IPL

  • associate partner

IPL 2020: ಕೊಹ್ಲಿಗೆ ಕಂಟಕ: ನಾಯಕತ್ವ ಬದಲಾವಣೆಗೆ RCB ಚಿಂತನೆ..?

ಕೊಹ್ಲಿ 2013 ರಿಂದ ಆರ್‌ಸಿಬಿಯ ಚುಕ್ಕಾಣಿ ಹಿಡಿದಿದ್ದು, ಈ ಮಧ್ಯೆ ಈಗ ಪಂಜಾಬ್​ ತಂಡದಲ್ಲಿ ಆಟಗಾರರು ಕೊಹ್ಲಿ ನಾಯಕತ್ವದ ಅಡಿಯಲ್ಲಿ ಆಡಿದ್ದರು. ಆದರೂ ಆರ್​ಸಿಬಿ ಸೋತಿರುವುದು ಮತ್ತೊಮ್ಮೆ ಕೊಹ್ಲಿ ಕಪ್ತಾನಗಿರಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

news18-kannada
Updated:September 26, 2020, 4:23 PM IST
IPL 2020: ಕೊಹ್ಲಿಗೆ ಕಂಟಕ: ನಾಯಕತ್ವ ಬದಲಾವಣೆಗೆ RCB ಚಿಂತನೆ..?
virat kohli
  • Share this:
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಪಾರ್ಥಿವ್ ಪಟೇಲ್, ಶಿವಂ ದುಬೆ, ಗುರುಕ್ರೀತ್ ಮನ್ ಸಿಂಗ್, ಪವನ್ ನೇಗಿ, ಮೊಯೀನ್ ಅಲಿ, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಹಾಗೂ ನವ್​ದೀಪ್ ಸೈನಿ, ಆರೋನ್ ಫಿಂಚ್, ಕ್ರಿಸ್ ಮೊರೀಸ್, ಡೇಲ್ ಸ್ಟೈನ್, ಆ್ಯಡಂ ಜಂಪಾ, ಇಸ್ರು ಉದಾನ, ಜೋಶ್ ಫಿಲಿಪ್, ಶಹ್ಬಾಜ್ ಅಹ್ಮದ್, ದೇವ್​ದತ್ ಪಡಿಕ್ಕಲ್ ಹಾಗೂ ಪವನ್ ದೇಶಪಾಂಡೆ. ಇದು ಆರ್​ಸಿಬಿ ತಂಡ. ಈ ತಂಡದಲ್ಲಿ 10 ಕ್ಕಿಂತ ಹೆಚ್ಚಿನ ಆಟಗಾರರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಅದರಲ್ಲೂ ತಂಡದಲ್ಲಿ 5 ಆಲ್​ರೌಂಡರ್​ಗಳಿರುವುದು ವಿಶೇಷ. ಬೌಲಿಂಗ್ ವಿಭಾಗದಲ್ಲಿ ಸ್ಟೈನ್ ಎಂಟ್ರಿ, ಓಪನರ್​ ಆಗಿ ಆರೋನ್ ಫಿಂಚ್ ಆಗಮನ ತಂಡದ ಬಲವನ್ನು ಹೆಚ್ಚಿಸಿತ್ತು. ಹೀಗಾಗಿಯೇ ಈ ಬಾರಿಯ ಆರ್​ಸಿಬಿ ತಂಡವು ಈ ಹಿಂದಿಗಿಂತಲೂ ಬಲಿಷ್ಠ ಎನ್ನಲಾಗಿತ್ತು.

ಆದರೆ ಮೊದಲೆರಡು ಪಂದ್ಯಗಳಲ್ಲಿನ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮೇಲಿನ ನಿರೀಕ್ಷೆಗಳು ಕಡಿಮೆಯಾಗುತ್ತಿದೆ. ಏಕೆಂದರೆ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ 10 ರನ್​ಗಳಿಂದ ಗೆದ್ದಿರುವುದೇನೋ ನಿಜ. ಆದರೆ ಆ ಗೆಲುವು ಹೈದರಾಬಾದ್ ತಂಡ ಮಾಡಿಕೊಂಡ ಎಡವಟ್ಟುಗಳಿಂದ ದಕ್ಕಿರುವುದು ಎಂಬುದು ಎರಡನೇ ಪಂದ್ಯದಿಂದ ಸಾಬೀತಾಯಿತು. ಏಕೆಂದರೆ ಸನ್​ರೈಸರ್ಸ್ ತಂಡವು ಆ ದಿನ ಮೂವರು ಹೊಸ ಆಟಗಾರರನ್ನು ಕಣಕ್ಕಿಳಿಸಿತ್ತು. ಇನ್ನು ಮಿಚೆಲ್ ಮಾರ್ಷ್​ ಹಾಗೂ ರಶೀದ್ ಖಾನ್ ಗಾಯಗೊಂಡಿದ್ದು ಆರ್​ಸಿಬಿ ಬೌಲರುಗಳಿಗೆ ಪ್ಲಸ್ ಪಾಯಿಂಟ್ ಆಯಿತು. ಇದೇ ಕಾರಣದಿಂದ ಅಂತು ಇಂತು ಕೊಹ್ಲಿ ಪಡೆ 10 ರನ್​ಗಳಿಂದ ವಿಜಯ ಸಾಧಿಸುವಂತಾಯಿತು ಎಂದು ವಿಮರ್ಶಿಸಲಾಗುತ್ತಿದೆ.

ಇಂತಹದೊಂದು ವಿಮರ್ಶೆಗೆ ಕಾರಣವಾಗಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ 2ನೇ ಪಂದ್ಯದ ಫಲಿತಾಂಶ. ಯಾವ ಅರ್ಥದಲ್ಲೂ ಕಿಂಗ್ಸ್​ ಇಲೆವೆನ್ ಆರ್​ಸಿಬಿಗೆ ಸರಿಸಾಟಿಯಾಗಿರಲಿಲ್ಲ. ಆದರೆ 97 ರನ್​ಗಳ ಅಂತರದಿಂದ ಹೀನಾಯ ಸೋಲು ಕಾಣುವ ಮೂಲಕ ಕೊಹ್ಲಿ ಪಡೆ ಭಾರೀ ಮುಖಭಂಗ ಅನುಭವಿಸಿತು. ಇಲ್ಲಿ ಪಂಜಾಬ್ ಪರ ಕಣಕ್ಕಿಳಿದ ಬಹುತೇಕ ಆಟಗಾರರು ಹಳೆಯ ಆರ್​​ಸಿಬಿ ಹುಲಿಗಳು ಎಂಬುದು ವಿಶೇಷ. ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ಕರುಣ್ ನಾಯರ್ ಮತ್ತು ಕ್ರಿಸ್ ಜೋರ್ಡಾನ್ ಆರ್​ಸಿಬಿ ಪರ ಕಣಕ್ಕಿಳಿದಿದ್ದರು.

ಆದರೆ ಈ ಆಟಗಾರರನ್ನು ಹತ್ತಿರದಿಂದಲೇ ನೋಡಿರುವ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಕಟ್ಟಿಹಾಕುವಲ್ಲಿ ಎಡವಿರುವುದಕ್ಕೆ ಪಂದ್ಯದ ಫಲಿತಾಂಶವೇ ಸಾಕ್ಷಿ. ಏಕೆಂದರೆ ಕೊಹ್ಲಿ 2013 ರಿಂದ ಆರ್‌ಸಿಬಿಯ ಚುಕ್ಕಾಣಿ ಹಿಡಿದಿದ್ದು, ಈ ಮಧ್ಯೆ ಈಗ ಪಂಜಾಬ್​ ತಂಡದಲ್ಲಿ ಆಟಗಾರರು ಕೊಹ್ಲಿ ನಾಯಕತ್ವದ ಅಡಿಯಲ್ಲಿ ಆಡಿದ್ದರು. ಆದರೂ ಆರ್​ಸಿಬಿ ಸೋತಿರುವುದು ಮತ್ತೊಮ್ಮೆ ಕೊಹ್ಲಿ ಕಪ್ತಾನಗಿರಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏಕೆಂದರೆ ಕಳೆದ 7 ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ 2016 ರಲ್ಲಿ ತಂಡವನ್ನು ಫೈನಲ್​ಗೆ ಕೊಂಡೊಯ್ದಿರುವುದು ಶ್ರೇಷ್ಠ ಸಾಧನೆ. ಇದರ ಹೊರತಾಗಿ ವಿರಾಟ್ ನಾಯಕತ್ವದಿಂದ ಹೇಳಿಕೊಳ್ಳುವಂತ ಫಲಿತಾಂಶ ಬಂದಿರಲಿಲ್ಲ. ಇದೀಗ 13ನೇ ಐಪಿಎಲ್​ ಆರಂಭದಲ್ಲಿ ಕೊಹ್ಲಿಯ ನಾಯಕತ್ವ ದ ಅನುಮಾನ ಮೂಡಿವೆ.

ಇದಕ್ಕೆ ಮುಖ್ಯ ಕಾರಣ ಕಿಂಗ್ಸ್ ಇಲೆವೆನ್ ವಿರುದ್ಧ ಕೊಹ್ಲಿ ಕೈಗೊಂಡ ತೀರ್ಮಾನಗಳು. ಆರ್​ಸಿಬಿ ವಿರುದ್ಧ ಪಂಜಾಬ್ ಉತ್ತಮ ಆರಂಭ ಪಡೆದಿತ್ತು. ಆದರೆ ಇದೇ ವೇಳೆ ಪವರ್‌ಪ್ಲೇನಲ್ಲಿ ಉತ್ತಮ ಬೌಲಿಂಗ್​ಗೆ ಹೆಸರುವಾಸಿಯಾದ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡದೇ ಕೊಹ್ಲಿ ತಪ್ಪು ಮಾಡಿದ್ದರು. ಹೀಗಾಗಿ ಕಿಂಗ್ಸ್​ ಇಲೆವೆನ್ ಪವರ್​ಪ್ಲೇನಲ್ಲಿ ಉತ್ತಮ ರನ್ ಕಲೆಹಾಕಿತು. 8 ನೇ ಓವರ್‌ನಲ್ಲಿ ಬೌಲಿಂಗ್ ಆರಂಭಿಸಿದ ಸುಂದರ್ ನೀಡಿದ್ದು ಕೇವಲ 8 ರನ್‌ಗಳು ಮಾತ್ರ. ಆಫ್-ಸ್ಪಿನ್ನರ್ ಯುಜುವೇಂದ್ರ ಚಾಹಲ್ ಜೊತೆಗೂಡಿ ರನ್​ ನಿಯಂತ್ರಿಸುವ ಉತ್ತಮ ಅವಕಾಶವಿದ್ದರೂ, ಕೊಹ್ಲಿ ನಂತರ ಸುಂದರ್​ ಸ್ಥಾನದಲ್ಲಿ ಉಮೇಶ್ ಯಾದವ್ ಅವರಿಗೆ ಬೌಲಿಂಗ್ ನೀಡಿದರು. ಈ ವೇಳೆ ಉಮೇಶ್ ಯಾದವ್ ನೀಡಿದ್ದು ಬರೋಬ್ಬರಿ 20 ರನ್​ಗಳು.

ಮತ್ತೆ ವಾಷಿಂಗ್ಟನ್ ಸುಂದರ್ ಅವರಿಗೆ 12 ನೇ ಓವರ್​ ಎಸೆಯಲು ಚಾನ್ಸ್​ ನೀಡಲಾಯಿತು. ಈ ವೇಳೆ ಕೇವಲ 5 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಇದಾದ ಬಳಿಕ ಕೊಹ್ಲಿ ಮತ್ತೆ ಬೌಲಿಂಗ್ ಬದಲಿಸಿದರು. ಈ ವೇಳೆ ಶಿವಂ ದುಬೆ ನಿಕೋಲಸ್ ಪೂರನ್ ವಿಕೆಟ್ ಪಡೆದರು. ಆದರೆ ದುಬೆ ಈ ಪಂದ್ಯದಲ್ಲಿ ಮೊದಲು ಎಸೆದಿದ್ದು ಕೇವಲ 2 ಓವರ್ ಮಾತ್ರ. ಇದರಲ್ಲಿ ಕೇವಲ 10 ರನ್​ ನೀಡಿ 2 ವಿಕೆಟ್ ಕೂಡ ಕಬಳಿಸಿದ್ದರು. ಬಳಿಕ ಕೊಹ್ಲಿ ಅವಕಾಶ ನೀಡಿರಲಿಲ್ಲ. ಕೊನೆಯ ಐದು ಓವರ್​ ಇರುವಾಗ ಬೌಲ್ ಮಾಡಿದ ದುಬೆ 3ನೇ ನೀಡಿದ್ದರು. ಆದರೆ ಹೊಡಿಬಡಿ ಆಟಕ್ಕೆ ಮುಂದಾಗಿದ್ದ ಕಿಂಗ್ಸ್​ ಇಲೆವೆನ್ ಈ ಓವರ್​ನಲ್ಲಿ 23 ರನ್​ಗಳನ್ನು ಕಲೆಹಾಕಿತು. ಹಾಗೆಯೇ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಯ 5 ಓವರ್‌ಗಳಲ್ಲಿ 80 ರನ್ ಗಳಿಸುವ ಭರ್ಜರಿ ಮೊತ್ತವನ್ನು ಪೇರಿಸಿತ್ತು.ಇಲ್ಲಿ ಮಿಡ್ಲ್​ ಓವರ್​​ಗಳಲ್ಲಿ ಯಶಸ್ವಿಯಾಗಿದ್ದ ಶಿವಂ ದುಬೆ (3 ಓವರ್) ಹಾಗೂ ವಾಷಿಂಗ್ಟನ್ ಸುಂದರ್ ( 2 ಓವರ್ 13 ರನ್) ಅವರನ್ನುಪೂರ್ಣ ಪ್ರಮಾಣದ ಬೌಲರ್​ ಆಗಿ  ಬಳಸಿಕೊಳ್ಳಲು ಕೊಹ್ಲಿ ಸಂಪೂರ್ಣ ವಿಫಲರಾಗಿದ್ದರು. ಹಾಗೆಯೇ 11ನೇ ಓವರ್​ ವೇಳೆಗಾಗಲೇ ಚಹಾಲ್ ಕೈಯಿಂದ ಮೂರು ಓವರ್​ಗಳನ್ನು ಮಾಡಿಸಿದ್ದರು. ಇಷ್ಟೇ ಅಲ್ಲದೆ ಡೆತ್ ಓವರ್ ಸ್ಪೆಷಲಿಸ್ಟ್​ ಎಂದು ಕರೆಸಿಕೊಳ್ಳುವ ಸೈನಿ ಅವರ ಮೂರು ಓವರ್​ಗಳನ್ನು ಅದಾಗಲೇ ಮುಗಿಸಿಬಿಟ್ಟಿದ್ದರು. ಆರ್‌ಸಿಬಿ ನಾಯಕ ಬೌಲರ್‌ಗಳನ್ನು ಬಳಸಿಕೊಂಡಿರುವ ರೀತಿ ಇದೀಗ ಫ್ರಾಂಚೈಸಿಗೆ ಕೊಹ್ಲಿ ನಾಯಕತ್ವದ ಬಗ್ಗೆ ಅನುಮಾನಗಳು ಮೂಡವಂತೆ ಮಾಡಿದೆ.

ಇತ್ತ ಮೊದಲ ಎರಡು ಪಂದ್ಯಗಳಲ್ಲೂ ತಂಡದ ಆಯ್ಕೆ ಕೂಡ ದಾರಿ ತಪ್ಪಿದಂತಿತ್ತು. ಏಕೆಂದರೆ ತಂಡದಲ್ಲಿ ದೇವದತ್​ ಪಡಿಕ್ಕಲ್ ಎಂಬ ಯುವ ಆಟಗಾರನಿಗೆ ಅವಕಾಶ ನೀಡಿದ ಪಂದ್ಯದಲ್ಲೇ ಮತ್ತೋರ್ವ ಯುವ ಬ್ಯಾಟ್ಸ್​ಮನ್ ಜೋಶ್ ಫಿಲಿಪ್​ಗೂ ನಾಯಕ ಮಣೆ ಹಾಕಿತ್ತು. ಇದರಿಂದ ಎರಡು ಪಂದ್ಯಗಳಲ್ಲಿ ಬೆಂಚ್ ಕಾಯಬೇಕಾಗಿ ಬಂದಿದ್ದು ಆಲ್​ರೌಂಡರ್​ಗಳಾದ ಮೊಯೀನ್ ಅಲಿ, ಇಸ್ರು ಉದಾನ ಹಾಗೂ ಕ್ರಿಸ್ ಮೊರಿಸ್.

ಮೊರಿಸ್ ಗಾಯಗೊಂಡಿದ್ದರ ಪರಿಣಾಮ ಆಯ್ಕೆಯಾಗಿಲ್ಲ ಎನ್ನುವುದಾದರೆ, ಇಲ್ಲಿ ಜೋಶ್ ಫಿಲಿಪ್ ಜಾಗದಲ್ಲಿ ಮೊಯೀನ್ ಅಲಿ ಎಂಬ ಆಲ್​ರೌಂಡರ್​ನ್ನು ಬಳಸಿಕೊಳ್ಳುವ ಉತ್ತಮ ಅವಕಾಶವಿತ್ತು. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಲಿ, ಉತ್ತಮ ಫಾರ್ಮ್​ನೊಂದಿಗೆ ಆರ್​ಸಿಬಿ ತಂಡವನ್ನು ಕೂಡಿಕೊಂಡಿದ್ದರು. ಜೋಶ್ ಫಿಲಿಪ್ ಸ್ಥಾನದಲ್ಲಿ ಅಲಿಗೆ ಅವಕಾಶ ನೀಡಿ, ಎಬಿಡಿಗೆ ವಿಕೆಟ್ ಕೀಪರ್ ಜವಾಬ್ದಾರಿ ನೀಡಿದ್ರೆ ತಂಡಕ್ಕೆ ಅನುಭವಿ ಆಲ್​ರೌಂಡರ್ ನೆರವು ಪಡೆಯಬಹುದಿತ್ತು. ಈ ಅವಕಾಶವನ್ನು ಆರ್​ಸಿಬಿ ನಾಯಕ ತಪ್ಪಿಸಿಕೊಂಡಿದ್ದರು. ಅಲ್ಲದೆ ಎರಡು ಪಂದ್ಯಗಳಲ್ಲೂ ಫಿಲಿಪ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಿ ತಪ್ಪು ಮಾಡಿದ್ದರು.

ಇಂತಹ ತೀರ್ಮಾನಗಳು ಇದೀಗ ಆರ್​ಸಿಬಿ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಇದರೊಂದಿಗೆ ಕೊಹ್ಲಿ ನಾಯಕತ್ವವು ದೂರದೃಷ್ಟಿಯಿಂದ ಕೂಡಿಲ್ಲ ಎಂಬ ಮಾತುಗಳು ಕೇಳಿಬರಲಾರಂಭಿಸಿದೆ. ಅಲ್ಲದೆ ತಂಡವನ್ನು ಮುನ್ನಡೆಸುವ ಅವರ ಸಾಮರ್ಥ್ಯದ ಬಗ್ಗೆ ಫ್ರಾಂಚೈಸಿಗಳಲ್ಲೇ ಅನುಮಾನ ಮೂಡಿವೆ ಎಂದು ವರದಿಯಾಗುತ್ತಿವೆ. ಹೀಗಾಗಿ ನಾಯಕತ್ವದ ಬದಲಾವಣೆ ಬಗ್ಗೆ ಕೂಡ ಆರ್​ಸಿಬಿ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಕೊಹ್ಲಿ ನಾಯಕತ್ವದಲ್ಲಿ ಸತತ ವೈಫಲ್ಯ ಹೊಂದಿದ್ರೆ, ಅವರನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಕೇವಲ 14 ಪಂದ್ಯಗಳಲ್ಲೇ ಉತ್ತಮ ಫಲಿತಾಂಶ ನೀಡಿದ್ರೆ ಮಾತ್ರ ಪ್ಲೇ ಆಫ್ ಪ್ರವೇಶಿಸಬಹುದು. ಆದರೆ ಈಗಾಗಲೇ ಮೊದಲೆರಡು ಪಂದ್ಯಗಳ ಫಲಿತಾಂಶ ಆರ್​ಸಿಬಿ ಫ್ರಾಂಚೈಸಿಗೆ ತೃಪ್ತಿಕರವಾಗಿಲ್ಲ. ಹೀಗಾಗಿ ತಂಡದ ಸಾರಥ್ಯವನ್ನು ಮತ್ತೊಬ್ಬರಿಗೆ ವಹಿಸಿ ಸೋಲಿನ ಸುಳಿಯಿಂದ ಪಾರಾಗುವ ಬಗ್ಗೆ ಯೋಚಿಸಲಾಗುತ್ತಿದೆ.

ಇದೇ ಕೊಹ್ಲಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಯಾರೆಂಬ ಪ್ರಶ್ನೆಗಳು ಕೂಡ ಎದ್ದಿವೆ. ಇದಕ್ಕೆ ಸಿಗುತ್ತಿರುವ ಉತ್ತರ ಆರಂಭಿಕ ಆಟಗಾರ ಆರೋನ್ ಫಿಂಚ್. ಹೌದು, ಆಸ್ಟ್ರೇಲಿಯಾ ತಂಡವನ್ನು ಉತ್ತಮವಾಗಿಯೇ ಮುನ್ನಡೆಸುತ್ತಿರುವ ಫಿಂಚ್ ಹೆಚ್ಚಿನ ಜವಾಬ್ದಾರಿ ನಿಭಾಯಿಸುವಲ್ಲಿ ನಿಪುಣರು. ಹೀಗಾಗಿ ಕೊಹ್ಲಿಯ ಸ್ಥಾನ ಫಿಂಚ್​ಗೆ ನೀಡುವ ಬಗ್ಗೆ ಕೂಡ ಆರ್​ಸಿಬಿ ಮ್ಯಾನೇಜ್ಮೆಂಟ್​ನಲ್ಲಿ ಚರ್ಚೆಗಳಾಗಿವೆ ಎಂದು ವರದಿಯೊಂದು ಹೇಳಿವೆ.

ಇದಲ್ಲದೆ, ನಾಯಕತ್ವದ ರೇಸ್​ನಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಮೊಯೀನ್ ಅಲಿ ಹೆಸರುಗಳು ಕೂಡ ಇವೆ. ಆದರೆ ಎಬಿಡಿ ಕಪ್ತಾನಗಿರಿಯಲ್ಲಿ ಉತ್ತಮ ಅಂಕಿ ಅಂಶಗಳನ್ನು ಹೊಂದಿಲ್ಲ. ಹಾಗೆಯೇ ಮೊಯೀನ್ ಅಲಿ ಇಂಗ್ಲೆಂಡ್ ತಂಡವನ್ನು ಉಪನಾಯಕನ ಸ್ಥಾನದಲ್ಲಿ ನಿಂತು ಮುನ್ನಡೆಸಿದ ಅನುಭವ ಮಾತ್ರ ಹೊಂದಿದ್ದಾರೆ. ಹೀಗಾಗಿ ಆರೋನ್ ಫಿಂಚ್​​ಗೆ ನಾಯಕತ್ವವನ್ನು ಹಸ್ತಾಂರಿಸಬಹುದು. ಇದರಿಂದ ಕೊಹ್ಲಿಯ ಒತ್ತಡ ಕಡಿಮೆಯಾಗಿ ಫಾರ್ಮ್​ಗೆ ಮರಳಲು ಸಹಾಯಕವಾಗಲಿದೆ ಎಂಬುದು ಆರ್​ಸಿಬಿ ಲೆಕ್ಕಾಚಾರ.

ಈ ನಿರ್ಧಾರವು ಆರ್​ಸಿಬಿಯ ಮುಂದಿನ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದ್ದು, ಒಂದು ವೇಳೆ ಸತತ ಗೆಲುವು ಸಾಧಿಸಿದ್ರೆ ಕೊಹ್ಲಿಯೇ ಮುಂದುವರೆಯಲಿದ್ದಾರೆ. ಇದರ ಹೊರತಾಗಿ ತಂಡದ ಆಟಗಾರರ ಬಳಕೆಯಲ್ಲಿ ಕೊಹ್ಲಿ ಎಡವಿದ್ರೆ, ನಾಯಕತ್ವದ ಬದಲಾವಣೆಯೊಂದಿಗೆ ಉಳಿದ ಪಂದ್ಯಗಳಲ್ಲಿ ಪ್ರಯೋಗ ನಡೆಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಿಂತನೆ ನಡೆಸಿದೆ.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

Also Read: KL Rahul: ಸಚಿನ್ ದಾಖಲೆ ಅಳಿಸಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್
Published by: zahir
First published: September 26, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading