Vinay BhatVinay Bhat
|
news18-kannada Updated:November 3, 2020, 10:59 PM IST
SRH vs MI
ಶಾರ್ಜಾ (ನ. 03): ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ 13ನೇ ಆವೃತ್ತಿ ಐಪಿಎಲ್ನ ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ ಅಮೋಘ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶ ಪಡೆದಿದೆ. ಇದು ವಾರ್ನರ್ ಪಡೆಗೆ ಮಾಡು ಇಲ್ಲ ಮಡಿ ಪಂದ್ಯವಾಗಿತ್ತು. ಗೆದ್ದರಷ್ಟೆ ಪ್ಲೇ ಆಫ್ ಅವಕಾಶವಿದ್ದ ಪಂದ್ಯದಲ್ಲಿ ಬ್ಯಾಟಿಂಗ್ - ಬೌಲಿಂಗ್ ಎರಡರಲ್ಲೂ ಭರ್ಜರಿ ಪ್ರದರ್ಶನ ತೋರಿದ ಎಸ್ಆರ್ಹೆಚ್ 10 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಕೆಕೆಆರ್ ಪ್ಲೇ ಆಫ್ ಕನಸು ಕನಸಾಗಿಯೆ ಉಳಿದಿದ್ದು ಟೂರ್ನಿಯಿಂದ ಹೊರಬಿದ್ದಿದೆ.
ಮುಂಬೈ ನೀಡಿದ್ದ 150 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್ಗಳಾದ ನಾಯಕ ಡೇವಿಡ್ ವಾರ್ನರ್ ಹಾಗೂ ವೃದ್ದಿಮಾನ್ ಸಾಹ ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿ 56 ರನ್ ಚಚ್ಚಿದರು.
ನಂತರವೂ ಮುಂದುವರೆದ ಸಾಹ-ವಾರ್ನರ್ ಆರ್ಭಟ ಶತಕದ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದೊಡ್ಡುವ ತನಕ ನಡೆಯಿತು. ಜೊತೆಗೆ ಇವರಿಬ್ಬರು ಅರ್ಧಶತಕ ಸಿಡಿಸಿ ಮಿಂಚಿದರು. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಹೈದರಾಬಾದ್ ಆಕರ್ಷಕ ಆಟವಾಡಿತು. ವಾರ್ನರ್ 58 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ನೊಂದಿಗೆ ಅಜೇಯ 85 ರನ್ ಹಾಗೂ ಸಾಹ 45 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ನೊಂದಿಗೆ ಅಜೇಯ 58 ರನ್ ಸಿಡಿಸಿದರು.ಅಂತಿಮವಾಗಿ ಹೈದರಾಬಾದ್ 17.1 ಓವರ್ನಲ್ಲೇ ವಿಕೆಟ್ ನಷ್ಟವಿಲ್ಲದೆ 151 ರನ್ ಗಳಿಸಿ ಗೆಲುವಿನ ಗೆರೆ ಮುಟ್ಟಿತು. ಈ ಮೂಲಕ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತು.
ನ. 5 ರಂದು ಮುಂಬೈ ಹಾಗೂ ಡೆಲ್ಲಿ ಮೊದಲ ಕ್ವಾಲಿಫಯರ್ನಲ್ಲಿ ಮುಖಾಮುಖಿ ಆಗಲಿದ್ದರೆ, ನ. 6 ರಂದು ಆರ್ಸಿಬಿ ಹಾಗೂ ಹೈದರಾಬಾದ್ ಎಲಿಮಿನೇಟರ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಮುಂಬೈ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತು. ಇಂಜುರಿಯಿಂದ ಗುಣಮುಖರಾಗಿ ಕಮ್ಬ್ಯಾಕ್ ಮಾಡಿರುವ ನಾಯಕ ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿ ಔಟ್ ಆದರು. ಡಿಕಾಕ್ 2 ಬೌಂಡರಿ, 2 ಸಿಕ್ಸರ್ ಸಿಡಿಸಿ 13 ಎಸೆತಗಳಲ್ಲಿ 25 ರನ್ ಬಾರಿಸಿ ನಿರ್ಗಮಿಸಿದರು.
ಚೆನ್ನಾಗಿಯೇ ಆಡುತ್ತಿದ್ದ ಸೂರ್ಯಕುಮಾರ್(36) ನದೀಂ ಸ್ಪಿನ್ ಬಲೆಗೆ ಸಿಲುಕಿದರೆ, ಕ್ರುನಾಲ್ ಪಾಂಡ್ಯ ಸೊನ್ನೆ ಸುತ್ತಿದರು. ಸೌರಭ್ ತಿವಾರಿ ಆಟ 1 ರನ್ಗೆ ಅಂತ್ಯವಾಯಿತು. ಇಶಾನ್ ಕಿಶನ್ 1 ಬೌಂಡರಿ, 2 ಸಿಕ್ಸರ್ ಸಿಡಿಸಿ 33 ರನ್ ಗಳಿಸಿದರು.
ಅಂತಿಮ ಹಂತದಲ್ಲಿ ಕೀರೊನ್ ಪೊಲಾರ್ಡ್ ಅಬ್ಬರಿಸಿ ತಂಡದ ರನ್ ಗತಿಯನ್ನು ಕೊಂಚ ಏರಿಸಿದರು. ಪೊಲಾರ್ಡ್ 25 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಿಡಿಸಿ 41 ರನ್ ಚಚ್ಚಿದರು.
ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ಹೈದರಾಬಾದ್ ಪರ ಸಂದೀಪ್ ಶರ್ಮಾ 3 ವಿಕೆಟ್ ಕಿತ್ತರೆ, ಶಹ್ಬಾಜ್ ನದೀಂ 2 ಹಾಗೂ ಜೇಸನ್ ಹೋಲ್ಡರ್ ತಲಾ ರಶೀದ್ ಖಾನ್ 1 ವಿಕೆಟ್ ಪಡೆದರು.
Published by:
Vinay Bhat
First published:
November 3, 2020, 10:58 PM IST