ಅಬುಧಾಬಿ (ಅ. 16): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 32ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದಿರುವ ಕೆಕೆಆರ್ ಮೊದಲ 4 ವಿಕೆಟ್ ಕಳೆದುಕೊಂಡಿದೆ. ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ರಾಹುಲ್ ತ್ರಿಪಾಠಿ ಕೇವಲ 7 ರನ್ಗೆ ಔಟ್ ಆದರು. ನಿತೀಶ್ ರಾಣ(5) ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಶುಭ್ಮನ್ ಗಿಲ್ 23 ಎಸೆತಗಳಲ್ಲಿ 21 ರನ್ ಬಾರಿಸಿ ನಿರ್ಗಮಿಸಿದರೆ, ದಿನೇಶ್ ಕಾರ್ತಿಕ್ 4 ರನ್ಗೆ ರಾಹುಲ್ ಚಹಾಲ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಆ್ಯಂಡ್ರೋ ರಸೆಲ್(12) ಆಟ ಇಂದೂ ನಡೆಯಲಿಲ್ಲ. ನಾಯಕ ಇಯಾನ್ ಮಾರ್ಗನ್ ಹಾಗೂ ಪ್ಯಾಟ್ ಕಮಿನ್ಸ್ ಕ್ರೀಸ್ನಲ್ಲಿದ್ದಾರೆ.
ಇಂದಿನ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್(ವಿ.ಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ನಥನ್ ಕಲ್ಟರ್ ನೈಲ್.
ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ಕ್ರಿಸ್ ಗ್ರೀನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ.
ಈ ಬಾರಿಯ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಮುಂಬೈ ತಂಡ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿದ್ದು, 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಕೋಲ್ಕತ್ತಾ ಆಡಿರುವ 7 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿ 3ರಲ್ಲಿ ಸೋಲು ಕಂಡಿದೆ. ಹೀಗಾಗಿ ಪ್ಲೇ ಆಫ್ ಹಾದಿಯನ್ನು ಭದ್ರ ಪಡಿಸಿಕೊಳ್ಳಲು ಉಭಯ ತಂಡಗಳಿಗೆ ಗೆಲುವಿನ ಅಗತ್ಯವಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಹುತೇಕ ಎಲ್ಲ ಆಟಗಾರರು ಪ್ರಚಂಡ ಫಾರ್ಮ್ನಲ್ಲಿದ್ದಾರೆ. ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಜವಾಬ್ದಾರಿಗೂ ಮೀರಿ ಪ್ರದರ್ಶನ ನೀಡುತ್ತಿದ್ದಾರೆ.
ಇತ್ತ ಕಳೆದ 3 ಪಂದ್ಯಗಳ ಪೈಕಿ 2ರಲ್ಲಿ ಅಂತಿಮ ಹಂತದಲ್ಲಿ ಜಯ ದಾಖಲಿಸಿದ ಕೆಕೆಆರ್, ಆರ್ಸಿಬಿ ಎದುರು ಹೀನಾಯವಾಗಿ ಸೋಲು ಕಂಡಿತು. ಇದಕ್ಕೂ ಮೊದಲು ಸಿಎಸ್ಕೆ ಹಾಗೂ ಕಿಂಗ್ಸ್ ಇಲೆವೆನ್ ಎದುರು ರೋಚಕ ಜಯ ದಾಖಲಿಸಿತ್ತು. ತಂಡದಲ್ಲಿ ನಿಂತು ಆಡುವ ಆಟಗಾರರು ಯಾರೂ ಇಲ್ಲ.
ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಮುಂಬೈ ಮತ್ತು ಕೋಲ್ಕತ್ತಾ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ ಇಂಡಿಯನ್ಸ್ ತಂಡ 20ರಲ್ಲಿ ಗೆಲುವು ದಾಖಲಿಸಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.