news18-kannada Updated:October 15, 2020, 1:02 PM IST
RCB vs KXIP
ಶಾರ್ಜಾ (ಅ. 15): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿಂದು ಐಪಿಎಲ್ನ 31ನೇ ಪಂದ್ಯ ನಡೆಯಲಿದ್ದು, ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆ. ಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿ ಆಗಲಿವೆ. ಆರ್ಸಿಬಿಗೆ ಇದು ಸೇಡಿನ ಪಂದ್ಯವಾದರೆ, ಪಂಬಾಜ್ ಪ್ಲೇ ಆಫ್ಗೆ ಲಗ್ಗೆಯಿಡಬೇಕಾದರೆ ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಡಿದ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನಷ್ಟೆ ಗೆದ್ದಿದೆ. ಉಳಿದ 6 ಪಂದ್ಯಗಳಲ್ಲಿ ಸೋಲುಂಡಿದೆ. ಇತ್ತ ಮೋರಿಸ್ ಆಗಮನದ ನಂತರ ಆರ್ಸಿಬಿ ಬೌಲಿಂಗ್ ಬಲ ಹೆಚ್ಚಿದ್ದು, ಆಡಿದ 7 ಪಂದ್ಯಗಳ ಪೈಕಿ 5 ರಲ್ಲಿ ಜಯ ಸಾಧಿಸಿ 2 ಪಂದ್ಯಗಳನ್ನು ಕೈಚೆಲ್ಲಿದೆ.
ಧೋನಿ ವಿವಾದದ ಬೆನ್ನಲ್ಲೇ ವೈಡ್ಗೂ ಡಿಆರ್ಎಸ್ ಬೇಕು ಎಂದು ಆಗ್ರಹಿಸಿದ ವಿರಾಟ್ ಕೊಹ್ಲಿ
ಪಂದ್ಯದಿಂದ ಪಂದ್ಯಕ್ಕೆ ಅತ್ಯುತ್ತಮ ನಿರ್ವಹಣೆ ತೋರಲು ಯಶಸ್ವಿಯಾಗುತ್ತಿರುವ ಆರ್ಸಿಬಿ ತಂಡ, ಎದುರಾಳಿಗೆ ಕಂಟಕವಾಗಿ ಪರಿಣಮಿಸಿದೆ. ಆ್ಯರೋನ್ ಫಿಂಚ್ ಹಾಗೂ ಕರ್ನಾಟಕದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕಲ್ ಜೋಡಿ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿರುವುದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಹಾಲ್ ಕಮಾಲ್ ಮಾಡುತ್ತಿದ್ದಾರೆ. ವೇಗಿ ಕ್ರಿಸ್ ಮೊರೀಸ್ ತಂಡಕ್ಕೆ ಎಂಟ್ರಿ ಕೊಟ್ಟಾಗಿನಿಂದ ವೇಗದ ಬೌಲಿಂಗ್ನಲ್ಲಿ ಚುರುಕು ಬಂದಿದೆ. ಸೈನಿ ಹಾಗೂ ಸಿರಾಜ್ ತಮ್ಮ ಕೈಲಾದ ಕೊಡುಗೆ ನೀಡುತ್ತಿದ್ದಾರೆ.
ಇನ್ನೂ ಆರ್ಸಿಬಿಗೆ ಇದು ಸೇಡಿನ ಪಂದ್ಯ ಕೂಡ ಹೌದು. ಈ ಬಾರಿ ಆರ್ಸಿಬಿ ಎರಡು ಪಂದ್ಯಗಳಲ್ಲಿ ಸೋತಿರುವ ಪೈಕಿ ಪಂಜಾಬ್ ವಿರುದ್ಧವೂ ಒಂದು. ಹೀಗಾಗಿ ಸೇಡು ತೀರಿಸಿಕೊಳ್ಳಲು ಕೊಹ್ಲಿ ಪಡೆ ಕಾತುರದಲ್ಲಿದೆ.
ಇತ್ತ ಸರ್ವಾಂಗೀಣ ಆಟವನ್ನು ಪ್ರದರ್ಶಿಸಲು ವಿಫಲವಾಗುತ್ತಿರುವ ಪಂಜಾಬ್ ತಂಡವು ಕೆಲವೊಂದು ನಿಕಟ ಪಂದ್ಯಗಳಲ್ಲಿಯೂ ಎಡವಿ ಸೋಲುತ್ತಿದೆ. ಪರಿಣಾಮ ಪಂಜಾಬ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್ ಕನಸು ಕಾಣುತ್ತಿರುವ ರಾಹುಲ್ ಪಡೆಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕ್ಯಾಚ್ ಬಿಟ್ಟ ವಿಚಾರ; ಇನ್ಸ್ಟಾ ಲೈವ್ನಲ್ಲೇ ಕಿಂಗ್ ಕೊಹ್ಲಿ ಕಾಲೆಳೆದ ರಾಹುಲ್
ಪಂಜಾಬ್ ತಂಡಕ್ಕೆ ಮರಳುತ್ತಿರುವ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರಿಂದ ಭರ್ಜರಿ ಆಟವನ್ನು ನಿರೀಕ್ಷಿಸಲಾಗಿದೆ. ಆರಂಭಿಕರಾದ ರಾಹುಲ್ ಹಾಗೂ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಹೊರತುಪಡಿಸಿ ಮಧ್ಯಮ ಕ್ರಮಾಂಕದಲ್ಲಿ ತಂಡ ಸಂಪೂರ್ಣ ವೈಫಲ್ಯ ಅನುಭವಿಸಿದೆ.
ಬೌಲಿಂಗ್ನಲ್ಲಿ ಮೊಹಮದ್ ಶಮಿ ಹಾಗೂ ರವಿ ಬಿಷ್ಣೋಯಿ ಬಿಟ್ಟರೆ ಮತ್ಯಾರು ಮಿಂಚುತ್ತಿಲ್ಲ. ತಂಡಕ್ಕೆ ಪ್ರಮುಖವಾಗಿ ವಿದೇಶಿ ಆಟಗಾರರಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ಹೊರಗುಳಿಯುವುದು ಕನ್ಫರ್ಮ್ ಆಗಿದ್ದು ಗೇಲ್ಗೆ ಜಾಗ ಮಾಡಿಕೊಡಲಿದ್ದಾರೆ.
ಇಲ್ಲಿಯವರೆಗೂ ಉಭಯ ತಂಡಗಳು 25 ಬಾರಿ ಮುಖಾಮುಖಿಯಾದ್ದು, 13ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಜಯ ಸಾಧಿಸಿದ್ರೆ, 12 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿವೆ.
Published by:
Vinay Bhat
First published:
October 15, 2020, 1:01 PM IST