13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ದೂರದ ಯುಎಇನಲ್ಲಿ ನಡೆಸುವಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಶಸ್ವಿಯಾಗಿದೆ. ಅದರಂತೆ ಐಪಿಎಲ್ 2020 ಅಂತಿಮ ಹಂತಕ್ಕೆ ಬಂದುನಿಂತಿದೆ. ಮುಂಬೈ, ಡೆಲ್ಲಿ, ಆರ್ಸಿಬಿ ಹಾಗೂ ಹೈದರಾಬಾದ್ ಹೀಗೆ ನಾಲ್ಕು ತಂಡಗಳು ಪ್ಲೇ ಆಫ್ಗೆ ಪ್ರವೇಶ ಪಡೆದಿದ್ದು, ಕ್ವಾಲಿಫೈಯರ್ ಸುತ್ತುಕೂಡ ಆರಂಭವಾಗಿದೆ. ಪ್ರತಿ ಬಾರಿ ಈ ಸಲ ಕಪ್ ನಮ್ದೆ ಎಂದು ಟೂರ್ನಿ ಶುರು ಮಾಡುತ್ತಿದ್ದ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಚೊಚ್ಚಲ ಬಾರಿಗೆ ಕಪ್ ಗೆಲ್ಲುವ ಲಕ್ಷಣ ಕಾಣುತ್ತಿದೆ.
ಆರ್ಸಿಬಿ ಕೊನೆಯ ಬಾರಿ ಪ್ಲೇ ಆಫ್ ಹಂತಕ್ಕೆ ತಲುಪಿದ್ದು, 2016ರ ಐಪಿಎಲ್ ಸೀಸನ್ನಲ್ಲಿ. ಮೊದಲ ಕ್ವಾಲಿಫೈಯರ್ ಹಣಾಹಣಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಫೈನಲ್ಗೆ ಹೋರಾಟ ನಡೆಸಿತ್ತು. ಅದರಂತೆ ಕೊಹ್ಲಿ ಪಡೆ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್ಗೇರಿತ್ತು.
MI vs DC Qualifier 1, IPL 2020 Live Score
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್, ಡ್ವೇನ್ ಸ್ಮಿತ್ ಅವರ 73 ರನ್ಗಳ ನೆರವಿನಿಂದ 158 ರನ್ ಕಲೆಹಾಕಿತ್ತು. ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 18.2 ಓವರ್ಗಳಲ್ಲೇ ಜಯ ಸಾಧಿಸಿತು. ಎಬಿಡಿ ಅಜೇಯ 79 ರನ್ ಚಚ್ಚಿದ್ದರು.
ಹೀಗೆ ಗುಜರಾತ್ ವಿರುದ್ಧ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟ ಆರ್ಸಿಬಿಗೆ ಎದುರಾಗಿದ್ದು ಸನ್ರೈಸರ್ಸ್ ಹೈದರಾಬಾದ್ ತಂಡ. ಕೊನೆ ಕ್ಷಣದ ವರೆಗೆ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಹೈದರಾಬಾದ್ ತಂಡ 8 ರನ್ಗಳ ಜಯ ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು.
ಮೊದಲು ಬ್ಯಾಟ್ ಮಾಡಿದ್ದ ಎಸ್ಆರ್ಹೆಚ್ ಡೇವಿಡ್ ವಾರ್ನರ್ ಅವರ 69 ಹಾಗೂ ಬೆನ್ ಕಟ್ಟಿಂಗ್ ಅವರ 15 ಎಸೆತಗಳಲ್ಲಿ ಅಜೇಯ 39 ರನ್ಗಳ ನೆರವಿನಿಂದ ಬರೋಬ್ಬರಿ 208 ರನ್ ಸಿಡಿಸಿತು. ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ಕೂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಕ್ರಿಸ್ ಗೇಲ್(76) ಹಾಗೂ ನಾಯಕ ವಿರಾಟ್ ಕೊಹ್ಲಿ(54) ಮೊದಲ ವಿಕೆಟ್ಗೆನೇ 114 ರನ್ಗಳ ಕಾಣಿಕೆ ನೀಡಿದರು. ಆದರೆ, ನಂತರದಲ್ಲಿ ದಿಢೀರ್ ಕುಸಿತ ಕಂಡ ಆರ್ಸಿಬಿ 20 ಓವರ್ಗಳಲ್ಲಿ 200 ರನ್ ಗಳಿಸಲಷ್ಟೇ ಶಕ್ತವಾಗಿ ಅಂತಿಮ ಹಂತದಲ್ಲಿ ಎಡವಿತು.
IPL 2020: ಲೀಗ್ ಹಂತದ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ ಹಾಗ್: ಕನ್ನಡಿಗನಿಗಿಲ್ಲ ಸ್ಥಾನ..!
ಹೀಗೆ ಆರ್ಸಿಬಿ ಕೊನೆಯ ಬಾರಿಗೆ 2016 ರಲ್ಲಿ ಪ್ಲೇ ಆಫ್ ಪ್ರವೇಶಿಸಿ ಫೈನಲ್ ವರೆಗೆ ತಲುಪಿತ್ತು. ಈ ಬಾರಿ ಕೊಹ್ಲಿ ಪಡೆ ಮತ್ತಷ್ಟು ಬಲಿಷ್ಠವಾಗಿದ್ದು, ಕಪ್ ಗೆಲ್ಲುವ ಎಲ್ಲ ಲಕ್ಷಣಗಳಿವೆ. ನ. 6 ರಂದು ಕೊಹ್ಲಿ ಪಡೆ ಎಸ್ಆರ್ಹೆಚ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೆಣೆಸಾಟ ನಡೆಸಲಿದ್ದು, ಗೆದ್ದರೆ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡದ ವಿರುದ್ಧ ಕ್ವಾಲಿಫೈಯರ್ 2ನಲ್ಲಿ ಹೋರಾಟ ನಡೆಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ