ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ನಂತ ದಾಪುಗಾಲಿಡುತ್ತಿದೆ. ಈಗಾಗಲೇ ಆಡಿರುವ 10 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಕಂಡಿದ್ದು, ಕೇವಲ ಮೂರರಲ್ಲಷ್ಟೆ ಸೋಲುಂಡಿದೆ. ಸದ್ಯ 14 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನಾಳೆ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಹ್ಲಿ ಪಡೆ ಕಣಕ್ಕಿಳಿಯಲಿದ್ದು ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಜೊತೆಗೆ ಆರ್ಸಿಬಿಗೆ ಈ ಪಂದ್ಯ ವಿಶೇಷತೆಯಿಂದ ಕೂಡಿದೆ.
ನಾಳೆಯ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ. ಪ್ರತಿ ವರ್ಷದಂತೆ ಈ ವರ್ಷವು ಪರಿಸರ ಸಂದೇಶ ಸಾರುವ ಹಿನ್ನಲೆಯಲ್ಲಿ ಆರ್ಸಿಬಿ 'ಗೋ ಗ್ರೀನ್' ಅಭಿಯಾನದ ಮೂಲಕ ಹಸಿರು ಜರ್ಸಿ ತೊಟ್ಟು ಆಡಲಿದೆ. ಟಾಸ್ ಆಗುವ ವೇಳೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ಸಿಎಸ್ಕೆ ತಂಡದ ನಾಯಕ ಎಂ. ಎಸ್ ಧೋನಿ ಅವರಿಗೆ ಸಸಿ ನೀಡಲಿದ್ದಾರೆ.
KKR vs DC, IPL 2020 Live Score
ಪರಿಸರ ಸಂರಕ್ಷಣೆ ಹಾಗೂ ತಾಜ್ಯಗಳ ಮರುಬಳಕೆಗೆ ಒತ್ತು ನೀಡುವ ಉದ್ದೇಶದಿಂದ ಆರ್ಸಿಬಿ ಹಸಿರು ಬಣ್ಣದ ಜರ್ಸಿ ತೊಟ್ಟು ಆಡುತ್ತಿದೆ. 2011 ರಲ್ಲಿ ಮೊದಲ ಬಾರಿ ತಂಡ ಗ್ರೀನ್ ಜರ್ಸಿಯಲ್ಲಿ ಆಟವಾಡಿತ್ತು. ಅದಾದ ಬಳಿಕ ಪ್ರತಿ ವರ್ಷ ಫ್ರಾಂಚೈಸಿ ಈ ಅಭಿಯಾನವನ್ನು ಮುಂದುವರಿಸಿಕೊಂಡು ಬರುತ್ತಿದೆ.
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪ್ರಚಂಡ ಫಾರ್ಮ್ನಲ್ಲಿದೆ. ಓಪನರ್ಗಳಾದ ದೇವದತ್ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಂತು ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ತಂಡದ ರನ್ಗತಿಯನ್ನು ಏರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಇನ್ನೂ ಪ್ರತಿಬಾರಿ ಆರ್ಸಿಬಿ ಬೌಲಿಂಗ್ ವಿಭಾಗ ದುರ್ಬಲವಾಗಿತ್ತು. ಆದರೆ, ಈ ಬಾರಿ ವಾಷಿಂಗ್ಟನ್ ಸುಂದರ್, ನವ್ದೀಪ್ ಸೈನಿ, ಕ್ರಿಸ್ ಮೊರೀಸ್, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ