news18-kannada Updated:October 16, 2020, 10:52 PM IST
ಕ್ವಿಂಟನ್ ಡಿಕಾಕ್ ಹಾಗೂ ರೋಹಿತ್ ಶರ್ಮಾ
ಅಬುಧಾಬಿ (ಅ. 16): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 32ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಅಮೋಘ ಗೆಲುವು ಕಂಡಿದೆ. ಕ್ವಿಂಟನ್ ಡಿಕಾಕ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಜೊತೆಯಾಟದ ಜೊತೆ ಬೌಲರ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಮುಂಬೈ ತಂಡ 8 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಇತ್ತ ಕೆಕೆಆರ್ ನಾಯಕನ ಬದಲಾವಣೆ ಆದರೂ ಯಾವುದೆ ಪರಿಣಾಮಕಾರಿಯಾಗದೆ 4ನೇ ಸ್ಥಾನದಲ್ಲಿದೆ.
ಕೆಕೆಆರ್ ನೀಡಿದ್ದ 149 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಸ್ಫೋಟಕ ಆರಂಭ ಪಡೆದುಕೊಂಡಿತು. ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಅಮೋಘ ಜೊತೆಯಾಟ ತಂಡಕ್ಕೆ ನೆರವಾಯಿತು. ಕೆಕೆಆರ್ ಬೌಲರ್ಗಳ ಬೆವರಿಳಿಸಿದ ಈ ಜೋಡಿ ಅದ್ಭುತ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಡಿಕಾಕ್ ಆರ್ಭಟಿಸಿದರೆ, ರೋಹಿತ್ ಇವರಿಗೆ ಉತ್ತಮ ಸಾತ್ ನೀಡಿದರು.
RCB: ಆರ್ಸಿಬಿಗೆ ಶುರುವಾಯ್ತು ಕಂಟಕ: ಮುಂದಿನ ಪಂದ್ಯಕ್ಕೂ ಮುನ್ನ ಸರಿಪಡಿಸಬೇಕಿದೆ ಈ 3 ಅಂಶ
ಈ ಜೋಡಿ 10 ಓವರ್ ಆಗುವ ಹೊತ್ತಿಗೆ 94 ರನ್ ಬಾರಿಸಿತು. ರೋಹಿತ್ ಶರ್ಮಾ 36 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಬಾರಿಸಿ 35 ರನ್ ಗಳಿಸಿ ಔಟ್ ಆದರು. ಸೂರ್ಯಕುಮಾರ್ ಯಾದವ್(10) ಬೇಗನೆ ನಿರ್ಗಮಿಸಿದರು. ಬಳಿಕ ಡಿಕಾಕ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಗಿ ಬೇಗನೇ ತಂಡಕ್ಕೆ ಗೆಲುವು ತಂದಿಟ್ಟರು. ಡಿಕಾಕ್ 44 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಬಾರಿಸಿ ಅಜೇಯ 78 ರನ್ ಚಚ್ಚಿದರೆ, ಹಾರ್ದಿಕ್ ಅಜೇಯ 20 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ 16.5 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿ ಭರ್ಜರಿ ಗೆಲುವು ಸಾಧಿಸಿತು. ಕೆಕೆಆರ್ ಪರ ಶಿವಂ ಮಾವಿ ಹಾಗೂ ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಕೆಕೆಆರ್ ಆರಂಭದಲ್ಲೇ ಪ್ರಮುಖ ದೊಡ್ಡ ವಿಕೆಟ್ ಕಳೆದುಕೊಂಡು ಸಾಗಿತು. ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ರಾಹುಲ್ ತ್ರಿಪಾಠಿ ಕೇವಲ 7 ರನ್ಗೆ ಔಟ್ ಆದರು. ನಿತೀಶ್ ರಾಣ(5) ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಶುಭ್ಮನ್ ಗಿಲ್ 23 ಎಸೆತಗಳಲ್ಲಿ 21 ರನ್ ಬಾರಿಸಿ ನಿರ್ಗಮಿಸಿದರೆ, ದಿನೇಶ್ ಕಾರ್ತಿಕ್ 4 ರನ್ಗೆ ರಾಹುಲ್ ಚಹಾಲ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಹೀಗೆ 50 ರನ್ಗೂ ಮುನ್ನವೇ 4 ವಿಕೆಟ್ ಕಳೆದುಕೊಂಡಿತು. ಆ್ಯಂಡ್ರೋ ರಸೆಲ್(12) ಆಟ ಇಂದುಕೂಡ ನಡೆಯಲಿಲ್ಲ.
ಬಳಿಕ 6ನೇ ವಿಕೆಟ್ಗೆ ಇಯಾನ್ ಮಾರ್ಗನ್ ಜೊತೆಯಾದ ಪ್ಯಾಟ್ ಕಮಿನ್ಸ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಕಮಿನ್ಸ್ ಬಿರುಸಿನ ಆಟದ ಮೊರೆಹೋದರೆ ಮಾರ್ಗನ್ ಇವರಿಗೆ ಉತ್ತಮ ಸಾತ್ ನೀಡಿದರು. ಈ ಜೋಡಿ 87 ರನ್ಗಳ ಉಪಯುಕ್ತ ಕಾಣಿಕೆ ನೀಡಿತು.
IPL 2020: ಎಚ್ಚರಿಕೆ: ದುರ್ಬಲ ಹೃದಯದವರು ಕಿಂಗ್ಸ್ ಇಲೆವೆನ್ ಪಂಜಾಬ್ ಮ್ಯಾಚ್ ನೋಡ್ಬೇಡಿ..!
ಕಮಿನ್ಸ್ 36 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 53 ರನ್ ಸಿಡಿಸಿದರೆ, ಮಾರ್ಗನ್ 29 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 39 ರನ್ ಗಳಿಸಿದರು.
ಇವರಿಬ್ಬರ ಆಟದ ನೆರವಿನಿಂದ ಅಂತಿಮವಾಗಿ ಕೋಲ್ಕತ್ತಾ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಮುಂಬೈ ಪರ ರಾಹುಲ್ ಚಹಾರ್ 2 ವಿಕೆಟ್ ಕಿತ್ತರೆ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ನಥನ್ ಕಲ್ಟನ್ ತಲಾ 1 ವಿಕೆಟ್ ಪಡೆದರು.
Published by:
Vinay Bhat
First published:
October 16, 2020, 10:49 PM IST