ದುಬೈ (ಸೆ. 21): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 3ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ನಲ್ಲಿ ದೇವದತ್ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್ ಅಬ್ಬರಿಸಿದರೆ ಬೌಲಿಂಗ್ನಲ್ಲಿ ಚಹಾಲ್ ಸ್ಲಿನ್ ಮೋಡಿಯಿಂದ ಕೊಹ್ಲಿ ಪಡೆ 10 ರನ್ಗಳ ಜಯದೊಂದಿಗೆ ಐಪಿಎಲ್ 2020 ರಲ್ಲಿ ಶುಭಾರಂಭ ಮಾಡಿದೆ.
ಆರ್ಸಿಬಿ ನೀಡಿದ್ದ 164 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್(6) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್ಗೆ ಜಾನಿ ಬೈರ್ಸ್ಟೋ ಜೊತೆಯಾದ ಮನೀಶ್ ಪಾಂಡೆ ಅತ್ಯುತ್ತಮ ಆಟ ಪ್ರದರ್ಶಿಸಿದರು.
ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಆರ್ಸಿಬಿ ಬೌಲರ್ಗಳನ್ನು ಕಾಡಿದರು. ಆದರೆ, ಉತ್ತಮವಾಗೇ ಆಡುತ್ತಿದ್ದ ಮನೀಶ್ ಪಾಂಡೆ 34 ರನ್ ಗಳಿಸಿರುವಾಗ ಚಹಾಲ್ ಬೌಲಿಂಗ್ನಲ್ಲಿ ಔಟ್ ಆದರು. ಈ ಮೂಲಕ ಬೈರ್ಸ್ಟೋ-ಪಾಂಡೆ 67 ರನ್ಗಳ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.
IPL 2020 Live Score, SRH vs RCB:
ಆದರೆ, ತನ್ನ ಅದ್ಭುತ ಆಟ ಮುಂದುವರೆಸಿದ ಬೈರ್ಸ್ಟೋ ತಂಡದ ರನ್ ಗತಿಯನ್ನು ಕಡಿಮೆ ಆಗದಂತೆ ನೋಡಿಕೊಂಡರು. ಅದರಂತೆ ಅರ್ಧಶತಕವನ್ನೂ ಪೂರೈಸಿದರು. ಆದರೆ, ಈ ಸಂದರ್ಭ ನಡೆದಿದ್ದು ಚಹಾಲ್ ಸ್ಪಿನ್ ಮೋಡಿ.
ತನ್ನ ಗೂಗ್ಲಿ ಬೌಲಿಂಗ್ನಿಂದ ಬೈರ್ಸ್ಟೋ ಅವರನ್ನು ಬೌಲ್ಡ್ ಮಾಡಿದರೆ ಬಂದ ಬೆನ್ನಲ್ಲೆ ವಿಜಯ್ ಶಂಕರ್ ಕೂಡ ಚಹಾಲ್ ಸ್ಪಿನ್ ಬಲೆಗೆ ಸಿಲುಕು ಪೆವಿಲಯನ್ ಸೇರಿಕೊಂಡರು. ಬೈರ್ಸ್ಟೋ 43 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 61 ರನ್ ಗಳಿಸಿದರು. ಇದರ ಬೆನ್ನಲ್ಲೆ ಪ್ರಿಯಂ ಗರ್ಗ್ ಕೂಡ 12 ರನ್ಗೆ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟ್ಸ್ಮನ್ಗಳು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಸನ್ರೈಸರ್ಸ್ 19.4 ಓವರ್ನಲ್ಲಿ 153 ರನ್ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಆರ್ಸಿಬಿ ಪರ ಯಜುವೇಂದ್ರ ಚಹಾಲ್ 3 ವಿಕೆಟ್ ಕಿತ್ತು ಮಿಂಚಿದರೆ, ನವ್ದೀಪ್ ಸೈನಿ 2 ಹಾಗೂ ಶಿವಂ ದುಬೆ ತಲಾ 2 ವಿಕೆಟ್ ಪಡೆದರು. 10 ರನ್ಗಳ ಗೆಲುವಿನೊಂದಿಗೆ ಆರ್ಸಿಬಿ ಐಪಿಎಲ್ 2020 ರಲ್ಲಿ ಭರ್ಜರಿ ಶುಭಾರಂಭ ಮಾಡಿ 2 ಅಂಕ ತನ್ನದಾಗಿಸಿದೆ.
ಇದಕ್ಕೂ ಮೊದಲು ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಅದರಂತೆ ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಓಪನರ್ಗಳು 6 ಓವರ್ನಲ್ಲಿ 53 ರನ್ ಕಲೆಹಾಕಿದರು.
ನಂತರವೂ ತನ್ನ ಆರ್ಭಟ ಮುಂದುವರೆಸಿದ ಪಡಿಕ್ಕಲ್ 36 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಆದರೆ, ಅರ್ಧಶತಕದ ಬೆನ್ನಲ್ಲೆ 56 ರನ್ಗೆ ಔಟ್ ಆದರು. ಇದರ ಬೆನ್ನಲ್ಲೆ 27 ಎಸೆತಗಳಲ್ಲಿ 29 ರನ್ ಗಳಿಸಿದ್ದ ಫಿಂಚ್ ಕೂಡ ನಿರ್ಗಮಿಸಿ ಶಾಕ್ ನೀಡಿದರು. ನಾಯಕ ವಿರಾಟ್ ಕೊಹ್ಲಿ ತುಂಬಹೊತ್ತು ಕ್ರೀಸ್ನಲ್ಲಿ ನಿಲ್ಲದೆ 14 ರನ್ಗೆ ಔಟ್ ಆದರು.
ಬಳಿಕ ಎಬಿ ಡಿವಿಲಿಯರ್ಸ್ ಹಾಗೂ ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಎಬಿಡಿ ಕೇವಲ 30 ಎಸೆತಗಳಲ್ಲಿ 4 ಬೌಂಡಿರಿ, ಸಿಕ್ಸರ್ ಸಿಡಿಸಿ 51 ರನ್ ಚಚ್ಚಿ ಕೊನೆಯ ಓವರ್ನಲ್ಲಿ ಔಟ್ ಆದರು. ಅಂತಿಮವಾಗಿ ಆರ್ಸಿಬಿ ನಿಗದಿತ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು. ಹೈದರಾಬಾದ್ ಪರ ನಟರಾಜನ್, ಅಭಿಷೇಕ್ ಶರ್ಮಾ ಹಾಗೂ ವಿಜಯ್ ಶಂಕರ್ ತಲಾ 1 ವಿಕೆಟ್ ಕಿತ್ತರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ