IPL 2020, RCB vs KKR: ಆರ್​​ಸಿಬಿಗೆ ಇಂದು ಕೆಕೆಆರ್ ಸವಾಲು: ಗೆಲ್ಲುವ ಫೇವರಿಟ್ ಟೀಂ ಯಾವುದು?

ಟೂರ್ನಿ ಇತಿಹಾಸದಲ್ಲಿ ಕೆಕೆಆರ್ ತಂಡವೇ ಇದುವರೆಗೆ ಮೇಲುಗೈ ಸಾಧಿಸುತ್ತ ಬಂದಿದೆ. ಆದರೆ, ಹಾಲಿ ಫಾರ್ಮ್‌ನಲ್ಲಿ ಆರ್‌ಸಿಬಿ ತಂಡವೇ ಗೆಲ್ಲುವ ಫೇವರಿಟ್ ಎನಿಸಿದೆ.

RCB vs KKR

RCB vs KKR

 • Share this:
  13ನೇ ಆವೃತ್ತಿಯ ಐಪಿಎಲ್​ನಲ್ಲಿಂದು ನಡೆಯಲಿರುವ 28ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ. ಇಲ್ಲಿನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು ಉಭಯ ತಂಡಗಳೂ ಗೆಲುವಿನ ವಿಶ್ವಾಸದಲ್ಲಿದೆ. ಹೀಗಾಗಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

  ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ 37 ರನ್‌ಗಳ ಸುಲಭ ಜಯ ಸಾಧಿಸಿದ್ದ ಆರ್‌ಸಿಬಿ, ಲೀಗ್‌ನಲ್ಲಿ ಇದುವರೆಗೆ ಆಡಿರುವ 6 ಪಂದ್ಯಗಳಿಂದ 4ರಲ್ಲಿ ಜಯ ದಾಖಲಿಸಿ, 2 ಸೋಲು ಕಂಡಿದೆ. ಸದ್ಯ 8 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಮೈನಸ್‌ ರನ್​ರೇಟ್​​ನಲ್ಲಿರುವ ಆರ್‌ಸಿಬಿ, ಮುಂದಿನ ಪಂದ್ಯಗಳಲ್ಲಿ ಗೆಲುವಿನ ಜತೆಗೆ ರನ್‌ರೇಟ್ ಸುಧಾರಿಸುವುದು ಮಹತ್ವ ಪಡೆದಿದೆ.

  ಧೋನಿ ಮಗಳಿಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದ 16 ವರ್ಷದ ಯುವಕನ ಬಂಧನ

  ಕೊಹ್ಲಿ ಪಡೆ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಮತ್ತೆ ಎಡವುತ್ತಿದೆ. ದೇವದತ್ ಪಡಿಕ್ಕಲ್ ಬ್ಯಾಟ್​ನಿಂದ ರನ್ ಬರುತ್ತಿದೆ. ಆದರೆ, ಆ್ಯರೋನ್ ಫಿಂಚ್ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಉತ್ತಮ ಸ್ಟಾರ್ಟ್​​ನ ಅಗತ್ಯ ಆರ್​ಸಿಬಿ ತಂಡಕ್ಕಿದೆ. ನಾಯಕ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್​ನಲ್ಲಿದ್ದು ಇಂದೂಕೂಡ ಅಬ್ಬರಿಸುವುದು ಖಚಿತ.

  ಎಬಿ ಡಿವಿಲಿಯರ್ಸ್​ ಫಾರ್ಮ್​ ಕಂಡುಕೊಳ್ಳಬೇಕಿದೆ. ಶಿವಂ ದುಬೆ ಹಾಗೂ ವಾಷಿಂಗ್ಟನ್ ಸುಂದರ್ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಯಜುವೇಂದ್ರ ಚಹಾಲ್, ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್, ಇಸುರು ಉದಾನ, ನವದೀಪ್ ಸೈನಿ ಗಮನಾರ್ಹ ನಿರ್ವಹಣೆ ತೋರುತ್ತಿದ್ದಾರೆ. ಕ್ರಿಸ್ ಮಾರಿಸ್ ಆಗಮನದಿಂದಾಗಿ ಡೆತ್ ಓವರ್‌ನಲ್ಲಿ ಬೌಲಿಂಗ್ ಬಲಿಷ್ಠಗೊಂಡಂತಾಗಿದೆ. ಮೊರೀಸ್​ಗೆ ಬ್ಯಾಟಿಂಗ್ ಶಕ್ತಿ ತೋರಲು ಇನ್ನೂ ಅವಕಾಶ ಕೂಡಿಬಂದಿಲ್ಲ.

  ಇತ್ತ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಸ್ಥಾನದಲ್ಲಿದೆ. ಸಿಎಸ್‌ಕೆ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೂದಲೆಳೆಯಿಂದ ಜಯ ದಾಖಲಿಸಿರುವ ಕೆಕೆಆರ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

  ಕೆಕೆಆರ್ ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಶುಭ್ಮನ್ ಗಿಲ್ ಬಿಟ್ಟರೆ ತಂಡದಲ್ಲಿ ಮತ್ಯಾರು ಅಷ್ಟೊಂದು ಸದ್ದು ಮಾಡುತ್ತಿಲ್ಲ. ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನಾಯಕನ ಆಟ ಪ್ರದರ್ಶಿಸಿದ್ದರಷ್ಟೆ. ಇಯಾನ್ ಮಾರ್ಗನ್ ತಮ್ಮ ನೈಜ್ಯ ಆಟ ಪ್ರದರ್ಶಿಸಬೇಕಿದೆ.

  IPL 2020: ರಾಹುಲ್​ಗೆ ಆರೆಂಜ್​ ಕ್ಯಾಪ್​, ರಬಾಡಗೆ ಪರ್ಪಲ್​ ಕ್ಯಾಪ್​

  ಇನ್ನೂ ಸುನೀಲ್ ನಾರಾಯಣ್ ಬೌಲಿಂಗ್ ಶೈಲಿಗೆ ಮೊದಲ ಬಾರಿಗೆ ಎಚ್ಚರಿಕೆ ನೀಡಲಾಗಿದ್ದು, ಆ್ಯಂಡ್ರೋ ರಸೆಲ್ ಗಾಯಕ್ಕೆ ತುತ್ತಾಗಿದ್ದಾರೆ. ಆರ್‌ಸಿಬಿ ವಿರುದ್ಧ ಆಡುವುದರ ಬಗ್ಗೆ ಇನ್ನು ಖಾತ್ರಿಯಾಗಿಲ್ಲ. ಬೌಲಿಂಗ್ ವಿಭಾಗದಲ್ಲಿ ಕೆಕೆಆರ್ ಪರ ಕನ್ನಡಿಗ ಪ್ರಸಿದ್ಧ ಕೃಷ್ಣ ಸಿಕ್ಕ ಮೊದಲ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ಮಿಂಚಿದ್ದರು. ಮತ್ಯಾರುಕೂಡ ಅಷ್ಟೊಂದು ಮಾರಕವಾಗಿ ಗೋಚರಿಸುತ್ತಿಲ್ಲ.

  ಉಭಯ ತಂಡಗಳು ಈವರೆಗೆ ಒಟ್ಟು 24 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಆರ್‌ಸಿಬಿ 10 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೆಕೆಆರ್ 14 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ.

  ಟೂರ್ನಿ ಇತಿಹಾಸದಲ್ಲಿ ಕೆಕೆಆರ್ ತಂಡವೇ ಇದುವರೆಗೆ ಮೇಲುಗೈ ಸಾಧಿಸುತ್ತ ಬಂದಿದೆ. ಆದರೆ, ಹಾಲಿ ಫಾರ್ಮ್‌ನಲ್ಲಿ ಆರ್‌ಸಿಬಿ ತಂಡವೇ ಗೆಲ್ಲುವ ಫೇವರಿಟ್ ಎನಿಸಿದೆ.
  Published by:Vinay Bhat
  First published: