ಶಾರ್ಜಾ (ಅ. 09): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸವಾಲಿನ ಮೊತ್ತ ಕಲೆಹಾಕಿದೆ. ಶಿಮ್ರೋನ್ ಹೆಟ್ಮೇರ್ ಹಾಗೂ ಮಾರ್ಕಸ್ ಸ್ಟಾಯಿನಿಸ್ ಅವರ ಉತ್ತಮ ಆಟದ ನೆರವಿನಿಂದ ಡೆಲ್ಲಿ 20 ಓವರ್ನಲ್ಲಿ 184 ರನ್ ಬಾರಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತನ್ನ ಮೊದಲ ಓವರ್ನಲ್ಲೇ ಜೋಫ್ರಾ ಆರ್ಚರ್ ಅವರು ಶಿಖರ್ ಧವನ್(5) ಅವರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದರು.
ಬಳಿಕ 19 ರನ್ ಬಾರಿಸಿದ್ದ ಪೃಥ್ವಿ ಶಾ ಅವರನ್ನೂ ಔಟ್ ಮಾಡಿದರು. ತಂಡಕ್ಕೆ ಆಸರೆಯಾಗಬೇಕಿದ್ದ ನಾಯಕ ಶ್ರೇಯಸ್ ಅಯ್ಯರ್ 22 ರನ್ಗೆ ಹಾಗೂ ರಿಷಭ್ ಪಂತ್ ಕೇವಲ 5 ಗಳಿಸಿರುವಾಗ ರನೌಟ್ಗೆ ಬಲಿಯಾದರು.
ಮಾರ್ಕಸ್ ಸ್ಟಾಯಿನಿಸ್ ಏಕಾಂಗಿಯಾಗಿ ಬ್ಯಾಟ್ ಬೀಸಿದರಾದರೂ ಅಂತಿಮ ಹಂತದ ವರೆಗೆ ಕ್ರೀಸ್ನಲ್ಲಿ ನಿಲ್ಲಲಿಲ್ಲ. 30 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿ 39 ರನ್ಗೆ ಔಟ್ ಆದರು. ಬಳಿಕ ಸ್ಫೋಟಕ ಆಟಕ್ಕೆ ಮುಂದಾದ ಶಿಮ್ರೋನ್ ಹೆಟ್ಮೇರ್ ತಂಡದ ಮೊತ್ತವನ್ನು 150ರ ಅಂಚಿಗೆ ತಂದಿಟ್ಟು ನಿರ್ಗಮಿಸಿದರು. ಹೆಟ್ಮೇರ್ ಕೇವಲ 24 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ ಬಾರಿಸಿ 45 ರನ್ ಚಚ್ಚಿದರು.
ಕೊನೆಯ ಹಂತದಲ್ಲು ಅಕ್ಷರ್ ಪಟೇಲ್ (17) ಹಾಗೂ ಹರ್ಷಲ್ ಪಟೇಲ್ (16) ಬ್ಯಾಟ್ ಬೀಸಿ ತಂಡದ ರನ್ ಗತಿಯನ್ನು ಏರಿಸಿದರು. ಅಂತಿಮವಾಗಿ ಡೆಲ್ಲಿ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಆರ್ಆರ್ ಪರ ಜೋಫ್ರಾ ಆರ್ಚರ್ 3 ವಿಕೆಟ್ ಕಿತ್ತರೆ, ಕಾರ್ತಿಕ್ ತ್ಯಾಗಿ, ಆ್ಯಂಡ್ರೋ ಟೈ, ಹಾಗೂ ರಾಹುಲ್ ತೇವಾಟಿಯಾ ತಲಾ 1 ವಿಕೆಟ್ ಪಡೆದರು.
ಇಂದಿನ ಪಂದ್ಯಕ್ಕೆ ಆರ್ಆರ್ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದ್ದು ಆ್ಯಂಡ್ರೋ ಟೈ ಹಾಗೂ ವರುಣ್ ಆರುಣ್ ಸ್ಥಾನ ಪಡೆದುಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಹುಲ್ ತೇವಾಟಿಯಾ, ಮಾಹಿಪಾಲ್ ಲಮ್ರೋರ್, ಶ್ರೇಯಸ್ ಗೋಪಾಲ್, ಆ್ಯಂಡ್ರೋ ಟೈ, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ವರುಣ್ ಆರುಣ್.
ಇತ್ತ ಡೆಲ್ಲಿ ತಂಡ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಇಂದುಕೂಡ ಕಣಕ್ಕಿಳಿಯುತ್ತಿದ್ದಾರೆ.
ದೆಹಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ , ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಅನ್ರಿಕ್ ನಾರ್ಟ್ಜೆ, ಹರ್ಷಲ್ ಪಟೇಲ್.
ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಸೋತು 4 ಪಂದ್ಯಗಳಲ್ಲಿ ಜಯಭೇರಿ ಸಾಧಿಸಿದ್ದು (+1.060)ನೆಟ್ ರನ್ ರೇಟ್ ನಿಂದ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ 5 ಪಂದ್ಯದಲ್ಲಿ 2 ಪಂದ್ಯದಲ್ಲಿ ಗೆದ್ದು 3 ಪಂದ್ಯಗಳಲ್ಲಿ ಸೋತಿದ್ದು (-0.826) ನೆಟ್ ರನ್ ರೇಟ್ ಮೂಲಕ ಮೂಲಕ ಪಾಯಿಂಟ್ ಟೇಬಲ್ ನಲ್ಲಿ 7ನೇ ಸ್ಥಾನದಲ್ಲಿದೆ.
ಸ್ಫೋಟಕ ಆಟಗಾರರಿಂದ ತುಂಬಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಅಗ್ರ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸುತ್ತಿರುವುದು ದೊಡ್ಡ ತಲೆನೋವಾಗಿದೆ. ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ ಇಂದಿನ ಪಂದ್ಯದಲ್ಲಿ ಮಿಂಚಲೇ ಬೇಕಾಗಿದೆ.
ಇತ್ತ ಡೆಲ್ಲಿ ತಂಡ ಅಮೋಘ ಪ್ರದರ್ಶನ ನೀಡುತ್ತಿದೆ. ಪೃಥ್ವಿ ಶಾ, ಶಿಖರ್ ಧವನ್, ನಾಯಕ ಶ್ರೇಯಸ್ ಅಯ್ಯರ್ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದಾರೆ. ಬೌಲಿಂಗ್ನಲ್ಲಿ ರಬಾಡ, ಅನ್ರಿಚ್ ನೋರ್ಜೆ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಕಳೆದ ಆರ್ಸಿಬಿ ವಿರುದ್ಧ ಮಿಂಚಿದ್ದ ಮಾರ್ಕಸ್ ಸ್ಟೋಯಿನಿಸ್ ಆಲ್ ರೌಂಡ್ ಪ್ರದರ್ಶನ ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್. ಆದರೆ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಗಾಯದ ಸಮಸ್ಯೆಯಿಂದ ಕೂಟದಿಂದ ಹೊರನಡೆದಿದ್ದು ಡೆಲ್ಲಿ ಸ್ಪಿನ್ ವಿಭಾಗಕ್ಕೆ ಕೊಂಚ ಮಟ್ಟಿನ ಹಿನ್ನಡೆಯಾಗಿದೆ.
ಇಲ್ಲಿಯವರೆಗೆ ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ ರಾಯಲ್ಸ್ ತಂಡ 11 ಪಂದ್ಯದಲ್ಲಿ ಜಯ ಗಳಿಸಿದ್ರೆ, ಡೆಲ್ಲಿ ತಂಡ 9 ಪಂದ್ಯಗಳನ್ನು ಗೆದ್ದು ಬೀಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ