ಶಾರ್ಜಾ (ಅ. 04): ಇಲ್ಲಿನ ಶಾರ್ಜಾ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಐಪಿಎಲ್ 2020ರ 17ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಡೇವಿಡ್ ವಾರ್ನರ್ ಸಾರಥ್ಯದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಕಠಿಣ ಟಾರ್ಗೆಟ್ ನೀಡಿದೆ. ಕ್ವಿಂಟನ್ ಡಿಕಾಕ್ ಅವರ ಆಕರ್ಷಕ ಅರ್ಧಶತಕ ಹಾಗೂ ಅಂತಿಮ ಹಂತದಲ್ಲಿ ಮುಂಬೈ ಬ್ಯಾಟ್ಸ್ಮನ್ಗಳ ಸ್ಫೋಟಕ ಆಟದ ನೆರವಿನಿಂದ 20 ಓವರ್ನಲ್ಲಿ 208 ರನ್ ಬಾರಿಸಿದೆ.ಗುರಿ ಬೆನ್ನಟ್ಟಿರು ಹೈದರಾಬಾದ್ ತಂಡ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಪ್ರಮಖ ವಿಕೆಟ್ ಕಳೆದುಕೊಂಡಿತು. ಓಪನರ್ಗಳಾದ ಜಾನಿ ಬೈರ್ಸ್ಟೋ ಹಾಗೂ ನಾಯಕ ಡೇವಿಡ್ ವಾರ್ನರ್ ಪೈಕಿ ಬೈರ್ಸ್ಟೋ 15 ಎಸೆತಗಳಲ್ಲಿ 25 ರನ್ ಬಾರಿಸಿ ಔಟ್ ಆದರು.
ಈ ಸಂದರ್ಭ ತಂಡವನ್ನು ಮೇಲೆತ್ತುವ ಜವಾಬ್ದಾರಿ ಹೊತ್ತ ಮನೀಶ್ ಪಾಂಡೆ ಹಾಗೂ ವಾರ್ನರ್ ಅತ್ಯುತ್ತಮ ಜೊತೆಯಾಟ ಆಡಿದರು. ಪಾಂಡೆ ಬಿರುಸಿನ ಬ್ಯಾಟಿಂಗ್ ನಡೆಸಿದರು. ಆದರೆ, ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಪಾಂಡೆ 19 ಎಸೆತಗಳಲ್ಲಿ 30 ರನ್ ಬಾರಿಸಿ ಔಟ್ ಆದರು. ಕೇನ್ ವಿಲಿಯಮ್ಸನ್ 3 ರನ್ಗೆ ನಿರ್ಗಮಿಸಿ ನಿರಾಸೆ ಮೂಡಿಸಿದರು.
ಕಳೆದ ಪಂದ್ಯದಲ್ಲಿ ಮಿಂಚಿದ್ದ ಪ್ರಿಯಂ ಗಾರ್ಗ್ ಈ ಬಾರಿ ಕೇವಲ 8 ರನ್ಗೆ ಸುಸ್ತಾದರು. ಈ ನಡುವೆ ವಾರ್ನರ್ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಅರ್ಧಶತಕ ಪೂರೈಸಿ ಬಿರುಸಿನ ಆಟ ಆಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ವಾರ್ನರ್ ಕೂಡ 44 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಿಡಿಸಿ 60 ರನ್ಗೆ ಔಟ್ ಆದರು
.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಮುಂಬೈ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಮೊದಲ ಓವರ್ನಲ್ಲೇ ನಾಯಕ ರೋಹಿತ್ ಶರ್ಮಾ ಒಂದು ಸಿಕ್ಸರ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯ ಕುಮಾರ್ ಯಾದವ್ ಜೊತೆಯಾಗಿ ಒಂದಿಷ್ಟು ರನ್ ಕಲೆಹಾಕಿದರಷ್ಟೆ.
ಸೂರ್ಯಕುಮಾರ್ ಯಾದವ್ 18 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 27 ರನ್ಗೆ ಔಟ್ ಆದರು. ಬಳಿಕ ಡಿಕಾಕ್ ಜೊತೆಯಾದ ಇಶಾನ್ ಕಿಶನ್ ಉತ್ತಮ ಆಟ ಪ್ರದರ್ಶಿಸಿದರು. ಅದರಲ್ಲೂ ಡಿಕಾಕ್ ಬಿರುಸಿನ ಆಟದ ಮೊರೆ ಹೋದರೆ ಕಿಶನ್ ಇವರಿಗರ ಉತ್ತಮ ಸಾತ್ ನೀಡಿದರು.
ಕ್ವಿಂಟನ್ ಡಿಕಾಕ್ ಈ ಬಾರಿಯ ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕ ಕೂಡ ಸಿಡಿಸಿದರು. 39 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿದ ಡಿಕಾಕ್ 67 ರನ್ ಬಾರಿಸಿದರು. ಜೊತೆಗೆ ಕಿಶನ್ರೊಂದಿಗೆ 78 ರನ್ಗಳ ಉಪಯುಕ್ತ ಜೊತೆಯಾಟ ಆಡಿದರು. ಇದರ ಬೆನ್ನಲ್ಲೆ ಇಶಾನ್ ಕಿಶನ್(31) ಕೂಡ ಪೆವಿಲಿಯನ್ ಸೇರಿಕೊಂಡರು.
ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ಪ್ರಮುಖ ಪಾತ್ರವಹಿಸಿದರು. ಹಾರ್ದಿಕ್ 19 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿ 28 ರನ್ ಬಾರಿಸಿದರೆ, ಪೊಲಾರ್ಡ್ 13 ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿ ಅಜೇಯ 25 ರನ್ ಗಳಿಸಿದರು. ಕ್ರುನಾಲ್ ಪಾಂಡ್ಯ ಕೇವಲ 4 ಎಸೆತಗಳಲ್ಲಿ 20 ರನ್ ಚಚ್ಚಿದರು.
ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಬಾರಿಸಿತು. ಹೈದರಾಬಾದ್ ಪರ ಸಂದೀಪ್ ಶರ್ಮಾ ಹಾಗೂ ಸಿದ್ಧಾರ್ಥ್ ಕೌಲ್ ತಲಾ 2 ವಿಕೆಟ್ ಕಿತ್ತರೆ, ರಶೀದ್ ಖಾನ್ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್: ರೋಹಿತ್
ಶರ್ಮಾ(
ನಾಯಕ),
ಕ್ವಿಂಟನ್
ಡಿ ಕಾಕ್(
ವಿ.
ಕೀ),
ಸೂರ್ಯಕುಮಾರ್
ಯಾದವ್,
ಇಶಾನ್ ಕಿಶನ್, ಕೀರನ್
ಪೊಲಾರ್ಡ್,
ಹಾರ್ದಿಕ್
ಪಾಂಡ್ಯ,
ಕೃನಾಲ್
ಪಾಂಡ್ಯ,
ಜೇಮ್ಸ್ ಪ್ಯಾಟಿಸನ್,
ರಾಹುಲ್
ಚಹರ್,
ಜಸ್ಪ್ರಿತ್
ಬುಮ್ರಾ,
ಟ್ರೆಂಟ್
ಬೌಲ್ಟ್.
ಸನ್ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್ಸ್ಟೋ (ವಿಕೆಟ್ ಕೀಪರ್), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ. ನಟರಾಜನ್, ಸಿದ್ಧಾರ್ಥ್ ಕೌಲ್.
ಈವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ತಲಾ 2 ಗೆಲುವು ಹಾಗೂ 2 ಸೋಲುಗಳನ್ನು ಕಂಡಿರುವ ಉಭಯ ತಂಡಗಳು ಮೂರನೇ ಗೆಲುವಿನ ಮೇಲೆ ಕಣ್ಣಿಟ್ಟಿವೆ. ಸತತ ಎರಡು ಸೋಲುಗಳ ಮೂಲಕ ಟೂರ್ನಿ ಆರಂಭಿಸಿದ್ದ ವಾರ್ನರ್ ಪಡೆ ನಂತರ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಲಯಕ್ಕೆ ಮರಳಿವೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳುಸಿದೆ.
ಮುಂಬೈ ತಂಡದಲ್ಲಿ ಇಶಾನ್ ಕಿಶನ್ ಮೇಲೆ ಎಲ್ಲರು ಕಣ್ಣಿಟ್ಟಿದ್ದಾರೆ. ರೋಹಿತ್ ಪಡೆ ಆರಂಭಿಕ ಹಂತದಲ್ಲಿ ರನ್ಗಳಿಸಲು ಪರದಾಡಿದರೂ ಡೆತ್ ಓವರ್ಗಳಲ್ಲಿ ರನ್ ಹೊಳೆಯನ್ನೇ ಈ ಬ್ಯಾಟ್ಸ್ಮನ್ಗಳು ಹರಿಸುತ್ತಿದ್ದಾರೆ. ಆರ್ಸಿಬಿ ಹಾಗೂ ಪಂಜಾಬ್ ಎದುರು ಕಡೇ 5 ಓವರ್ಗಳಲ್ಲಿ 89 ರನ್ಗಳಿಸಿದ್ದೇ ಇದಕ್ಕೆ ಸಾಕ್ಷಿ.
ಉಭಯ ತಂಡಗಳು ಇಲ್ಲಿಯವರೆಗೆ 14 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಏಳರಲ್ಲಿ ಮುಂಬೈ ಗೆಲುವು ಸಾಧಿಸಿದರೆ, ಏಳರಲ್ಲಿ ಹೈದರಾಬಾದ್ ಗೆದ್ದಿದ್ದು, ಸಮ ಬಲದ ಹೋರಾಟ ನಡೆಸಿವೆ.