ದುಬೈ (ಅ. 17): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 33ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಗೆದ್ದು ರಾಜಸ್ಥಾನ್ ಪರ ಬ್ಯಾಟಿಂಗ್ಗೆ ಇಳಿದ ರಾಬಿನ್ ಉತ್ತಪ್ಪ ಹಾಗೂ ಬೆನ್ ಸ್ಟೋಕ್ಸ್ ಉತ್ತಮವಾಗಿ ಬ್ಯಾಟ್ ಬೀಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಇವರಿಬ್ಬರು ರನ್ ಮಳೆಯನ್ನ ಸುರಿಸಿದರು. ಅದರಲ್ಲೂ ಉತ್ತಪ್ಪ ಸ್ಫೋಟಕ ಆಟವಾಡಿದರು. ಆದರೆ ಸ್ಟೋಕ್ಸ್(15) 6ನೇ ಓವರ್ನ ಕ್ರಿಸ್ ಮೊರೀಸ್ ಬೌಲಿಂಗ್ನಲ್ಲಿ ಔಟ್ ಆದರು. ಇವರಿಬ್ಬರು ಅರ್ಧಶತಕದ ಜೊತೆಯಾಟ ಆಡಿದರು.
ಸ್ಟೋಕ್ಸ್ ಬೆನ್ನಲ್ಲೇ 22 ಎಸೆತಗಳಲ್ಲಿ 41 ರನ್ ಬಾರಿಸಿದ್ದ ಉತ್ತಪ್ಪ ಕೂಡ ನಿರ್ಗಮಿಸಿದರು. ಸಂಜು ಸ್ಯಾಮ್ಸನ್(9) ಕೂ ನಿರಾಸೆ ಮೂಡಿಸಿದರು. ಈ ಸಂದರ್ಭ ಜೊತೆಯಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಅಮೋಘ ಆಟ ಪ್ರದರ್ಶಿಸಿದರು. ಕುಸಿದ ತಂಡಕ್ಕೆ ಆಸರೆಯಾದ ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು.
ಆದರೆ, 16ನೇ ಓವರ್ನಲ್ಲಿ ಡೇಂಜರಸ್ ಬಟ್ಲರ್ ಔಟ್ ಆಗಿದ್ದು, ತಂಡಕ್ಕೆ ಮತ್ತೆ ಹೊಡೆತ ಬಿದ್ದಿತು. ಬಟ್ಲರ್ 25 ಎಸೆತಗಳಲ್ಲಿ 24 ರನ್ ಗಳಿಸಿದರು.
ಇಂದಿನ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಮೊಹಮ್ಮದ್ ಸಿರಾಜ್ ಬದಲು ಗುರುಕೀರತ್ ಮನ್ ಸಿಂಗ್ ಹಾಗೂ ಶಿವಂ ದುವೆ ಬದಲು ಶಹ್ಬಾಜ್ ಅಹ್ಮದ್ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಆರ್ಆರ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಆಡುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ಜಯದೇವ್ ಉನಾದ್ಕಟ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿ.ಕೀ), ಗುರುಕೀರತ್ ಮನ್ ಸಿಂಗ್, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ಶಹ್ಬಾಜ್ ಅಹ್ಮದ್, ನವದೀಪ್ ಸೈನಿ, ಯಜುವೇಂದ್ರ ಚಾಹಲ್.
ಆರ್ಸಿಬಿ ತಂಡ ಇಲ್ಲಿಯವರೆಗೆ ಆಡಿದ 8 ಪಂದ್ಯಗಳ ಪೈಕಿ 5ರಲ್ಲಿ ಜಯ ಸಾಧಿಸಿ 3 ಪಂದ್ಯಗಳನ್ನು ಕೈಚೆಲ್ಲಿದೆ. ಇತ್ತ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ರಾಜಸ್ಥಾನ ತಂಡ ಆಡಿದ 8 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 5 ಪಂದ್ಯಗಳಲ್ಲಿ ಸೋಲು ಕಂಡಿದೆ.
ಕೊಹ್ಲಿ ಪಡೆ ಕಳೆದ ಕಿಂಗ್ಸ್ ಇಲೆವೆನ್ ವಿರುದ್ಧ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಲು ಮುಂದಾಗಿ ಕೈಸುಟ್ಟುಕೊಂಡಿದೆ. ಹೀಗಾಗಿ ಕಮ್ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿದೆ.
ಇತ್ತ ರಾಜಸ್ಥಾನ ತಂಡ ಮಧ್ಯಮ ಕ್ರಮಾಂಕದ ದೌರ್ಬಲ್ಯದಿಂದಾಗಿ ಡೆಲ್ಲಿ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿತ್ತು. ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಆಗಮನ ತಂಡಕ್ಕೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ. ಎಲ್ಲಾ ಆಟಗಾರರು ಕೂಡ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗುತ್ತಿದ್ದಾರೆ. ಕೆಲ ಸಮಯ ಸ್ಫೋಟಕ ಬ್ಯಾಟಿಂಗ್ ನಡೆಸಿ ಔಟ್ ಆಗಿ ಪೆವಿಲಿಯನ್ ಸೇರುತ್ತಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಜಯ ಗಳಿಸಿದ್ರೆ, 9 ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ಕಂಡಿದೆ. ಮೂರು ಪಂದ್ಯಗಳು ಫಲಿತಾಂಶ ಕಂಡಿಲ್ಲ.