ಎಲ್ಲ ಎಂಟು ಫ್ರಾಂಚೈಸಿಗಳು ಯುಎಇ ತಲುಪಿದ ನಂತರ ಭಾರೀ ಸುದ್ದಿಯಲ್ಲಿರುವ ತಂಡ ಎಂದರೆ ಅದು ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ. ಆರಂಭದಲ್ಲಿ ಕೊರೋನಾ ವಿಚಾರವಾಗಿ ಸುದ್ದಿಯಾಗಿದ್ದರೆ ನಂತರದಲ್ಲಿ ತಂಡದ ಸ್ಟಾರ್ ಬ್ಯಾಟ್ಸ್ಮನ್ ಸುರೇಶ್ ರೈನಾ ಈ ಬಾರಿಯ ಟೂರ್ನಿಯಿಂದ ಹಿಂದೆ ಸರಿದು ಭಾರತಕ್ಕೆ ಮರಳಿದರು. ಹರ್ಭಜನ್ ಸಿಂಗ್ ವೈಯಕ್ತಿಕ ಕಾರಣದಿಂದ ಟೂರ್ನಿಯಲ್ಲಿ ಭಾಗವಹಿಸಲ್ಲ ಎಂದರು. ಹೀಗೆ ಅನೇಕ ವಿಚಾರಗಳಿಗೆ ಚೆನ್ನೈ ತಂಡ ಸುದ್ದಿಯಾಗುತ್ತಲೇ ಇದೆ. ಸದ್ಯ ಮೈದಾನದಲ್ಲಿ ಅಭ್ಯಾಸ ಆರಂಭಿಸಿರುವ ಧೋನಿ ಪಡೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 10 ಆವೃತ್ತಿಗಳಲ್ಲಿ ಎಂ ಎಸ್ ಧೋನಿ ನಾಯಕನಾಗಿ ಮೂರು ಬಾರಿ ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದರು. ಐದು ಬಾರಿ ರನ್ನರ್ ಅಪ್ ಸ್ಥಾನಗಳಿಗೆ ಮುನ್ನಡೆಸಿದ ಧೋನಿ ಅವರು ಸದ್ಯ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
Sachin Deshmukh: ಕೊರೋನಾಗೆ ಮಾಜಿ ಕ್ರಿಕೆಟಿಗ ಸಚಿನ್ ದೇಶ್ಮುಖ್ ಬಲಿ..!
ಧೋನಿ ಹಾಗೂ ಶೇನ್ ವಾಟ್ಸನ್ ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಇದರ ವಿಡಿಯೋವನ್ನು ವಾಟ್ಸನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಧೋನಿ ವೈಭವದ ಬ್ಯಾಟಿಂಗ್ ವೈರಲ್ ಆಗುತ್ತಿದೆ. ಅದರಲ್ಲೂ ಮುಖ್ಯ ಹೈಲೈಟ್ ಆಗಿದ್ದು ಎಂ ಎಸ್ ಧೋನಿಯ ಹೆಲಿಕಾಪ್ಟರ್ ಶಾಟ್.
ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ಆಡುತ್ತಿರುವ ಎಂ.ಎಸ್.ಧೋನಿ, ನನ್ನಲ್ಲಿ ಇನ್ನೂ ಕ್ರಿಕೆಟ್ ಸಾಕಷ್ಟು ಉಳಿದಿದೆ ಎನ್ನುವ ಸಂದೇಶವನ್ನ ರವಾನಿಸಿದ್ದಾರೆ. ಪ್ರಾಕ್ಟೀಸ್ ವೇಳೆ ಹೆಲಿಕಾಪ್ಟರ್ ಶಾಟ್ ಸೇರಿದಂತೆ ಹಲವು ಭರ್ಜರಿ ಹೊಡೆತಗಳ ಮೂಲಕ ಧೋನಿ ಗಮನ ಸೆಳೆದಿದ್ದಾರೆ. ಧೋನಿ ಬ್ಯಾಟಿಂಗ್ ನೋಡಿ ಅಭಿಮಾನಿಗಳಂತೂ ಫುಲ್ ಥ್ರಿಲ್ ಆಗಿದ್ದಾರೆ.
IPL 2020: ಮುಂಬೈ-ಚೆನ್ನೈ ನಡುವೆ ಯುಎಇನಲ್ಲಿ ನಡೆದ 2014ರ ಐಪಿಎಲ್ ಹೇಗಿತ್ತು?; ಇಲ್ಲಿದೆ ಮಾಹಿತಿ
ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಧೋನಿಗೆ ಈಗ ಕಳೆದುಕೊಳ್ಳಲು ಏನೂ ಇಲ್ಲ. ಅವರು ಸಂಪೂರ್ಣ ಸ್ವಾತಂತ್ರದೊಂದಿಗೆ ಬ್ಯಾಟಿಂಗ್ ಮಾಡಬಹುದು. ಚೆನ್ನೈ ಪರ ಪ್ರತಿ ಸೀಸನ್ನಲ್ಲೂ ನಂಬರ್ 3ನಲ್ಲಿ ಅಂದ್ರೆ ವಂಡೌನ್ ಕ್ರಮಾಂಕದಲ್ಲಿ ಸುರೇಶ್ ರೈನಾ ಕ್ರೀಸ್ಗಿಳಿಯುತ್ತಿದ್ದರು. ಆದರೀಗ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದಿದ್ದಾರೆ. ಹೀಗಾಗಿ ರೈನಾ ಕ್ರೀಸ್ಗಿಳಿಯುತ್ತಿದ್ದ ನಂಬರ್ 3ನಲ್ಲಿ ಧೋನಿ ಬ್ಯಾಟಿಂಗ್ ಮಾಡೋದಕ್ಕೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ