IPL

  • associate partner

IPL 2020, RR vs RCB: ಸೋಲುವ ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಡಿವಿಲಿಯರ್ಸ್​: ಆರ್​ಸಿಬಿಗೆ 7 ವಿಕೆಟ್​ಗಳ ಭರ್ಜರಿ ಜಯ

ಎಬಿ ಡಿವಿಲಿಯರ್ಸ್​ ಜೊತೆಯಾದ ಗುರುಕೀರತ್ ಮನ್​ ಸಿಂಗ್ ಗೆಲುವಿಗಾಗಿ ಹೋರಾಟ ನಡೆಸಿದರಾದರು ಅದರಲ್ಲೂ 19ನೇ ಓವರ್​ನಲ್ಲಿ ಎಬಿಡಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಸಿಕ್ಸರ್​ಗಳ ಮಳೆ ಸುರಿಸಿದರು. ಈ ಓವರ್​ನಲ್ಲಿ 25 ರನ್ ಮೂಡಿಬಂತು

news18-kannada
Updated:October 17, 2020, 7:16 PM IST
IPL 2020, RR vs RCB: ಸೋಲುವ ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಡಿವಿಲಿಯರ್ಸ್​: ಆರ್​ಸಿಬಿಗೆ 7 ವಿಕೆಟ್​ಗಳ ಭರ್ಜರಿ ಜಯ
ಎಬಿ ಡಿವಿಲಿಯರ್ಸ್​
  • Share this:
ದುಬೈ (ಅ. 17): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 33ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ರೋಚಕ ಗೆಲುವು ಕಂಡಿದೆ. ಎಬಿ ಡಿವಿಲಿಯರ್ಸ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೊಹ್ಲಿ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇತ್ತ ಆರ್​ಆರ್​ ಟೂರ್ನಿಯಲ್ಲಿ 6ನೇ ಸೋಲುಕಂಡು ಪ್ಲೇ ಆಫ್ ಹಾದಿಯನ್ನ ಇನ್ನಷ್ಟು ಕಠಿಣಗೊಳಿಸಿದೆ.

ಆರ್​ಆರ್​ ನೀಡಿದ್ದ 178 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಆರಂಭದಿಂದಲೇ ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ಮೊದಲ ವಿಕೆಟ್​ಗೆ 23 ರನ್​ಗಳ ಕಾಣಿಕೆ ನೀಡಿದರಷ್ಟೆ. ಫಿಂಚ್ ಕೇವಲ 14 ರನ್​ಗೆ ನಿರ್ಗಮಿಸಿದರು. ಬಳಿಕ ಪಡಿಕ್ಕಲ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ರನ್ ಕಲೆಹಾಕಲು ಹೊರಟರು.

ಆದರೆ, ಆರ್​ಆರ್​ ಬೌಲರ್​ಗಳು ಮಾರಕ ದಾಳಿ ಸಂಘಟಿಸಿದ ಕಾರಣ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ರನ್ ಕಲೆಹಾಕಲು ಪರದಾಡಿದರು. ಪಡಿಕ್ಕಲ್-ಕೊಹ್ಲಿ 63 ಎಸೆತಗಳಲ್ಲಿ 79 ರನ್ ಗಳಿಸಿದರಷ್ಟೆ. ಪಡಿಕ್ಕಲ್ 37 ಎಸೆತಗಳಲ್ಲಿ 35 ರನ್ ಗಳಿಸಿ ಔಟ್ ಆದರೆ, ಕೊಹ್ಲಿ 32 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ 43 ರನ್​ಗೆ ಬ್ಯಾಟ್ ಕೆಳಗಿಟ್ಟರು.
ಬಳಿಕ ಎಬಿ ಡಿವಿಲಿಯರ್ಸ್​ ಜೊತೆಯಾದ ಗುರುಕೀರತ್ ಮನ್​ ಸಿಂಗ್ ಗೆಲುವಿಗಾಗಿ ಹೋರಾಟ ನಡೆಸಿದರು. ಅದರಲ್ಲೂ 19ನೇ ಓವರ್​ನಲ್ಲಿ ಎಬಿಡಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಸಿಕ್ಸರ್​ಗಳ ಮಳೆ ಸುರಿಸಿದರು. ಈ ಓವರ್​ನಲ್ಲಿ 25 ರನ್ ಮೂಡಿಬಂತು. ಹೀಗಾಗಿ ಕೊನೆಯ ಓವರ್​ನಲ್ಲಿ ಆರ್​ಸಿಬಿಗೆ ಗೆಲ್ಲಲು 10 ರನ್​ಗಳ ಅವಶ್ಯಕತೆಯಿತ್ತು.

ಎಬಿಡಿ ಬ್ಯಾಟಿಂಗ್​ನಲ್ಲಿ ಇದ್ದಮೇಲೆ ಅಲ್ಲಿ ಸೋಲಿಗೆ ಜಾಗವಿಲ್ಲ ಎಂಬಂತೆ ಆರ್​ಸಿಬಿ 19.4 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು. ಡಿವಿಲಿಯರ್ಸ್​ ಕೇವಲ 22 ಎಸೆತಗಳಲ್ಲಿ 1 ಬೌಂಡರಿ, 6 ಸಿಕ್ಸರ್ ಸಿಡಿಸಿ ಅಜೇಯ 55 ರನ್ ಚಚ್ಚಿದರು. ಗುರುಕೀರತ್ ಅಜೇಯ 19 ರನ್ ಗಳಿಸಿದರು. ಆರ್​ಆರ್​ ಪರ ಕಾರ್ತಿಕ್ ತ್ಯಾಗಿ, ರಾಹುಕ್ ತೇವಾಟಿಯ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ರಾಜಸ್ಥಾನ್ ಪರ ಬ್ಯಾಟಿಂಗ್​ಗೆ ಇಳಿದ ರಾಬಿನ್ ಉತ್ತಪ್ಪ ಹಾಗೂ ಬೆನ್ ಸ್ಟೋಕ್ಸ್ ಉತ್ತಮವಾಗಿ ಬ್ಯಾಟ್ ಬೀಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಇವರಿಬ್ಬರು ರನ್ ಮಳೆಯನ್ನ ಸುರಿಸಿದರು. ಅದರಲ್ಲೂ ಉತ್ತಪ್ಪ ಸ್ಫೋಟಕ ಆಟವಾಡಿದರು. ಆದರೆ ಸ್ಟೋಕ್ಸ್(15)​ 6ನೇ ಓವರ್​ನ ಕ್ರಿಸ್ ಮೊರೀಸ್ ಬೌಲಿಂಗ್​ನಲ್ಲಿ ಔಟ್ ಆದರು. ಇವರಿಬ್ಬರು ಅರ್ಧಶತಕದ ಜೊತೆಯಾಟ ಆಡಿದರು.

ಸ್ಟೋಕ್ಸ್​ ಬೆನ್ನಲ್ಲೇ 22 ಎಸೆತಗಳಲ್ಲಿ 41 ರನ್ ಬಾರಿಸಿದ್ದ ಉತ್ತಪ್ಪ ಕೂಡ ನಿರ್ಗಮಿಸಿದರು. ಸಂಜು ಸ್ಯಾಮ್ಸನ್(9) ಕೂ ನಿರಾಸೆ ಮೂಡಿಸಿದರು. ಈ ಸಂದರ್ಭ ಜೊತೆಯಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಅಮೋಘ ಆಟ ಪ್ರದರ್ಶಿಸಿದರು. ಕುಸಿದ ತಂಡಕ್ಕೆ ಆಸರೆಯಾದ ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು.

ಆದರೆ, 16ನೇ ಓವರ್​ನಲ್ಲಿ ಡೇಂಜರಸ್ ಬಟ್ಲರ್ ಔಟ್ ಆದರು. ಬಟ್ಲರ್ 25 ಎಸೆತಗಳಲ್ಲಿ 24 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಸ್ಮಿತ್ ಆಕರ್ಷಕ ಅರ್ಧಶತಕ ಸಿಡಿಸಿ ನಾಯಕನ ಆಟವಾಡಿದರೆ, ರಾಹುಲ್ ತೇವಾಟಿಯ ತಮ್ಮ ಶೈಲಿಯಲ್ಲಿ ಬ್ಯಾಟ್ ಬೀಸಿದರು. ಎದುರಾಳಿಗೆ ಕಠಿಣ ಟಾರ್ಗೆಟ್ ನೀಡಲು ಪ್ರಮುಖ ಪಾತ್ರವಹಿಸಿದರು.

ಸ್ಮಿತ್ 36 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ 57 ರನ್ ಚಚ್ಚಿದರು. ತೇವಾಟಿಯ ಕೇವಲ 11 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದರು. ಅಂತಿಮವಾಗಿ ಆರ್​ಆರ್​ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸಿತು. ಆರ್​ಸಿಬಿ ಪರ ಕ್ರಿಸ್ ಮೊರೀಸ್ 4 ವಿಕೆಟ್ ಕಿತ್ತರೆ, ಯಜುವೇಂದ್ರ ಚಹಾಲ್ ತಲಾ 2 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಆರ್​ಸಿಬಿ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಮೊಹಮ್ಮದ್ ಸಿರಾಜ್ ಬದಲು ಗುರುಕೀರತ್ ಮನ್​ ಸಿಂಗ್ ಹಾಗೂ ಶಿವಂ ದುವೆ ಬದಲು ಶಹ್ಬಾಜ್ ಅಹ್ಮದ್ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಆರ್​ಆರ್​ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಆಡುತ್ತಿದ್ದಾರೆ.
Published by: Vinay Bhat
First published: October 17, 2020, 7:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading