IPL ಶುರುವಾಗಿದೆ...ಮೈದಾನದಲ್ಲಿ ಆರ್ಭಟ ಕೂಡ ಆರಂಭವಾಗಿದೆ. ಆದರೆ ಈ ಬಾರಿ ಹಿರಿಯರಿಗಿಂತ ಕಿರಿಯರ ಮಿಂಚಿಂಗ್ ಬಲು ಜೋರಾಗಿದೆ. ಇದಕ್ಕೆ ಸಾಕ್ಷಿಯಾಗಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಅವರ ಇನಿಂಗ್ಸ್ಗಳು ಕಣ್ಮುಂದೆ ಇದೆ. ಆದರೆ ಯುವ ಆಟಗಾರರು ವಿದೇಶಿ ಪಿಚ್ಗಳಲ್ಲಿ ಇಂತಹದೊಂದು ಅದ್ಭುತ ಪ್ರದರ್ಶನ ನೀಡುತ್ತಿರುವುದು ನೋಡಿ ವಿಶ್ವದ ಮಾಜಿ ಕ್ರಿಕೆಟಿಗರೇ ಹುಬ್ಬೇರಿಸುತ್ತಿದ್ದಾರೆ. ಆದರೆ ಇಂತಹದೊಂದು ಅತ್ಯುತ್ತಮ ಆಟ ಯುವ ಕ್ರಿಕೆಟಿಗರಿಂದ ಮೂಡಿ ಬರಲು ಕೂಡ ಒಂದು ಬಲಿಷ್ಠ ಕಾರಣವಿದೆ. ಹೌದು, ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಆಟಗಾರರು ದಿ ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಗರಡಿಯ ಹುಡುಗರು ಎಂಬುದೇ ವಿಶೇಷ.
ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಇಬ್ಬರು ಪ್ರಮುಖ ಆಟಗಾರರು ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ. ಒಬ್ಬರು ಕ್ರಿಕೆಟ್ ಜಗತ್ತಿನ ದಾದಾ ಸೌರವ್ ಗಂಗೂಲಿ. ಈಗ ಬಿಸಿಸಿಐ ಮುಖ್ಯಸ್ಥರಾಗಿ ಭಾರತೀಯ ತಂಡಕ್ಕೆ ಹೊಸ ಆಟಗಾರರನ್ನು ಕರೆತರಲು ಮತ್ತು 2021 ಟಿ20 ವಿಶ್ವಕಪ್ಗೆ ಹೊಸ ಪಡೆಯನ್ನು ಸಜ್ಜುಗೊಳಿಸಲು ಶ್ರಮಿಸುತ್ತಿದ್ದಾರೆ. ಮತ್ತೊಂದೆಡೆ, ಯುವ ಪಡೆಯನ್ನು ರೂಪಿಸುವಲ್ಲಿ ಮಾಜಿ ಆಟಗಾರ ರಾಹುಲ್ ದ್ರಾವಿಡ್ ನಿರತರಾಗಿದ್ದಾರೆ. ಇದರ ಫಲವೇ ಇಂದು ಯುವ ಆಟಗಾರರು ಐಪಿಎಲ್ನಲ್ಲಿ ಮಿಂಚುತ್ತಿರುವುದು.
ರಾಹುಲ್ ದ್ರಾವಿಡ್ ಭಾರತದ ಅಂಡರ್ -19 ಮತ್ತು ಇಂಡಿಯಾ ಎ ಕ್ರಿಕೆಟ್ ತಂಡಗಳಿಗೆ ತರಬೇತುದಾರರಾಗಿದ್ದವರು. ಸುಮಾರು ಮೂರೂವರೆ ವರ್ಷಗಳಲ್ಲಿ ಭಾರತದ ಕೆಲವು ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡಿದ್ದರು. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದೇ ಕೂಡ ವಿಶ್ವ ದರ್ಜೆಯ ಕ್ರಿಕೆಟಿಗರನ್ನಾಗಿ ಯುವ ಆಟಗಾರರನ್ನು ರೂಪಿಸಿದ್ದರು. ಪ್ರತಿ ರಾಜ್ಯದ ರಣಜಿ ಟ್ರೋಫಿಯಲ್ಲಿ ಗಮನ ಸೆಳೆಯುವ ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ವಿಶೇಷ ತರಬೇತಿ ನೀಡಿದರು. ಕಠಿಣ ಸಂದರ್ಭಗಳನ್ನು ಎದುರಿಸಲು ಮತ್ತು ಒತ್ತಡವನ್ನು ಮೀರಿ ಆಡುವ ಸಲಹೆ ಸೂಚನೆಗಳನ್ನು ನೀಡಿದರು.
ಪರಿಣಾಮ 2018 ರಲ್ಲಿ ದ್ರಾವಿಡ್ ಗರಡಿಯಲ್ಲಿ ಪಳಗಿದ ಶುಭ್ಮನ್ ಗಿಲ್ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಟಗಾರ ಎನಿಸಿಕೊಂಡಿದ್ದಾರೆ. ಎಲ್ಲಾ ಆಟಗಾರರನ್ನು ಹಿಂದಿಕ್ಕಿ ಕೆಕೆಆರ್ ಪರ ಆರಂಭಿಕನ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದೇ ದಿ ಗ್ರೇಟ್ ವಾಲ್ ಸೂಚನೆಯಂತೆ ಗಾಯಗೊಂಡ ಬಳಿಕ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಿದ್ದ 20ರ ಹರೆಯದ ಕಮಲೇಶ್ ನಾಗರ್ಕೋಟಿ ಕೆಕೆಆರ್ ತಂಡದ ಪ್ರಮುಖ ವೇಗಿಯಾಗಿ ಸ್ಥಾನ ಪಡೆದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಆಧಾರ ಸ್ತಂಭವಾಗಿ ಸಂಜು ಸ್ಯಾಮ್ಸ್ನ್ ಗುರುತಿಸಿಕೊಂಡಿದ್ದಾರೆ. ಯಾವುದೇ ಬೌಲರುಗಳನ್ನು ಹಿಗ್ಗಾ ಮುಗ್ಗಾ ದಂಡಿಸುವ ಮೂಲಕ ವಿಶ್ವ ದರ್ಜೆಯ ಬ್ಯಾಟ್ಸ್ಮನ್ಗೆ ಸರಿಸಾಟಿಯಾಗಿ ಇಂದು ಕೇರಳದ ಕ್ರಿಕೆಟಿಗ ಮಿಂಚುತ್ತಿದ್ದಾರೆ. ನನ್ನ ಕ್ರಿಕೆಟ್ ಜೀವನದಲ್ಲಿ ರಾಹುಲ್ ದ್ರಾವಿಡ್ ಎಂಬ ಕೋಚ್ ಪಡೆದಿರುವುದೇ ನನ್ನ ಪುಣ್ಯ ಎಂದು ಹಿಂದೊಮ್ಮೆ ಸ್ಯಾಮ್ಸ್ನ್ ಹೇಳಿದ್ದರು.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಪೃಥ್ವಿ ಶಾ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಪ್ರತಿಯೊಂದು ಶಾಟ್ನಲ್ಲೂ ಪೃಥ್ವಿ ಅನುಭವಿ ಆಟಗಾರರಗಿಂತ ನಾನು ಕಡಿಮೆ ಏನಲ್ಲಾ ಎಂಬುದನ್ನು ಸಾರುತ್ತಿದ್ದಾರೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರ್ಷಗಳ ಬಳಿಕ ಭಾರತೀಯ ಆರಂಭಿಕ ಬ್ಯಾಟ್ಸ್ಮನ್ವೊಬ್ಬರು ಸಿಕ್ಕಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್ ಎರಡು ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಎಡಗೈ-ಬಲಗೈ ದಾಂಡಿಗರ ಹಿಂದಿನ ಶಕ್ತಿ ಕೂಡ ದಿ ಗ್ರೇಟ್ ವಾಲ್.
ಮುಂಬೈ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಇಶಾನ್ ಕಿಶನ್ ಕೂಡ ಸಂಚಲನ ಸೃಷ್ಟಿಸಿದ್ದಾರೆ. ಬೆಂಗಳೂರು ವಿರುದ್ಧ ಸ್ಪೋಟಕ 99 ರನ್ ಬಾರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ವಿಶ್ವದ ಮುಂದೆ ಯುವ ಕ್ರಿಕೆಟಿಗರ ತೆರೆದಿಟ್ಟಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಪರ ಆಲ್ರೌಂಡರ್ ಆಗಿ ಅಭಿಷೇಕ್ ಶರ್ಮಾ ಕಳೆದ ಮೂರು ಪಂದ್ಯಗಳಲ್ಲೂ ಸ್ಥಾನಗಿಟ್ಟಿಸಿ ಉತ್ತಮವಾಗಿ ಆಡುತ್ತಿದ್ದಾರೆ. 140 ಕಿ.ಮೀ ಹೆಚ್ಚಿನ ವೇಗದಲ್ಲಿ ಚೆಂಡೆಸೆಯುವ ಮೂಲಕ ಕೆಕೆಆರ್ ಬೌಲಿಂಗ್ ವಿಭಾಗಕ್ಕೆ ಹೊಸ ಅಸ್ತ್ರವಾಗಿ ಶಿವಂ ಮಾವಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಇವರೆಲ್ಲರೂ ಅಂಡರ್ -19 ಮತ್ತು ಎ ತಂಡದಲ್ಲಿರುವಾಗ ಇವರ ಕೋಚ್ ರಾಹುಲ್ ದ್ರಾವಿಡ್.
ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಶತಕಗಳನ್ನು ಬಾರಿಸಿ ಆರ್ಭಟಿಸುತ್ತಿರುವ ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಕೂಡ ಒಂದು ಕಾಲದಲ್ಲಿ ದ್ರಾವಿಡ್ ಗರಡಿಯಲ್ಲಿ ಪಳಗಿದ ಹುಡುಗರೇ. ಯುಎಇ ಪಿಚ್ನಲ್ಲಿ ಟೀಮ್ ಇಂಡಿಯಾ ಹಾಗೂ ಅಂತರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುತ್ತಿರುವ ಸ್ಟಾರ್ ಆಟಗಾರರೇ ನೆಲಕಚ್ಚುತ್ತಿರುವಾಗ ಭಾರತದ ಯುವ ಕ್ರಿಕೆಟಿಗರು ಮಾತ್ರ ಮಿಂಚಿನ ಸಂಚಲನ ಸೃಷ್ಟಿಸುತ್ತಿದ್ದಾರೆ. 18 ರಿಂದ 22 ರ ಒಳಗಿನ ಯುವ ಬ್ಯಾಟ್ಸ್ಮನ್ಗಳ ಆಟವನ್ನು ನೋಡಿ ಕಾಮೆಂಟರಿ ಬಾಕ್ಸ್ನಲ್ಲಿರುವ ಮಾಜಿ ಕ್ರಿಕೆಟರುಗಳೇ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇಂತಹದೊಂದು ಅಚ್ಚರಿಗಳ ಹಿಂದಿರುವುದು ನಮ್ಮೂರಿನ ರಾಹುಲ್ ದ್ರಾವಿಡ್ ಎಂಬುದೇ ನಮ್ಮೆಲ್ಲರ ಹೆಮ್ಮೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ