ ಹಾಗೂ 24 ರನ್ಗೆ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿ ತಲುಪಿತು. ಫ್ಯಾಫ್ ಡುಪ್ಲೆಸಿಸ್, ಮೊಯೀನ್ ಅಲಿ ಮತ್ತು ಅಂಬಾಟಿ ರಾಯುಡು ಶೂನ್ಯಕ್ಕೆ ಔಟಾದರು. ಸುರೇಶ್ ರೈನಾ ಮತ್ತು ಎಂಎಸ್ ಧೋನಿ ಕೂಡ ಎರಡಂಕಿ ಮೊತ್ತ ದಾಖಲಿಸಲಿಲ್ಲ. ಈ ವೇಳೆ ಆರಂಭಿಕರಾಗಿ ಬಂದ ಋತುರಾಜ್ ಗಾಯಕ್ವಡ್ ಮಾತ್ರ ಹೆಬ್ಬಂಡೆಯಂತೆ ನಿಂತಿದ್ದರು. ಐದನೇ ವಿಕೆಟ್ಗೆ ಜೊತೆಯಾದ ರವೀಂದ್ರ ಜಡೇಜಾ ಮತ್ತು ಗಾಯಕ್ವಡ್ ಇಬ್ಬರೂ 81 ರನ್ ಸೇರಿಸಿದರು. ಬಳಿಕ ಡ್ವೇನ್ ಬ್ರಾವೋ ಮತ್ತು ಗಾಯಕ್ವಡ್ 6ನೇ ವಿಕೆಟ್ಗೆ 39 ರನ್ ಅಮೂಲ್ಯ ಜೊತೆಯಾದಲ್ಲಿ ಭಾಗಿಯಾದರು. ಋತುರಾಜ್ ಗಾಯಕ್ವಡ್ ಕೇವಲ 58 ಬಾಲ್ನಲ್ಲಿ ಅಜೇಯ 88 ರನ್ ಗಳಿಸಿದರು. ಇವೆರಡು ಉತ್ತಮ ಜೊತೆಯಾಟದ ಫಲವಾಗಿ ಚೆನ್ನೈ ತಂಡ 156 ರನ್ ಗಳಿಸಿತು. ಗಾಯಕ್ವಡ್ ಅವರ ಈ ಅಜೇಯ 88 ರನ್ ಐಪಿಎಲ್ನಲ್ಲಿ ಅವರ ಗರಿಷ್ಠ ಸ್ಕೋರೆನಿಸಿದೆ. ಅವರ ಈ ಆಟಕ್ಕೆ ಪಂದ್ಯ ಪುರುಷೋತ್ತಮ ಗೌರವ ಕೂಡ ಲಭಿಸಿತು.
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ನಲ್ಲಿ ಹೈಲೈಟ್ ಆಗಿದ್ದು ಸೌರಬ್ ತಿವಾರಿ ಅವರ ಆಟ ಮಾತ್ರವೇ. ಅಜೇಯ ಅರ್ಧಶತಕ ಭಾರಿಸಿದ ತಿವಾರಿ ಹೊರತುಪಡಿಸಿ ಉಳಿದ ಸಿಎಸ್ಕೆ ಆಟಗಾರರು ಉತ್ತಮ ಪ್ರತಿರೋಧ ತೋರಲಿಲ್ಲ. ಚೆನ್ನೈ ತಂಡದ ನಾಯಕ ಧೋನಿ ಅವರು ತಮ್ಮ ಬೌಲರ್ಗಳನ್ನ ಸಮರ್ಪಕವಾಗಿ ಬಳಸಿಕೊಂಡರು.
ಟೂರ್ನಿಯ ಆರಂಭದಲ್ಲಿ ಯಾವಾಗಲೂ ಹಿನ್ನಡೆ ಕಾಣುವ ಮುಂಬೈ ಇಂಡಿಯನ್ಸ್ ತಂಡ ನಂತರದ ಪಂದ್ಯಗಳಲ್ಲಿ ಲಯಕ್ಕೆ ಮರಳುತ್ತದೆ. ಇದು ಅನೇಕ ಐಪಿಎಲ್ ಸೀಸನ್ನಲ್ಲಿ ಕಂಡಿರುವ ಅಂಶ. ಈ ಐಪಿಎಲ್ನ ಮೊದಲ ಲೆಗ್ನಲ್ಲೂ ಮುಂಬೈನದ್ದು ಸ್ಲೋ ಸ್ಟಾರ್ಟ್ ಆಗಿತ್ತು. ನಂತರ ಅದು ಚೇತರಿಸಿಕೊಂಡಿತ್ತು. ಈಗ ಎರಡನೇ ಲೆಗ್ನಲ್ಲೂ ಅದೇ ರೀತಿ ಆಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಶಾಕ್ ಕೊಟ್ಟ ವಿರಾಟ್; ಆರ್ಸಿಬಿ ಕ್ಯಾಪ್ಟನ್ಸಿಗೂ ಕೊಹ್ಲಿ ವಿದಾಯ
ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಚೆನ್ನೈ 8 ಪಂದ್ಯಗಳಿಂದ 12 ಅಂಕ ಗಳಿಸಿದೆ. ಇಷ್ಟೇ ಪಾಯಿಂಟ್ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಆರ್ಸಿಬಿ ತಂಡ ಮೂರನೇ ಸ್ಥಾನದಲ್ಲಿದೆ.
ನಾಳೆ ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಆರ್ಸಿಬಿ ಮಧ್ಯೆ ಪಂದ್ಯ ನಡೆಯಲಿದೆ. ಅಬುಧಾಬಿಯಲ್ಲಿ ನಾಳೆ ಸಂಜೆ 7:30ಕ್ಕೆ ಪಂದ್ಯ ಆರಂಭವಾಗುತ್ತದೆ.
ಸ್ಕೋರು ವಿವರ:
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ 156/6
(ಋತುರಾಜ್ ಗಾಯಕ್ವಾಡ್ ಅಜೇಯ 88, ರವೀಂದ್ರ ಜಡೇಜಾ 26, ಡ್ವೇನ್ ಬ್ರಾವೋ 23 ರನ್ – ಅಡಂ ಮಿನ್ಲೆ 21/2, ಜಸ್ಪ್ರೀತ್ ಬುಮ್ರಾ 33/2, ಟ್ರೆಂಟ್ ಬೌಲ್ಟ್ 35/2)
ಮುಂಬೈ ಇಂಡಿಯನ್ಸ್ 20 ಓವರ್ 136/8
(ಸೌರಬ್ ತಿವಾರಿ ಅಜೇಯ 50, ಕ್ವಿಂಟನ್ ಡೀಕಾಕ್ 17, ಅಮೋಲ್ಪ್ರೀತ್ ಸಿಂಗ್ 16, ಕೇರಾನ್ ಪೊಲಾರ್ಡ್ 15 ರನ್ – ಡ್ವೇನ್ ಬ್ರಾವೋ 25/3, ದೀಪಕ್ ಚಾಹರ್ 19/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ