news18-kannada Updated:September 17, 2020, 5:13 PM IST
MI vs CSK
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಮಾರಕ ಕೊರೋನಾ ವೈರಸ್ ಕಾರಣ ಈ ಬಾರಿ ಅರಬ್ ರಾಷ್ಟ್ರದಲ್ಲಿ ಐಪಿಎಲ್ ಆಯೋಜನೆಯಾಗಿದೆ. ಸೆಪ್ಟೆಂಬರ್ 19 ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ಈ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲಿದೆ. ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಲೋಕಸಭೆ ಚುನಾವಣೆ ಇದ್ದ ಕಾರಣ ಆರಂಭದ 20 ಪಂದ್ಯವನ್ನು ಅರಬ್ ರಾಷ್ಟ್ರದಲ್ಲಿ ಆಯೋಜಿಸಲಾಗಿತ್ತು. ಆದರೆ, ಸಂಪೂರ್ಣ ಇಡೀ ಟೂರ್ನಿ ಯುಎಇನಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿ.
ಕಳೆದ ಬಾರಿ ಅಂದರೆ 2014ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಿದ್ದವು. ಆಗ ಯಾವ ತಂಡ ಎಷ್ಟು ರನ್ ಕಲೆಹಾಕಿತು?, ಯಾವ ತಂಡ ಗೆಲುವು ಸಾಧಿಸಿತು?. ಇಲ್ಲಿದೆ ಮಾಹಿತಿ.
IPL 2020: ರೋಹಿತ್ ಶರ್ಮಾ ಅತ್ಯಂತ ಅಪಾಯಕಾರಿ ಬ್ಯಾಟ್ಸ್ಮನ್: ಡೆಲ್ಲಿ ಕ್ಯಾಪಿಟಲ್ಸ್ ಕೋಚ್
2014ರ ಐಪಿಎಲ್ನ ಚೆನ್ನೈ-ಮುಂಬೈ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಪಡೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಆರಂಭದಲ್ಲೇ ಮೈಕಲ್ ಹಸ್ಸಿ ಹಾಗೂ ಆದಿತ್ಯ ತಾರೆ ವಿಕೆಟ್ ಕಳೆದುಕೊಂಡಿತು. ಮೂರನೇ ವಿಕೆಟ್ಗೆ ನಾಯಕ ರೋಹಿತ್ ಶರ್ಮಾ ಜೊತೆಯಾದ ಕೋರೆ ಆ್ಯಂಡರ್ಸನ್ ಅದ್ಭುತ ಜೊತೆಯಾಟ ಆಡಿದರು.
ಆ್ಯಂಡರ್ಸನ್ 31 ಎಸೆತಗಳಲ್ಲಿ 39 ರನ್ ಬಾರಿಸಿದರೆ, ಹಿಟ್ಮ್ಯಾನ್ 41 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇವರಿಬ್ಬರ ನಿರ್ಗಮನದ ನಂತರ ದಿಢೀರ್ ಕುಸಿತ ಕಂಡ ಮುಂಬೈ ಅಂತಿಮವಾಗಿ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 141 ರನ್ ಬಾರಿಸಿತು. ಚೆನ್ನೈ ಪರ ಮೋಹಿತ್ ಶರ್ಮಾ 4 ವಿಕೆಟ್ ಕಿತ್ತರು.
142 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ ಡ್ವೇನ್ ಸ್ಮಿತ್ ಹಾಗೂ ಬ್ರೆಂಡನ್ ಮೆಕಲಮ್ ಅವರಿಂದ ಸ್ಫೋಟಕ ಆರಂಭ ಪಡೆದುಕೊಂಡು ಅಲ್ಲೇ ಗೆಲುವು ಖಚಿತ ಮಾಡಿಕೊಂಡಿತು. ಸ್ಮಿತ್ 22 ಎಸೆತಗಳಲ್ಲಿ 29 ರನ್ ಗಳಿಸಿದರು. ಆದರೆ, ನಂತರ ಬಂದ ಸುರೇಶ್ ರೈನಾ 1 ರನ್ಗೆ ನಿರ್ಗಮಿಸಿದರೆ, ಫಾಫ್ ಡುಪ್ಲೆಸಿಸ್ 20 ರನ್ ಗಳಿಸಿದರು.
RCB: ಚಹಾಲ್ ತಂಡಕ್ಕೆ ಭರ್ಜರಿ ಜಯ: ಅಭ್ಯಾಸ ಪಂದ್ಯದಲ್ಲಿ ಸೋತ ವಿರಾಟ್ ಕೊಹ್ಲಿ ಟೀಂಇತ್ತ ಮೆಕಲಮ್ ಸ್ಫೋಟಕ ಆಟ ಚೆನ್ನೈಗೆ ತುಂಬಾನೆ ಸಹಕಾರಿ ಆಯಿತು. ಅಂತಿಮವಾಗಿ ಧೋನಿ (ಅಜೇಯ 14) ಜೊತೆಗೂಡಿ ಮೆಕಲಮ್ ವಿನ್ನಿಂಗ್ ಶಾಟ್ ಹೊಡೆದರು. ಮೆಕಲಮ್ ಕೇವಲ 53 ಎಸೆತಗಳಲ್ಲಿ ಅಜೇಯ 71 ರನ್ ಚಚ್ಚಿದರು. ಚೆನ್ನೈ 19 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು 142 ರನ್ ಬಾರಿಸುವ ಮೂಲಕ 7 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.
ಹೀಗೆ ಕಳೆದ ಬಾರಿ ಯುಎಇನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಪರಾಕ್ರಮ ಮೆರೆದಿದ್ದ ಧೋನಿ ಹುಡಗರು ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಮತ್ತೆ ಉಭಯ ತಂಡಗಳು ಮುಖಾಮುಖಿ ಆಗುತ್ತಿದ್ದು ಯಾವ ತಂಡಕ್ಕೆ ಜಯ ಎಂಬುದು ಕಾದುನೋಡಬೇಕಿದೆ.
Published by:
Vinay Bhat
First published:
September 17, 2020, 5:12 PM IST