MI vs DC Qualifier 1, IPL 2020 Live Score: ಮುಂಬೈ 5 ವಿಕೆಟ್ ಪತನ
IPL 2020 Playoffs, Mumbai Indians vs Delhi Capitals Qualifier 1 Live Score: ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಮುಂಬೈ ಇಂಡಿಯನ್ಸ್ 14 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ದುಬೈ (ನ. 05): 13ನೇ ಆವೃತ್ತಿಯ ಐಪಿಎಲ್ನಲ್ಲಿಂದು ಮಹತ್ವದ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದೆ. ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣೆಸಾಟ ನಡೆಸುತ್ತಿದ್ದು, ಗೆದ್ದ ಟೀಂ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ.
ಸದ್ಯ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿರುವ ಮುಂಬೈ ಆರಂಭದಲ್ಲೇ ನಾಯಕನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ ತಾನೆದುರಿಸಿದ ಮೊದಲ ಎಸೆತದಲ್ಲೇ ಅಶ್ವಿನ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರು.
ಈ ಸಂದರ್ಭ ಒಂದಾದ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿದ ಈ ಜೋಡಿ 7 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 70ರ ಗಡಿ ದಾಟಿಸಿತು. ಆದರೆ, 8ನೇ ಓವರ್ನಲ್ಲಿ ಡಿಕಾಕ್ 25 ಎಸೆತಗಳಲ್ಲಿ 40 ರನ್ ಸಿಡಿಸಿ ಔಟ್ ಆದರು.
ಬಳಿಕ ಇಶಾನ್ ಕಿಶನ್ ಹಾಗೂ ಯಾದವ್ ಇದೇ ರನ್ ಗತಿಯಲ್ಲಿ ಬ್ಯಾಟ್ ಬೀಸಿ 12 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 100ಕ್ಕೆ ತಂದಿಟ್ಟರು. ಸೂರ್ಯಕುಮಾರ್ 36 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಆದರೆ, 50 ಬಾರಿಸಿದ ಬೆನ್ನಲ್ಲೆ ಯಾದವ್ ಔಟ್ ಆದರು. ಕೀರೊನ್ ಪೊಲಾರ್ಡ್ ಬಂದ ಬೆನ್ನಲ್ಲೆ ಶೂನ್ಯಕ್ಕೆ ನಿರ್ಗಮಿಸಿದರು. ಕ್ರುನಾಲ್ ಪಾಂಡ್ಯ ಕೂಡ(13) ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಸದ್ಯ ಕಿಶನ್ ಜೊತೆ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸುತ್ತಿದ್ದಾರೆ.
ಇಂದಿನ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ.
ಇತ್ತ ಮುಂಬೈ ಪರ ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಹಾಗೂ ಹಾರ್ದಿಕ್ ಪಾಂಡ್ಯ ಕಮ್ಬ್ಯಾಕ್ ಮಾಡಿದ್ದಾರೆ.
ಮುಂಬೈ ಲೀಗ್ನಲ್ಲಿ ಒಟ್ಟು 14 ಪಂದ್ಯವನ್ನಾಡಿದೆ. 9 ರಲ್ಲಿ ಗೆದ್ದು 5 ಪಂದ್ಯದಲ್ಲಿ ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ ಒಟ್ಟು 18 ಅಂಕ ಗಳಿಸಿ ಅಗ್ರಸ್ಥಾನಿಯಾಗಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಲೀಗ್ನಲ್ಲಿ ಒಟ್ಟು 14 ಪಂದ್ಯವನ್ನಾಡಿದೆ. 8 ಪಂದ್ಯದಲ್ಲಿ ಗೆದ್ದರೆ 6 ಪಂದ್ಯದಲ್ಲಿ ಸೋಲು ಅನುಭವಿಸಿದೆ.
ಮುಂಬೈ ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ 10 ವಿಕೆಟ್ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಇದರ ಹೊರತಾಗಿಯೂ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲನೇ ಸ್ಥಾನದಲ್ಲಿಯೇ ಉಳಿದಿತ್ತು. ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಳೆದ ಪಂದ್ಯದಲ್ಲಿ ಜಯಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದೊಂದಿಗೆ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲು ನಡೆಸುತ್ತಿದೆ.
ಮುಂಬೈಗೆ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು ಬ್ಯಾಟಿಂಗ್ ಬಲ ಇನ್ನಷ್ಟು ಹೆಚ್ಚಿಸಿದೆ. ಆದರೆ, ಕಳೆದ ಪಂದ್ಯದಲ್ಲಿ ಬೇಗನೆ ನಿರ್ಗಮಿಸಿದ್ದರು. ಕ್ವಿಂಟನ್ ಡಿಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಕೀರೊನ್ ಪೊಲಾರ್ಡ್ ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಇತ್ತ ಡೆಲ್ಲಿಗೆ ಪೃಥ್ವಿ ಶಾ ಕಳಪೆ ಬ್ಯಾಟಿಂಗ್ ತಲೆನೋವಾಗಿ ಪರಿಣಮಿಸಿದೆ. ಶಿಖರ್ ಧವನ್ ಹಾಗೂ ಅಜಿಂಕ್ಯಾ ರಹಾನೆ ಫಾರ್ಮ್ಗೆ ಮರಳಿರುವುದು ಸಂತಸದ ಸಂಗತಿ. ಆದರೆ, ಕಳೆದ ಕೆಲವು ಪಂದ್ಯಗಳಿಂದ ನಾಯಕ ಅಯ್ಯರ್, ರಿಷಭ್ ಪಂತ್ ಹಾಗೂ ಮಾರ್ಕಸ್ ಸ್ಟಾಯಿನಿಸ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ.
ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಮುಂಬೈ ಇಂಡಿಯನ್ಸ್ 14 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
Published by:Vinay Bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ