ಶಾರ್ಜಾ (ಸೆ.22): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2020ರ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ರನ್ ಕಲೆಹಾಕಿದೆ. ಸಂಜು ಸ್ಯಾಮ್ಸನ್ ಹಾಗೂ ಜೋಫ್ರಾ ಆರ್ಚರ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ನಾಯಕ ಸ್ಟೀವ್ ಸ್ಮಿತ್ ಅವರ ಮನಮೋಹಕ ಅರ್ಧಶತಕದ ನೆರವಿನಿಂದ ಆರ್ಆರ್ ತಂಡ 20 ಓವರ್ನಲ್ಲಿ ಬರೋಬ್ಬರಿ 216 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಆರ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡುತ್ತಿರುವ ಯಶಸ್ವಿ ಜೈಸ್ವಾಲ್ ಕೇವಲ 6 ರನ್ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
IPL 2020 Live Score, RR vs CSK:
ನಂತರ ನಾಯಕ ಸ್ಟೀವ್ ಸ್ಮಿತ್ ಜೊತೆಯಾದ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಸ್ಫೋಟಕ ಆಟ ಪ್ರದರ್ಶಿಸಿದ ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮನಬಂದಂತೆ ಬ್ಯಾಟ್ ಬೀಸಿದ ಸ್ಯಾಮ್ಸನ್ ನೀರುಕುಡಿದಂತೆ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು.
ಈ ಜೋಡಿ ಕೇವಲ 9 ಓವರ್ನಲ್ಲೇ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಆದರೆ 12ನೇ ಓವರ್ನಲ್ಲಿ ಸ್ಯಾಮ್ಸನ್ ಮತ್ತೊಂದು ಸಿಕ್ಸ್ ಸಿಡಿಸಲು ಹೋಗಿ ಔಟ್ ಆದರು. ಸಂಜು ಕೇವಲ 32 ಎಸೆತಗಳಲ್ಲಿ 1 ಬೌಂಡರಿ ಹಾಗೂ ಬರೋಬ್ಬರಿ 9 ಸಿಕ್ಸರ್ ಸಿಡಿಸಿ 74 ರನ್ ಚಚ್ಚಿದರು. ಈ ಮೂಲಕ ಇವರಿಬ್ಬರ 121 ರನ್ಗಳ ಅಮೋಘ ಜೊತೆಯಾಟಕ್ಕೆ ಬ್ರೇಕ್ ಬಿತ್ತು.
ಬಂದ ಬೆನ್ನಲ್ಲೇ ಡೇವಿಡ್ ಮಿಲ್ಲರ್ ರನೌಟ್ ಆಗುವ ಮೂಲಕ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ರಾಬಿನ್ ಉತ್ತಪ್ಪ(5) ಕೂಡ ನಿರಾಸೆ ಮೂಡಿಸಿದರು. ಆದರೆ, ಅಂತಿಮ ಹಂತದ ವರೆಗೆ ಬ್ಯಾಟ್ ಬೀಸಿದ ನಾಯಕ ಸ್ಮಿತ್ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಏರಿಸಿದರು.
ಸ್ಮಿತ್ 47 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ 69 ರನ್ ಬಾರಿಸಿದರು. ಕೊನೆಯ ಓವರ್ನಲ್ಲಿ ಜೋಫ್ರಾ ಆರ್ಚರ್ ಆರ್ಭಟಿಸಿದರು. ಮೊದಲ ಸತತ 4 ಸಿಕ್ಸರ್ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು. ಆರ್ಚರ್ ಕೇವಲ 7 ಎಸೆತಗಳಲ್ಲಿ 27 ರನ್ ಕಲೆಹಾಕಿದರು
ಅಂತಿಮವಾಗಿ ರಾಜಸ್ಥಾನ್ ತಂಡ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ಚೆನ್ನೈ ಪರ ಸ್ಯಾಮ್ ಕುರ್ರನ್ 3 ವಿಕೆಟ್ ಕಿತ್ತರೆ ದೀಪಕ್ ಚಹಾರ್, ಲುಂಗಿ ಎನ್ಗಿಡಿ, ಹಾಗೂ ಪಿಯೂಷ್ ಚಾವ್ಲಾ ತಲಾ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ