ಶಾರ್ಜಾ (ನ. 03): ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಡೇವಿಡ್ ವಾರ್ನರ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ನಡುವಣ ಲೀಗ್ ಹಂತದ ಅಂತಿಮ ಪಂದ್ಯ ಕುತೂಹಲ ಮೂಡಿಸಿದೆ. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 149 ರನ್ ಗಳಿಸಿದೆಯಷ್ಟೆ. ಇವತ್ತಿನ ಪಂದ್ಯದಲ್ಲಿ ವಾರ್ನರ್ ಪಡೆಗೆ ಮಾಡು ಇಲ್ಲ ಮಡಿ ಪಂದ್ಯವಾಗಿದೆ. ಈ ಪಂದ್ಯದ ಫಲಿತಾಂಶದ ಮೇಲೆ ಕೆಕೆಆರ್ ತಂಡದ ಪ್ಲೇ ಆಫ್ ಪ್ರವೇಶದ ಅವಕಾಶ ನಿಂತಿದೆ. ಹೈದರಾಬಾದ್ ಸೋತರೆ ಕೆಕೆಆರ್ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶ ಪಡೆಯುತ್ತದೆ.
ಸದ್ಯ 150 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ಹೈದರಾಬಾದ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಓಪನರ್ಗಳಾದ ನಾಯಕ ಡೇವಿಡ್ ವಾರ್ನರ್ ಹಾಗೂ ವೃದ್ದಿಮಾನ್ ಸಾಹ ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿ 56 ರನ್ ಚಚ್ಚಿದರು.
ನಂತರವೂ ಮುಂದುವರೆದ ಇವರಿಬ್ಬರ ಆರ್ಭಟ ಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದಾರೆ. ಈ ನಡುವೆ ವಾರ್ನರ್ ಹಾಗೂ ಸಾಹ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಮುಂಬೈ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ 2 ವಿಕೆಟ್ ಕಳೆದುಕೊಂಡಿತು. ಇಂಜುರಿಯಿಂದ ಗುಣಮುಖರಾಗಿ ಕಮ್ಬ್ಯಾಕ್ ಮಾಡಿರುವ ನಾಯಕ ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿ ಔಟ್ ಆದರು. ಡಿಕಾಕ್ 2 ಬೌಂಡರಿ, 2 ಸಿಕ್ಸರ್ ಸಿಡಿಸಿ 13 ಎಸೆತಗಳಲ್ಲಿ 25 ರನ್ ಬಾರಿಸಿ ನಿರ್ಗಮಿಸಿದರು.
ಚೆನ್ನಾಗಿಯೇ ಆಡುತ್ತಿದ್ದ ಸೂರ್ಯಕುಮಾರ್(36) ನದೀಂ ಸ್ಪಿನ್ ಬಲೆಗೆ ಸಿಲುಕಿದರೆ, ಕ್ರುನಾಲ್ ಪಾಂಡ್ಯ ಸೊನ್ನೆ ಸುತ್ತಿದರು. ಸೌರಭ್ ತಿವಾರಿ ಆಟ 1 ರನ್ಗೆ ಅಂತ್ಯವಾಯಿತು. ಇಶಾನ್ ಕಿಶನ್ 1 ಬೌಂಡರಿ, 2 ಸಿಕ್ಸರ್ ಸಿಡಿಸಿ 33 ರನ್ ಗಳಿಸಿದರು.
ಅಂತಿಮ ಹಂತದಲ್ಲಿ ಕೀರೊನ್ ಪೊಲಾರ್ಡ್ ಅಬ್ಬರಿಸಿ ತಂಡದ ರನ್ ಗತಿಯನ್ನು ಕೊಂಚ ಏರಿಸಿದರು. ಪೊಲಾರ್ಡ್ 25 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಿಡಿಸಿ 41 ರನ್ ಚಚ್ಚಿದರು.
ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ಹೈದರಾಬಾದ್ ಪರ ಸಂದೀಪ್ ಶರ್ಮಾ 3 ವಿಕೆಟ್ ಕಿತ್ತರೆ, ಶಹ್ಬಾಜ್ ನದೀಂ 2 ಹಾಗೂ ಜೇಸನ್ ಹೋಲ್ಡರ್ ತಲಾ ರಶೀದ್ ಖಾನ್ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ), ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ನಥನ್ ಕಲ್ಟರ್ ನೈಲ್, ಜೇಮ್ಸ್ ಪ್ಯಾಟಿನ್ಸನ್, ಧವಳ್ ಕುಲ್ಕರ್ಣಿ.
ಸನ್ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ವೃದ್ದಿಮಾನ್ ಸಾಹ (ವಿ.ಕೀ), ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ಜೇಸನ್ ಹೋಲ್ಡರ್, ಪ್ರಿಯಂ ಗರ್ಗ್, ಶಹ್ಬಾಜ್ ನದೀಂ, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್.