news18-kannada Updated:April 8, 2021, 2:58 PM IST
Ipl 2021
ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಇನ್ನು ಏಪ್ರಿಲ್ 9 ರಂದು ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುವ ಮೂಲಕ ಐಪಿಎಲ್ ಅಭಿಯಾನ ಆರಂಭವಾಗಲಿದೆ.
ಆದರೆ ಈ ಅಭಿಯಾನದ ಆರಂಭಕ್ಕೂ ಮುನ್ನವೇ ಕೆಲ ಆಟಗಾರರು ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಅದರಲ್ಲಿ ಇಬ್ಬರು ಆರ್ಸಿಬಿ ಆಟಗಾರರು ಇರುವುದು ವಿಶೇಷ. ಭಾರತದಲ್ಲಿ ನಡೆಯಲಿರುವ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಅವಕಾಶಕ್ಕಾಗಿ ಎಲ್ಲಾ ಆಟಗಾರರು ಎದುರು ನೋಡುತ್ತಿದ್ದರೆ, ಸಿಕ್ಕ ಅವಕಾಶವನ್ನು ಕೆಲ ಆಟಗಾರರು ಕೈಚೆಲ್ಲಿದ್ದಾರೆ. ಹೀಗೆ ಐಪಿಎಲ್ ಸಿದ್ಧತೆ ಬೆನ್ನಲ್ಲೇ ಟೂರ್ನಿಯಿಂದ ಹಿಂದೆ ಸರಿದ ಮೊದಲ ಆಟಗಾರ ಡೇಲ್ ಸ್ಟೇನ್. ಹಾಗಿದ್ರೆ ಯಾರೆಲ್ಲಾ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ ಎಂದು ನೋಡೋಣ.
ಡೇಲ್ ಸ್ಟೇನ್: ಐಪಿಎಲ್ ಸಿದ್ಧತೆಗಳು ಆರಂಭವಾಗುತ್ತಿದ್ದಂತೆ ಆರ್ಸಿಬಿ ಆಟಗಾರ ಡೇಲ್ ಸ್ಟೇನ್ ತಾನು ಈ ಬಾರಿ ಆಡುವುದಿಲ್ಲ ಎಂದು ಘೋಷಿಸಿದ್ದರು. ಅಲ್ಲದೆ ಒಂದು ವರ್ಷಗಳ ವಿಶ್ರಾಂತಿ ಬಳಿಕ ಮತ್ತೆ ಐಪಿಎಲ್ಗೆ ಕಂಬ್ಯಾಕ್ ಮಾಡುವುದಾಗಿ ತಿಳಿಸಿದ್ದರು. ಆದರೆ ಐಪಿಎಲ್ನಿಂದ ಹಿಂದೆ ಸರಿದ ಸ್ಟೇನ್ ಅತ್ತ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದು ಮಾತ್ರ ಅಚ್ಚರಿ ಎನ್ನಬಹುದು.
ಮಾರ್ಕ್ವುಡ್: ಇಂಗ್ಲೆಂಡ್ ವೇಗಿ ಮಾರ್ಕ್ವುಡ್ ಐಪಿಎಲ್ ಹರಾಜಿನ ದಿನ ಟೂರ್ನಿಯಿಂದ ಹಿಂದೆ ಸರಿದಿದ್ದರು. ಪ್ರಸ್ತುತ ಅವರ ಪ್ರದರ್ಶನದ ಅನ್ವಯ ಅವರಿಗೆ ಈ ಬಾರಿ ಚಾನ್ಸ್ ಸಿಗುವ ಸಾಧ್ಯತೆಯಿತ್ತು. ಇದಾಗ್ಯೂ ವೈಯುಕ್ತಿಕ ಕಾರಣಗಳಿಗಾಗಿ ಮಾರ್ಕ್ವುಡ್ ಹರಾಜಿನ ದಿನ ತಮ್ಮ ಹೆಸರನ್ನು ಹಿಂದಕ್ಕೆ ತೆಗೆದುಕೊಂಡಿದ್ದರು.
ಜೋಶ್ ಫಿಲಿಪೆ: ನ್ಯೂಜಿಲೆಂಡ್ ವಿರುದ್ದ ಟಿ20 ಸರಣಿ ಬೆನ್ನಲ್ಲೇ ಆಸ್ಟ್ರೇಲಿಯಾ ಆಟಗಾರ ಫಿಲಿಪೆ ವೈಯುಕ್ತಿಕ ಕಾರಣಗಳಿಂದ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ನ್ಯೂಜಿಲೆಂಡ್ ಯುವ ಬ್ಯಾಟ್ಸ್ಮನ್ ಫಿನ್ ಅಲೆನ್ ಅವರನ್ನು ಜೋಶ್ ಫಿಲಿಪೆ ಸ್ಥಾನದಲ್ಲಿ ತಂಡಕ್ಕೆ ಆಯ್ಕೆ ಮಾಡಿತ್ತು.
ಮಿಚೆಲ್ ಮಾರ್ಷ್: ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಮಾರ್ಷ್, ದೀರ್ಘಕಾಲದವರೆಗೆ ಬಯೋಬಬಲ್ನಲ್ಲಿ ಸಮಯ ಕಳೆಯುವುದು ಕಷ್ಟ ಎಂದು ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಎಸ್ಆರ್ಹೆಚ್ ತಂಡವು ಮಾರ್ಷ್ ಸ್ಥಾನದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೇಸನ್ ರಾಯ್ ಅವರನ್ನು ಆಯ್ಕೆ ಮಾಡಿಕೊಂಡಿತು.
ಜೋಶ್ ಹ್ಯಾಝಲ್ವುಡ್ ಕೂಡ ಐಪಿಎಲ್ನಿಂದ ಹಿಂದೆ ಸರಿದಿದ್ದರು. ಸಿಎಸ್ಕೆ ತಂಡದ ಪ್ರಮುಖ ವೇಗಿಯಾಗಿದ್ದ ಹ್ಯಾಝಲ್ವುಡ್ ಕೂಡ ಬಯೋಬಬಲ್ನಲ್ಲಿ ಆಡುವುದು ಕಷ್ಟಕರ ಎಂದು ಈ ಬಾರಿ ಐಪಿಎಲ್ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದರು. ಇದಾಗ್ಯೂ ಸಿಎಸ್ಕೆ ತಂಡವು ಮತ್ತೋರ್ವ ವಿದೇಶಿ ವೇಗಿಯನ್ನು ಇನ್ನೂ ಕೂಡ ಆಯ್ಕೆ ಮಾಡಿಕೊಂಡಿಲ್ಲ ಎಂಬುದು ವಿಶೇಷ.
ಇದಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್ ಗಾಯದ ಕಾರಣ ಈ ಬಾರಿಯ ಐಪಿಎಲ್ನಿಂದ ಹೊರಗುಳಿದಿದ್ದಾರೆ.
Published by:
zahir
First published:
April 8, 2021, 2:58 PM IST