IPL

  • associate partner
HOME » NEWS » Ipl » IPL 2020 LIVE SCORE RR VS MI TODAYS MATCH AT ABU DHABI RAJASTHAN ROYALS WON BY 8 WICKETS ZP

RR vs MI: ಸ್ಟೋಕ್ಸ್-ಸಂಜು ಸಿಡಿಲಬ್ಬರದ ಮುಂದೆ ಮಂಕಾದ ಮುಂಬೈ ಇಂಡಿಯನ್ಸ್

IPL 2020 Rajasthan Royals vs Mumbai Indians: ಐಪಿಎಲ್‌ನಲ್ಲಿ ಇದುವರೆಗೆ ಉಭಯ ತಂಡಗಳು 22 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ 11 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ 11 ರಲ್ಲಿ ವಿಜಯ ಸಾಧಿಸಿದೆ.

news18-kannada
Updated:October 26, 2020, 3:06 PM IST
RR vs MI: ಸ್ಟೋಕ್ಸ್-ಸಂಜು ಸಿಡಿಲಬ್ಬರದ ಮುಂದೆ ಮಂಕಾದ ಮುಂಬೈ ಇಂಡಿಯನ್ಸ್
Ben Stokes-Sanju samson
  • Share this:
ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ರಾಜಸ್ಥಾನ್ ರಾಯಲ್ಸ್​ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಆರಂಭಿಕ ಆಟಗಾರ ಬೆನ್ ಸ್ಟೋಕ್ಸ್ ಅವರ ಸ್ಪೋಟಕ ಸೆಂಚುರಿ ಹಾಗೂ ಸಂಜು ಸ್ಯಾಮ್ಸನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಮುಂಬೈ ನೀಡಿದ 196 ರನ್​ಗಳ ಬೃಹತ್ ಗುರಿಯನ್ನು RR ಚೇಸ್ ಮಾಡಿತು. 

ಕಠಿಣ ಸವಾಲು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಆರಂಭ ಉತ್ತಮವಾಗಿರಲಿಲ್ಲ. 2ನೇ ಓವರ್​ನಲ್ಲೇ ರಾಬಿನ್ ಉತ್ತಪ್ಪ (13) ವಿಕೆಟ್ ಪಡೆಯುವ ಮೂಲಕ ಪ್ಯಾಟಿನ್ಸನ್ ಮುಂಬೈ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಈ ಹಂತದಲ್ಲಿ ಸ್ಟೋಕ್ಸ್ ಜೊತೆಗೂಡಿದ ನಾಯಕ ಸ್ಟೀವ್ ಸ್ಮಿತ್ ಅಬ್ಬರ ಬ್ಯಾಟಿಂಗ್ ನಡೆಸಿದ್ದರು. ಪರಿಣಾಮ 4 ಓವರ್​ ಮುಕ್ತಾಯಕ್ಕೆ ತಂಡದ ಮೊತ್ತ 41 ಕ್ಕೆ ಬಂದು ನಿಂತಿತು. ಆದರೆ ಐದನೇ ಓವರ್​ನಲ್ಲಿ ಮತ್ತೆ ಪ್ಯಾಟಿನ್ಸನ್​ಗೆ ಚೆಂಡು ನೀಡಿದ ಪೊಲಾರ್ಡ್ ಸ್ಮಿತ್​ (11) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಸ್ಟೋಕ್ಸ್​ ಬಿರುಸಿನ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಪವರ್​ಪ್ಲೇ ಮುಕ್ತಾಯದ ವೇಳೆಗೆ 55 ರನ್​ಗಳಿಸುವಂತಾಯಿತು. ಅಲ್ಲದೆ 28 ಎಸೆತಗಳಲ್ಲಿ 1 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಸ್ಟೋಕ್ಸ್ ತಮ್ಮ ಅರ್ಧಶತಕ ಪೂರೈಸಿದರು.

ಸ್ಟೋಕ್ಸ್​ ಅವರ ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಮೊದಲ 10 ಓವರ್​ನಲ್ಲಿ 99 ರನ್ ಪೇರಿಸಲು ಸಾಧ್ಯವಾಯಿತು. ಅಲ್ಲದೆ ಸಂಜು ಸ್ಯಾಮ್ಸನ್ ಜೊತೆಗೂಡಿ 63 ಎಸೆತಗಳಲ್ಲಿ 100 ರನ್​ಗಳ ಜೊತೆಯಾಟವಾಡಿದರು. ಇದರ ಬೆನ್ನಲ್ಲೇ 27 ಎಸೆತಗಳಲ್ಲಿ ಸಂಜು ಸ್ಯಾಮ್ಸನ್ ತಮ್ಮ ಹಾಫ್ ಸೆಂಚುರಿ ಪೂರೈಸಿದರು. ಈ ಅರ್ಧಶತಕದಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳು ಒಳಗೊಂಡಿದ್ದವು.

ಸಂಜು-ಸ್ಟೋಕ್ಸ್ ಸಿಡಿಲಬ್ಬರದ ಮುಂದೆ ಮುಂಬೈ ಇಂಡಿಯನ್ಸ್ ಬೌಲರುಗಳು  ಹಳಿ ತಪ್ಪಿದರು. ಪರಿಣಾಮ ಕೊನೆಯ 4 ಓವರ್​ನಲ್ಲಿ ರಾಜಸ್ಥಾನ್​ಗೆ ಗೆಲ್ಲಲು ಬೇಕಾಗಿದ್ದದ್ದು ಕೇವಲ 24 ರನ್​ಗಳು ಮಾತ್ರ. ಈ ಹಂತದಲ್ಲಿ ಮತ್ತಷ್ಟು ಅಬ್ಬರಿಸಿದ ಸ್ಟೋಕ್ಸ್ ಕೇವಲ 59 ಎಸೆತಗಳಲ್ಲಿ  ಶತಕ ಪೂರೈಸಿದರು. ಈ ಸ್ಫೋಟಕ ಇನಿಂಗ್ಸ್​ನಲ್ಲಿ ಸ್ಟೋಕ್ಸ್ ಬ್ಯಾಟ್​ನಿಂದ ಸಿಡಿದದ್ದು 14 ಬೌಂಡರಿ ಹಾಗೂ 3 ಸಿಕ್ಸರ್​ಗಳು.

ಅಂತಿಮವಾಗಿ ಅಜೇಯರಾಗಿ ಉಳಿದ ಸಂಜು ಸ್ಯಾಮ್ಸನ್​ (54) ಹಾಗೂ ಬೆನ್ ಸ್ಟೋಕ್ಸ್ 18.2 ಓವರ್​ಗಳಲ್ಲಿ 196 ರನ್​ ಪೇರಿಸುವ ಮೂಲಕ ರಾಜಸ್ಥಾನ್ ರಾಯಲ್ಸ್​ಗೆ ಭರ್ಜರಿ ಗೆಲುವು ತಂದುಕೊಟ್ಟರು.

ಇದಕ್ಕೂ ಟಾಸ್ ಗೆದ್ದ ಮುಂಬೈ ಹಂಗಾಮಿ ನಾಯಕ ಕೀರನ್ ಪೊಲಾರ್ಡ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಈ ಬಾರಿ ಕ್ವಿಂಟನ್ ಡಿ ಕಾಕ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ವೈಯುಕ್ತಿಕ 6 ರನ್​ಗಳಿಸಿದ್ದ ವೇಳೆ ಡಿಕಾಕ್  ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು.ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅದರೊಂದಿಗೆ ಒನ್​ಡೌನ್​ನಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಆರಂಭದಿಂದಲೇ ಅಬ್ಬರಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತ 59 ಕ್ಕೆ ಬಂದು ನಿಂತಿತು.

ಪವರ್​ಪ್ಲೇ ಬಳಿಕ ಉತ್ತಮ ಜೊತೆಯಾಟವಾಡಿದ ಕಿಶನ್-ಸೂರ್ಯ 10 ಓವರ್​ನಲ್ಲಿ ತಂಡದ ಮೊತ್ತವನ್ನು 89ಕ್ಕೇರಿಸಿದರು. ಆದರೆ ಕಾರ್ತಿಕ್ ತ್ಯಾಗಿ ಎಸೆದ 11ನೇ ಓವರ್​ನಲ್ಲಿ ಜೋಫ್ರಾ ಆರ್ಚರ್ ಹಿಡಿದ ಅದ್ಭುತ ಕ್ಯಾಚ್​​ಗೆ ಇಶಾನ್ ಕಿಶನ್ (37) ತಮ್ಮ ಇನಿಂಗ್ಸ್​ ಅಂತ್ಯಗೊಳಿಸಲೇಬೇಕಾಯಿತು. ಇದರ ಬೆನ್ನಲ್ಲೇ ಶ್ರೇಯಸ್ ಗೋಪಾಲ್​ಗೆ ವಿಕೆಟ್ ಒಪ್ಪಿಸಿ ಸೂರ್ಯಕುಮಾರ್ ಯಾದವ್ (40) ಹೊರ ನಡೆದರು. ಬಳಿಕ ಬಂದ ಪೊಲಾರ್ಡ್​ ಒಂದು ಸಿಕ್ಸರ್ ಸಿಡಿಸಿ ಶ್ರೇಯಸ್ ಗೋಪಾಲ್​ ಎಸೆತದಲ್ಲಿ ಕ್ಲೀನ್ ಬೌಲ್ಡ್​ ಆಗಿ ನಿರ್ಗಮಿಸಿದರು. ಈ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರುಗಳು ಮೇಲುಗೈ ಸಾಧಿಸಿದ್ದರು.

ಆದರೆ ಅಂತಿಮ ಓವರ್​ಗಳಲ್ಲಿ ಕಂಬ್ಯಾಕ್ ಮಾಡಿದ ಮುಂಬೈ ಬ್ಯಾಟ್ಸ್​ಮನ್​ಗಳಾದ ಸೌರಭ್ ತಿವಾರಿ ಹಾಗೂ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ಅಂಕಿತ್ ರಜಪೂತ್ ಎಸೆದ 18ನೇ ಓವರ್​ನಲ್ಲಿ ಪಾಂಡ್ಯ 4​ ಸಿಕ್ಸರ್​ನೊಂದಿಗೆ ಒಟ್ಟು 27 ರನ್ ಕಲೆಹಾಕಿದರು. ಜೋಫ್ರಾ ಆರ್ಚರ್ ಅವರ 19ನೇ ಓವರ್​ನ ಮೊದಲ ಎಸೆತದಲ್ಲೇ ಸೌರಭ್ ತಿವಾರಿ (34) ಕ್ಯಾಚ್ ನೀಡಿ ಹೊರ ನಡೆದರು. ಈ ಓವರ್​ನಲ್ಲಿ ಆರ್ಚರ್ ನೀಡಿದ್ದು ಕೇವಲ 3 ರನ್ ಮಾತ್ರ.

ಅಂತಿಮ ಓವರ್​ನಲ್ಲಿ ಮತ್ತೆ ಅಬ್ಬರಿಸಿದ ಪಾಂಡ್ಯ ಸಿಕ್ಸ್, ಫೋರ್, ಫೋರ್​, ಸಿಕ್ಸ್​ ಮೂಲಕ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಕಾರ್ತಿಕ್ ತ್ಯಾಗಿ ಎಸೆದ ಕೊನೆಯ ಓವರ್​ನಲ್ಲಿ 27 ರನ್​ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 195 ಕ್ಕೆ ತಂದು ನಿಲ್ಲಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಶ್ರೇಯಸ್ ಗೋಪಾಲ್ 4 ಓವರ್​ನಲ್ಲಿ 30 ರನ್ ನೀಡಿ 2 ವಿಕೆಟ್ ಕಬಳಿಸಿ ಗಮನ ಸೆಳೆದರು.

ಬೆನ್ ಸ್ಟೋಕ್ಸ್ ಅವರ ಅಮೋಘ 107 ರನ್​ಗಳ ಸಹಾಯದಿಂದ ಜಯಗಳಿಸಿದ ರಾಜಸ್ಥಾನ್ ರಾಯಲ್ಸ್​ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಹಾಗೆಯೇ ಈ ಗೆಲುವಿನೊಂದಿಗೆ ಸ್ಮಿತ್ ಪಡೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.

POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
Published by: zahir
First published: October 25, 2020, 9:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories