MI vs DC Qualifier 1, IPL 2020: ಬುಮ್ರಾ ಬೆಂಕಿಯ ಚೆಂಡು: ಆರನೇ ಬಾರಿ ಫೈನಲ್​ಗೆ ಲಗ್ಗೆಯಿಟ್ಟ ಮುಂಬೈ

IPL 2020 Playoffs, Mumbai Indians vs Delhi Capitals Qualifier 1: 57 ರನ್​ಗಳ ಭರ್ಜರಿ ಜಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2020ರ ಫೈನಲ್​ಗೆ ಕಾಲಿಟ್ಟಿದೆ. ಸೋತಿರುವ ಡೆಲ್ಲಿ ತಂಡ ನಾಳೆ ನಡೆಯಲಿರುವ ಆರ್​ಸಿಬಿ ಹಾಗೂ ಹೈದರಾಬಾದ್ ಎಲಿಮಿನೇಟರ್ ಪಂದ್ಯದ ಗೆದ್ದ ತಂಡದ ಜೊತೆ ಸೆಣೆಸಾಟ ನಡೆಸಲಿದೆ.

MI

MI

 • Share this:
  ದುಬೈ (ನ. 05): 13ನೇ ಆವೃತ್ತಿಯ ಐಪಿಎಲ್​ನಲ್ಲಿಂದು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 57 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಐಪಿಎಲ್ ಇತಿಹಾಸದಲ್ಲಿ ಆರನೇ ಬಾರಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಜಸ್​ಪ್ರಿತ್ ಬುಮ್ರಾ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಡೆಲ್ಲಿ ಬ್ಯಾಟ್ಸ್​ಮನ್​ಗಳು ಸೋಲು ಅನುಭವಿಸಬೇಕಾಯಿತು. ಫೈನಲ್​ಗೇರಲು ಡೆಲ್ಲಿಗೆ ಇನ್ನೂ ಒಂದು ಅವಕಾಶವಿದ್ದು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಜಯ ಸಾಧಿಸಬೇಕಿದೆ.

  ಮುಂಬೈ ನೀಡಿದ್ದ 201 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಮೊದಲ ಓವರ್​ನಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಟ್ರೆಂಟ್ ಬೌಲ್ಟ್ ಬೌಲಿಂಗ್​ನಲ್ಲಿ ಪೃಥ್ವಿ ಶಾ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರೆ, ಅಜಿಂಕ್ಯಾ ರಹಾನೆ ಎಲ್​ಬಿ ಬಲೆಗೆ ಸಿಲುಕಿದರು. ನಂತರದ ಬುಮ್ರಾ ಓವರ್​ನಲ್ಲಿ ಶಿಖರ್ ಧವನ್ ಕ್ಲೀನ್ ಬೌಲ್ಡ್ ಆದರು. ಹೀಗೆ ಡೆಲ್ಲಿ ಶೂನ್ಯಕ್ಕೆ 3 ವಿಕೆಟ್ ಕಳೆದುಕೊಂಡಿತು.

  ಬಳಿಕ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಮಾರ್ಕಸ್ ಸ್ಟಾಯಿನಿಸ್ ಎಚ್ಚರಿಕೆಯ ಆಟಕ್ಕೆ ಮುಂದಾದರೂ ಅದು ಸಾಧ್ಯವಾಗಲಿಲ್ಲ. ಬುಮ್ರಾ ಬೌಲಿಂಗ್​ನಲ್ಲಿ ಅಯ್ಯರ್ 12 ರನ್​ಗೆ ಔಟ್ ಆದರು. ರಿಷಭ್ ಪಂತ್ ಆಟ ಕೇವಲ 3 ರನ್​ಗೆ ಅಂತ್ಯವಾಯಿತು.

  ಈ ಸಂದರ್ಭ ಅಕ್ಷರ್ ಪಟೇಲ್ ಜೊತೆಯಾದ ಸ್ಟಾಯಿನಿಸ್ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಆಕರ್ಷಕ ಅರ್ಧಶತಕ ಸಿಡಿಸಿಯೂ ಮಿಂಚಿದರು. ಈ ಜೋಡಿ ಉತ್ತಮ ಜೊತೆಯಾಟ ಕೂಡ ಆಡಿತು. ಆದರೆ, ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ. 46 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಬಾರಿಸಿ ಸ್ಟಾಯಿನಿಸ್ 65 ರನ್​ಗೆ ಔಟ್ ಆದರು. ಅಕ್ಷರ್ 33 ಎಸೆತಗಳಲ್ಲಿ 42 ರನ್ ಗಳಿಸಿದರು.

  ಅಂತಿಮವಾಗಿ ಡೆಲ್ಲಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್​ಗಳನ್ನಷ್ಟೆ ಗಳಿಸಿ ಸೋಲಿಗೆ ಶರಣಾಯಿತು. ಮುಂಬೈ ಪರ ಮಾರಕ ದಾಳಿ ಸಂಘಟಿಸಿದ ಜಸ್​ಪ್ರೀತ್ ಬುಮ್ರಾ ಕೇವಲ 14 ರನ್​ಗೆ 4 ವಿಕೆಟ್ ಕಿತ್ತು ಮಿಂಚಿದರೆ, ಟ್ರೆಂಟ್ ಬೌಲ್ಟ್ 2, ಕ್ರುನಾಲ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್​ ತಲಾ 1 ವಿಕೆಟ್ ಪಡೆದರು.

  57 ರನ್​ಗಳ ಭರ್ಜರಿ ಜಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2020ರ ಫೈನಲ್​ಗೆ ಕಾಲಿಟ್ಟಿದೆ. ಸೋತಿರುವ ಡೆಲ್ಲಿ ತಂಡ ನಾಳೆ ನಡೆಯಲಿರುವ ಆರ್​ಸಿಬಿ ಹಾಗೂ ಹೈದರಾಬಾದ್ ಎಲಿಮಿನೇಟರ್ ಪಂದ್ಯದ ಗೆದ್ದ ತಂಡದ ಜೊತೆ ಸೆಣೆಸಾಟ ನಡೆಸಲಿದೆ.

  ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಮುಂಬೈ ಆರಂಭದಲ್ಲೇ ನಾಯಕನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ ತಾನೆದುರಿಸಿದ ಮೊದಲ ಎಸೆತದಲ್ಲೇ ಅಶ್ವಿನ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿದರು.

  ಈ ಸಂದರ್ಭ ಒಂದಾದ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿದ ಈ ಜೋಡಿ 7 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 70ರ ಗಡಿ ದಾಟಿಸಿತು. ಆದರೆ, 8ನೇ ಓವರ್​ನಲ್ಲಿ ಡಿಕಾಕ್ 25 ಎಸೆತಗಳಲ್ಲಿ 40 ರನ್ ಸಿಡಿಸಿ ಔಟ್ ಆದರು.

  ಬಳಿಕ ಇಶಾನ್ ಕಿಶನ್ ಹಾಗೂ ಯಾದವ್ ಇದೇ ರನ್ ಗತಿಯಲ್ಲಿ ಬ್ಯಾಟ್ ಬೀಸಿ 12 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 100ಕ್ಕೆ ತಂದಿಟ್ಟರು. ಸೂರ್ಯಕುಮಾರ್ 36 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಆದರೆ, 50 ಬಾರಿಸಿದ ಬೆನ್ನಲ್ಲೆ ಯಾದವ್ ಔಟ್ ಆದರು. ಕೀರೊನ್ ಪೊಲಾರ್ಡ್​ ಬಂದ ಬೆನ್ನಲ್ಲೆ ಶೂನ್ಯಕ್ಕೆ ನಿರ್ಗಮಿಸಿದರು. ಕ್ರುನಾಲ್ ಪಾಂಡ್ಯ ಕೂಡ(13) ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

  ಕೊನೆ ಹಂತದಲ್ಲಿ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರಿಸಿ ತಂಡಕ್ಕೆ ಆಸರೆಯಾದರು. ಕಿಶನ್ 30 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 55 ರನ್ ಹಾಗೂ ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ಅಜೇಯ 37 ರನ್ ಚಚ್ಚಿದರು.

  ಅಂತಿಮವಾಗಿ ಮುಂಬೈ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಡೆಲ್ಲಿ ಪರ ಆರ್. ಅಶ್ವಿನ್ 3 ವಿಕೆಟ್ ಕಿತ್ತು ಮಿಂಚಿದರೆ, ಮಾರ್ಕಸ್ ಸ್ಟಾಯಿನಿಸ್ ಹಾಗೂ ಆನ್ರಿಚ್ ನಾರ್ಟ್ಜೆ 1 ವಿಕೆಟ್ ಪಡೆದರು.
  Published by:Vinay Bhat
  First published: