ದುಬೈ (ನ. 05): 13ನೇ ಆವೃತ್ತಿಯ ಐಪಿಎಲ್ನಲ್ಲಿಂದು ಮಹತ್ವದ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ದೊಡ್ಡ ಮೊತ್ತ ಕಲೆಹಾಕಿದೆ. ಸೂರ್ಯಕುಮಾರ್ ಹಾಗೂ ಇಶಾನ್ ಕಿಶನ್ ಅವರ ಆಕರ್ಷಕ ಅರ್ಧಶತಕದ ಜೊತೆ ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್ ನೆವಿನಿಂದ ಮುಂಬೈ 20 ಓವರ್ಗಳಲ್ಲಿ 200 ರನ್ ಬಾರಿಸಿದೆ.
ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಡೆಲ್ಲಿ ಮೊದಲ ಓವರ್ನಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ಪೃಥ್ವಿ ಶಾ ಕೀಪರ್ಗೆ ಕ್ಯಾಚಿತ್ತು ನಿರ್ಗಮಿಸಿದರೆ, ಅಜಿಂಕ್ಯಾ ರಹಾನೆ ಎಲ್ಬಿ ಬಲೆಗೆ ಸಿಲುಕಿದರು. ನಂತರದ ಬುಮ್ರಾ ಓವರ್ನಲ್ಲಿ ಶಿಖರ್ ಧವನ್ ಕ್ಲೀನ್ ಬೌಲ್ಡ್ ಆದರು. ಹೀಗೆ ಡೆಲ್ಲಿ ಶೂನ್ಯಕ್ಕೆ 3 ವಿಕೆಟ್ ಕಳೆದುಕೊಂಡಿತು.
ಬಳಿಕ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಮಾರ್ಕಸ್ ಸ್ಟಾಯಿನಿಸ್ ಎಚ್ಚರಿಕೆಯ ಆಟಕ್ಕೆ ಮುಂದಾದರೂ ಅದು ಸಾಧ್ಯವಾಗಲಿಲ್ಲ. ಬುಮ್ರಾ ಬೌಲಿಂಗ್ನಲ್ಲಿ ಅಯ್ಯರ್ 12 ರನ್ಗೆ ಔಟ್ ಆದರು. ರಿಷಭ್ ಪಂತ್ ಆಟ ಕೇವಲ 3 ರನ್ಗೆ ಅಂತ್ಯವಾಯಿತು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಮುಂಬೈ ಆರಂಭದಲ್ಲೇ ನಾಯಕನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ ತಾನೆದುರಿಸಿದ ಮೊದಲ ಎಸೆತದಲ್ಲೇ ಅಶ್ವಿನ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರು.
ಈ ಸಂದರ್ಭ ಒಂದಾದ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿದ ಈ ಜೋಡಿ 7 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 70ರ ಗಡಿ ದಾಟಿಸಿತು. ಆದರೆ, 8ನೇ ಓವರ್ನಲ್ಲಿ ಡಿಕಾಕ್ 25 ಎಸೆತಗಳಲ್ಲಿ 40 ರನ್ ಸಿಡಿಸಿ ಔಟ್ ಆದರು.
ಬಳಿಕ ಇಶಾನ್ ಕಿಶನ್ ಹಾಗೂ ಯಾದವ್ ಇದೇ ರನ್ ಗತಿಯಲ್ಲಿ ಬ್ಯಾಟ್ ಬೀಸಿ 12 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 100ಕ್ಕೆ ತಂದಿಟ್ಟರು. ಸೂರ್ಯಕುಮಾರ್ 36 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಆದರೆ, 50 ಬಾರಿಸಿದ ಬೆನ್ನಲ್ಲೆ ಯಾದವ್ ಔಟ್ ಆದರು. ಕೀರೊನ್ ಪೊಲಾರ್ಡ್ ಬಂದ ಬೆನ್ನಲ್ಲೆ ಶೂನ್ಯಕ್ಕೆ ನಿರ್ಗಮಿಸಿದರು. ಕ್ರುನಾಲ್ ಪಾಂಡ್ಯ ಕೂಡ(13) ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಕೊನೆ ಹಂತದಲ್ಲಿ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರಿಸಿ ತಂಡಕ್ಕೆ ಆಸರೆಯಾದರು. ಕಿಶನ್ 30 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 55 ರನ್ ಹಾಗೂ ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ಅಜೇಯ 37 ರನ್ ಚಚ್ಚಿದರು.
ಅಂತಿಮವಾಗಿ ಮುಂಬೈ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಡೆಲ್ಲಿ ಪರ ಆರ್. ಅಶ್ವಿನ್ 3 ವಿಕೆಟ್ ಕಿತ್ತು ಮಿಂಚಿದರೆ, ಮಾರ್ಕಸ್ ಸ್ಟಾಯಿನಿಸ್ ಹಾಗೂ ಆನ್ರಿಚ್ ನಾರ್ಟ್ಜೆ 1 ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್, ಡೆನಿಯಲ್ ಸ್ಯಾಮ್ಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಆನ್ರಿಚ್ ನಾರ್ಟ್ಜೆ.
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ), ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ರಾಹುಲ್ ಚಹರ್, ನಥನ್ ಕಲ್ಟರ್ ನೈಲ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.