Devdutt Padikkal: ಪದಾರ್ಪಣೆ ಪಂದ್ಯದಲ್ಲಿ ಪಡಿಕ್ಕಲ್ ಮ್ಯಾಜಿಕ್: ಕನ್ನಡಿಗನ ಅರ್ಧಶತಕದ ಹಿಂದಿದೆ ರೋಚಕ ಸಂಗತಿ

IPL 2020 SRH vs RCB: ಆರಂಭದಿಂದಲೇ ಆಕ್ರಮಣ ಶೈಲಿಯ ಆಟಕ್ಕೆ ಮೊರೆಹೋದ ದೇವದತ್ ಪಡಿಕ್ಕಲ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು. ಫಿಂಚ್ ಜೊತೆಗೂಡಿ ಮೊದಲ ವಿಕೆಟ್​ಗೆ 90 ರನ್​ಗಳ ಕಾಣಿಕೆ ನೀಡಿದರು.

ದೇವದತ್ ಪಡಿಕ್ಕಲ್.

ದೇವದತ್ ಪಡಿಕ್ಕಲ್.

 • Share this:
  ದುಬೈ (ಸೆ. 22): ಸೋಮವಾರ ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 10 ರನ್​ಗಳ ರೋಚಕ ಜಯ ಸಾಧಿಸಿತು. ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ ಮಣ್ಣುಮುಕ್ಕಿಸಿದ ಕೊಹ್ಲಿ ಪಡೆ ಮೊದಲ ಗೆಲುವಿನೊಂದಿಗೆ ಉತ್ತಮ ಶುಭಾಶರಂಭ ಮಾಡಿತು. ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕನ್ನಡಿಗ ದೇವದತ್ ಪಡಿಕ್ಕಲ್ ಎಂದರೆ ತಪ್ಪಾಗಲಾರದು.

  ಟಾಸ್ ಸೋತ ಆರ್​ಸಿಬಿ ಬ್ಯಾಟಿಂಗ್​ಗೆ ಇಳಿಯಿತು. ಬಲಿಷ್ಠ ವಾರ್ನರ್ ಪಡೆಗೆ ದೊಡ್ಡ ಟಾರ್ಗೆಟ್ ನೀಡಲೇಬೇಕಾದ ಅನಿವಾರ್ಯತೆ ಕೊಹ್ಲಿ ಪಡೆಯಲ್ಲಿತ್ತು. ಇದರಲ್ಲಿ ಓಪನರ್​ಗಳ ಪಾತ್ರವೂ ಮುಖ್ಯವಾಗಿತ್ತು. ಅದರಂತೆ ಆ್ಯರೋನ್ ಫಿಂಚ್ ಜೊತೆ ಇನ್ನಿಂಗ್ಸ್​ ಆರಂಭಿಸಿದ ದೇವದತ್ ಪಡಿಕ್ಕಲ್ ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅಬ್ಬರಿಸಿದರು.

  IPL 2020 SRH vs RCB: ರೋಚಕ ಪಂದ್ಯದಲ್ಲಿ ಗೆದ್ದ ಕೊಹ್ಲಿ ಪಡೆ: ಐಪಿಎಲ್ 2020ರಲ್ಲಿ ಆರ್​ಸಿಬಿ ಭರ್ಜರಿ ಶುಭಾರಂಭ

  ಆರಂಭದಿಂದಲೇ ಆಕ್ರಮಣ ಶೈಲಿಯ ಆಟಕ್ಕೆ ಮೊರೆಹೋದ ಪಡಿಕ್ಕಲ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು. ಫಿಂಚ್ ಜೊತೆಗೂಡಿ ಮೊದಲ ವಿಕೆಟ್​ಗೆ 90 ರನ್​ಗಳ ಕಾಣಿಕೆ ನೀಡಿದರು. ಕೇವಲ 42 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ 56 ರನ್ ಗಳಿಸಿದರು. ಈ ಮೂಲಕ ನೂತನ ದಾಖಲೆ ಬರೆದರು.

  ಮೊದಲನೇಯದಾಗಿ ಪಡಿಕ್ಕಲ್‌ ಆರ್‌ಸಿಬಿ ತಂಡದ ಪರ ಪದಾರ್ಪಣೆಯ ಪಂದ್ಯದಲ್ಲಿ ಅತ್ಯಧಿಕ ರನ್‌ ಗಳಿಸಿದ ಎರಡನೇ ಆರಂಭಿಕ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. 2011ರಲ್ಲಿ ಕ್ರಿಸ್‌ ಗೇಲ್‌ ಆರ್​ಸಿಬಿ ಪರ ತಮ್ಮ ಮೊದಲ ಪಂದ್ಯದಲ್ಲಿ ಓಪನರ್‌ ಆಗಿ ಶತಕ ಬಾರಿಸಿದ್ದರು. ಬೆಂಗಳೂರು ತಂಡದ ಪರ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ 5ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು.

  ಇಷ್ಟಲ್ಲದೆ ಪಡಿಕ್ಕಲ್​ ಬಿಸಿಸಿಐ ಆಯೋಜನೆಯ ವಿಜಯ್​ ಹಜಾರೆ ಟ್ರೋಫಿ, ರಣಜಿ, ಹಾಗೂ ಸೈಯ್ಯದ್​ ಮುಷ್ತಾಕ್​ ಅಲಿ ಟಿ-20 ಟೂರ್ನಿಗಳಲ್ಲೂ ಎಲ್ಲದರಲ್ಲೂ ಪದಾರ್ಪಣೆಯ ಪಂದ್ಯಗಳಲ್ಲಿ 50+ ಸ್ಕೋರ್‌ ಮಾಡಿದ ವಿಶೇಷ ದಾಖಲೆ ಹೊಂದಿದ್ದಾರೆ.

  ದೇವದತ್ 2019ರಲ್ಲಿ ರಾಯಲ್​ ಚಾಲೆಂಜರ್ಸ್​ ತಂಡ ಸೇರಿಕೊಂಡಿದ್ದರು. ಆದರೆ, ಈವರೆಗೆ ಒಂದೇ ಒಂದು ಪಂದ್ಯ ಆಡಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಕಳೆದ ವರ್ಷ ನಡೆದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಪಡಿಕ್ಕಲ್‌ ಕರ್ನಾಟಕ ತಂಡದ ಪರ 580 ರನ್‌ಗಳನ್ನು ಬಾರಿಸಿದ್ದರು.

  IPL 2020: ಆ ಕನ್ನಡಿಗನನ್ನು ಸೂಪರ್ ಓವರ್​ನಲ್ಲಿ ಕಳುಹಿಸುವಂತೆ ನಾನು ಕಿರುಚಿದೆ: ಆಕಾಶ್ ಚೋಪ್ರಾ

  ಟೂರ್ನಿಯಲ್ಲಿ 175ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ 64 ರನ್‌ಗಳ ಸರಾಸರಿ ಹೊಂದಿದ್ದರು. ರಣಜಿ ಟ್ರೋಫಿ ಟೂರ್ನಿಯಲ್ಲೂ ಕರ್ನಾಟಕ ರಣಜಿ ತಂಡದ ಪರ 60+ ಬ್ಯಾಟಿಂಗ್‌ ಸರಾಸರಿಯಲ್ಲಿ 900ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ್ದರು.

  ಇವರ ಈ ಪ್ರತಿಭೆಯನ್ನು ಕಂಡ ಆರ್​ಸಿಬಿ ಈ ಬಾರಿಯ ಐಪಿಎಲ್​ನಲ್ಲಿ ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ನೀಡಿತು. ಅದರಂತೆ ನಾಯಕ ಹಾಗೂ ಫ್ರಾಂಚೈಸಿ ನಂಬಿಕೆ ಉಳಿಸಿಕೊಂಡ ಪಡಿಕ್ಕಲ್ ತಮ್ಮ ಚೊಚ್ಚಲ ಪಂದ್ಯದಲ್ಲೇ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
  Published by:Vinay Bhat
  First published: