RR vs SRH, IPL 2020: ಮನೀಶ್ ಮನಮೋಹಕ ಆಟಕ್ಕೆ ಆರ್​ಆರ್​ ತತ್ತರ: ಎಸ್​ಆರ್​ಹೆಚ್​ ಪ್ಲೇ ಆಫ್ ಕನಸು ಜೀವಂತ

IPL 2020, Rajasthan Royals vs Sunrisers Hyderabad: ಈ ಸಂದರ್ಭ ಒಂದಾದ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಭರ್ಜರಿ ಆಟ ಪ್ರದರ್ಶಿಸಿದರು. ಅದರಲ್ಲೂ ಪಾಂಡೆ ಆಕರ್ಷಕ ಅರ್ಧಶತಕ ಸಿಡಿಸಿ ಆರ್ಭಟಿಸಿದರೆ, ಸೆಟ್ ಆಗಿದ್ದ ಶಂಕರ್ ತಮ್ಮ ಬ್ಯಾಟಿಂಗ್ ಕೌಶಲ್ಯ ತೋರಿದರು.

ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್

ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್

 • Share this:
  ದುಬೈ (ಅ. 22): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಅವರ ಶತಕದ ಜೊತೆಯಾಟದ ನೆರವಿನಿಂದ ಎಸ್​ಆರ್​ಹೆಚ್ ತಂಡ 8 ವಿಕೆಟ್​ಗಳ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ. ಇತ್ತ ಸ್ಮಿತ್ ಪಡೆ ಟೂರ್ನಿಯಲ್ಲಿ ಏಳನೇ ಸೋಲು ಕಂಡಿದೆ.

  ಆರ್​ಆರ್​ ನೀಡಿದ್ದ 155 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಡೇವಿಡ್ ವಾರ್ನರ್ ಮೊದಲ ಓವರ್​ನಲ್ಲೇ ಒಂದು ಬೌಂಡರಿ ಬಾರಿಸಿ ಔಟ್ ಆದರೆ, ಜಾನಿ ಬೈರ್​ಸ್ಟೋ 10 ರನ್​​ಗೆ ಬ್ಯಾಟ್ ಕೆಳಗಿಟ್ಟರು.

  ಈ ಸಂದರ್ಭ ಒಂದಾದ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಭರ್ಜರಿ ಆಟ ಪ್ರದರ್ಶಿಸಿದರು. ಅದರಲ್ಲೂ ಪಾಂಡೆ ಆಕರ್ಷಕ ಅರ್ಧಶತಕ ಸಿಡಿಸಿ ಆರ್ಭಟಿಸಿದರೆ, ಸೆಟ್ ಆಗಿದ್ದ ಶಂಕರ್ ತಮ್ಮ ಬ್ಯಾಟಿಂಗ್ ಕೌಶಲ್ಯ ತೋರಿದರು. ಈ ಜೋಡಿ ಶತಕದ ಜೊತೆಯಾಟ ಆಡಿತು.

  ಪಾಂಡೆ-ಶಂಕರ್ 112 ರನ್​ಗಳ ಕಾಣಿಕೆಯ ನೆರವಿನಿಂದ ಹೈದರಾಬಾದ್ ತಂಡ 19.1 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 155 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ಕಂಡಿತು. ಪಾಂಡೆ 47 ಎಸೆತಗಳಲ್ಲಿ 4 ಬೌಂಡರಿ, 8 ಸಿಕ್ಸರ್ ಸಿಡಿಸಿ ಅಜೇಯ 83 ರನ್ ಚಚ್ಚಿದರೆ, ಶಂಕರ್ 51 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ ಅಜೇಯ 52 ರನ್ ಗಳಿಸಿದರು. ಆರ್​ಆರ್​ ಪರ ಜೋಫ್ರಾ ಆರ್ಚರ್ 2 ವಿಕೆಟ್ ಪಡೆದರು.

  ಇದಕ್ಕೂ ಮೊದಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಆರ್​ ತಂಡದ ಆರಂಭದಲ್ಲೇ ಆಘಾತ ಅನುಭವಿಸಿತು. ಬೆನ್ ಸ್ಟೋಕ್ಸ್ ಜೊತೆ ಓಪನರ್ ಆಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ 13 ಎಸೆತಗಳಲ್ಲಿ 19 ರನ್ ಬಾರಿಸಿ ಔಟ್ ಆದರು. ಆದರೆ, ಎರಡನೇ ವಿಕೆಟ್​ಗೆ ಸ್ಟೋಕ್ಸ್​ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ಜೊತೆಯಾಟ ಆಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ 56 ರನ್​ಗಳ ಕಾಣಿಕೆ ನೀಡಿತು.

  ಈ ಸಂದರ್ಭ ಬೌಲಿಂಗ್​ಗೆ ಇಳಿದ ಹೋಲ್ಡರ್ 36 ರನ್ ಬಾರಿಸಿದ್ದ ಸ್ಯಾಮ್ಸನ್ ಅವರನ್ನು ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೆ 30 ರನ್ ಗಳಿಸಿದ್ದ ಸ್ಟೋಕ್ಸ್ ಕೂಡ ನಿರ್ಗಮಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಜೋಸ್ ಬಟ್ಲರ್ ಈ ಬಾರಿ ಕೇವಲ 9 ರನ್​ಗೆ ಸುಸ್ತಾದರು. ಸ್ಟೀವ್ ಸ್ಮಿತ್ 19 ರನ್ ಗಳಿಸಿದರಷ್ಟೆ. ಪ್ರಿಯಂ ಗರ್ಗ್​ 12 ಎಸೆತಗಳಲ್ಲಿ 20 ರನ್ ಚಚ್ಚಿದರು.

  ಅಂತಿಮವಾಗಿ ಆರ್​ಆರ್​ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಹೈದರಾಬಾದ್ ಪರ ಜೇಸನ್ ಹೋಲ್ಡರ್ 3 ವಿಕೆಟ್ ಕಿತ್ತರೆ, ರಶೀದ್ ಖಾನ್, ವಿಜಯ್ ಶಂಕರ್ ತಲಾ 1 ವಿಕೆಟ್ ಪಡೆದರು.
  Published by:Vinay Bhat
  First published: