ಅಬುಧಾಬಿ (ಅ. 06): ಇಲ್ಲಿನ ಶೇಖ್ ಝಯೀದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸವಾಲಿನ ಟಾರ್ಗೆಟ್ ನೀಡಿದೆ. ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕದ ನೆರವಿನಿಂದ ರೋಹಿತ್ ಪಡೆ 20 ಓವರ್ನಲ್ಲಿ 193 ರನ್ ಬಾರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಪ್ರಮುಖ ವಿಕೆಟ್ ಕಳೆದುಕೊಂಡಿತು. ಪದಾರ್ಪಣೆ ಪಂದ್ಯದಲ್ಲಿ ಕಾರ್ತಿಕ್ ತ್ಯಾಗಿ ಅವರು ಕ್ವಿಂಟನ್ ಡಿಕಾಕ್(23) ಅವರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದರು.
ಈ ಸಂದರ್ಭ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು. ಆದರೆ, ಅದು ಯಶಸ್ವಿ ಆಗಲಿಲ್ಲ. ರೋಹಿತ್ 23 ಎಸೆತಗಳಲ್ಲಿ 35 ರನ್ ಗಳಿಸಿದ್ದಾಗ ಶ್ರೇಯಸ್ ಗೋಪಾಲ್ ಬೌಲಿಂಗ್ನಲ್ಲಿ ಔಟ್ ಆದರು. ಇದರ ಮುಂದಿನ ಎಸೆದಲ್ಲೇ ಇಶಾನ್ ಕಿಶನ್ ಔಟ್ ಆಗಿ ಆಘಾತ ನೀಡಿದರು. ಕ್ರುನಾಲ್ ಪಾಂಡ್ಯ ಆಟ 12 ರನ್ಗೆ ಅಂತ್ಯವಾಯಿತು.
ಬಳಿಕ ಸೂರ್ಯಕುಮಾರ್ ಯಾದವ್ ಜೊತೆಯಾದ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾದರು. ಸೂರ್ಯಕುಮಾರ್ ಈ ಬಾರಿಯ ಐಪಿಎಲ್ನಲ್ಲಿ ಮೊದಲ ಅರ್ಧಶತಕ ಬಾರಿಸಿದರು. ಫಿಫ್ಟಿ ಬಳಿಕ ಸ್ಫೋಟಕ ಆಟವಾಡಿದ ಸೂರ್ಯ ತಂಡದ ರನ್ ಗತಿಯನ್ನು ಮತ್ತಷ್ಟು ಏರಿಸಿದರು. ಪಾಂಡ್ಯ ಕೂಡ ಇವರಿಗೆ ಉತ್ತಮ ಸಾತ್ ನೀಡಿದರು. ಅರ್ಧಶತಕದ ಜೊತೆಯಾಟವನ್ನೂ ಪೂರೈಸಿದರು.
ಸೂರ್ಯಕುಮಾರ್ 47 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 79 ರನ್ ಬಾರಿಸಿದರೆ, ಹಾರ್ದಿಕ್ 19 ಎಸೆತಗಳಲ್ಲಿ ಅಜೇಯ 30 ರನ್ ಚಚ್ಚಿದರು.
ಅಂತಿಮವಾಗಿ ಮುಂಬೈ ತಂಡ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತು. ಆರ್ಆರ್ ಪರ ಶ್ರೇಯಸ್ ಗೋಪಾಲ್ 2 ವಿಕೆಟ್ ಕಿತ್ತರೆ, ಜೋಫ್ರಾ ಆರ್ಚರ್ ಹಾಗೂ ಕಾರ್ತಿಕ್ ತ್ಯಾಗಿ ತಲಾ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್(ವಿ.ಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿಸನ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.
ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಹುಲ್ ತೇವಾಟಿಯಾ, ಮಾಹಿಪಾಲ್ ಲಮ್ರೋರ್, ಶ್ರೇಯಸ್ ಗೋಪಾಲ್, ಟಾಮ್ ಕುರ್ರನ್, ಜೋಫ್ರಾ ಆರ್ಚರ್, ಅಂಕಿತ್ ರಜಪೂತ್, ಕಾರ್ತಿಕ್ ತ್ಯಾಗಿ.