IPL 2020ಯ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರ್ ಮೂಲಕ ಜಯ ತನ್ನದಾಗಿಸಿಕೊಂಡಿತು. ಆದರೆ ಸೂಪರ್ ಓವರ್ಗೆ ಪಂದ್ಯ ಸಾಗಲು ಮುಖ್ಯ ಕಾರಣ ಅಂಪೈರ್ ನೀಡಿದ ಕೆಟ್ಟ ತೀರ್ಪು ಎಂಬ ವಾದ ಜೋರಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಪ್ರತಿಕ್ರಿಯಿಸಿದ್ದು, ಅಂಪೈರ್ ತೀರ್ಪನ್ನು ಕಟುವಾಗಿ ಟೀಕಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 157 ರನ್ ಪೇರಿಸಿತ್ತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಕಿಂಗ್ಸ್ ಇಲೆವೆನ್ ತಂಡಕ್ಕೆ ಆಪತ್ಫಾಂಧವನಾಗಿದ್ದು ಕನ್ನಡಿಗ ಮಯಾಂಕ್ ಅಗರ್ವಾಲ್. ಪಂದ್ಯವನ್ನು ಕೊನೆಯ ಓವರ್ವರೆಗೂ ಕೊಂಡೊಯ್ದರೂ ಕೊನೆಘಳಿಗೆಯಲ್ಲಿ ಮಾಡಿದ ಸಣ್ಣ ತಪ್ಪಿನಿಂದ ಪಂದ್ಯ ಸೂಪರ್ ಓವರ್ನತ್ತ ಸಾಗಿತು.
ಆದರೆ ರೋಚಕ ಟೈನಲ್ಲಿ ಪಂದ್ಯ ಅಂತ್ಯವಾಗಲು ಕಾರಣ 18ನೇ ಓವರ್ನಲ್ಲಿ ಅಂಪೈರ್ ನೀಡಿದ ಒಂದು ತೀರ್ಪು. ಈ ಓವರ್ನ 3ನೇ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಕವರ್ ಡ್ರೈವ್ ಮಾಡಿ 2 ಬಾರಿ ಓಡಿದ್ದರು. ಆದರೆ ಲೆಗ್ ಅಂಪೈರ್ ನಾನ್ ಸ್ಟ್ರೈಕ್ನಲ್ಲಿದ್ದ ಕ್ರಿಸ್ ಜೋರ್ಡನ್ ಅವರ ಮೊದಲ ರನ್ ಪೂರ್ಣವಾಗಿಲ್ಲ ಎಂದು ಶಾರ್ಟ್ ರನ್ ತೀರ್ಪು ನೀಡಿದ್ದರು.
ರಿಪ್ಲೈನಲ್ಲಿ ಈ ಬ್ಯಾಟ್ಸ್ಮನ್ ಕ್ರೀಸ್ ಅನ್ನು ಟಚ್ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ ಅಂಪೈರ್ ನೀಡಿದ ಒಂದು ಶಾರ್ಟ್ ರನ್ನ ತೀರ್ಪು ಇಡೀ ಪಂದ್ಯದ ಫಲಿತಾಂಶವನ್ನೇ ಬದಲಿಸಿತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸೆಹ್ವಾಗ್, ಡೆಲ್ಲಿ-ಪಂಜಾಬ್ ಪಂದ್ಯದ ಮ್ಯಾನ್ ಆಫ್ ಮ್ಯಾಚ್ ಆಯ್ಕೆಗೆ ನನ್ನ ಸಹಮತವಿಲ್ಲ ಎಂದಿದ್ದಾರೆ. ಏಕೆಂದರೆ ಅದು ಶಾರ್ಟ್ ರನ್ ಆಗಿರಲಿಲ್ಲ. ಹೀಗಾಗಿ ಇಂತಹ ಕೆಟ್ಟ ತೀರ್ಪು ನೀಡಿದ ಅಂಪೈರ್ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸಲ್ಲಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಹಾಗೆಯೇ ಇರ್ಫಾನ್ ಪಠಾಣ್ ಕೂಡ ಅಂಪೈರ್ ತೀರ್ಪಿನ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದು, ಆ ಒಂದು ರನ್ ಬಗ್ಗೆ ನೀವೇನು ಹೇಳ್ತೀರಾ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. ಇದೀಗ ಅಂಪೈರ್ ತೀರ್ಪಿನ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಮೂರನೇ ಅಂಪೈರ್ ಮೊರೆ ಹೋಗದೆ ನೇರವಾಗಿ ತೀರ್ಪು ನೀಡಿರುವುದು ತಪ್ಪು. ಅಂಪೈರ್ ಮಾಡಿದ ಸಣ್ಣ ತಪ್ಪಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲನುಭವಿಸಬೇಕಾಯಿತು ಎಂದು ಹಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಸೆಹ್ವಾಗ್ ಅವರ ಮ್ಯಾನ್ ಆಫ್ ದಿ ಮ್ಯಾಚ್ ಅಂಪೈರ್ ಟ್ವೀಟ್ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳು ಸಹ ವೀರು ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸುತ್ತಿದ್ದಾರೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ, ನಾನು ಕೊರೋನಾದಂತಹ ಸಮಯದಲ್ಲೂ ಉತ್ಸಾಹದಿಂದ ಬಂದಿದ್ದೇನೆ. 6 ದಿನಗಳ ಕಾಲ ಕ್ವಾರಂಟೈನ್, 5 ಕೋವಿಡ್ ಪರೀಕ್ಷೆಗಳನ್ನು ಮುಗಿಸಿ ಆಗಮಿಸಿದ್ದೇನೆ. ಆದರೆ ಒಂದು ಶಾರ್ಟ್ ರನ್ ನನಗೆ ತುಂಬಾ ನೋವುಂಟು ಮಾಡಿತು. ತಂತ್ರಜ್ಞಾನವಿದ್ದು ಕೂಡ ಅದನ್ನು ಬಳಸದಿದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ