IPL 2020, MI vs RR: ಬುಮ್ರಾ 4 ವಿಕೆಟ್: ಬಟ್ಲರ್ ಸ್ಫೋಟಕ ಆಟ ವ್ಯರ್ಥ: ಮುಂಬೈಗೆ ಭರ್ಜರಿ ಜಯ
IPL 2020, Mumbai v Rajasthan: ತಂಡದ ಗೆಲುವಿಗೆ ಹೋರಾಟ ನಡೆಸಿದ ಜಾಸ್ ಬಟ್ಲರ್ ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದರು. ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಒಂದು ಸಂದರ್ಭ ಮುಂಬೈಗೆ ಸೋಲಿನ ಭೀತಿ ತಂದಿಟ್ಟರು.
ಅಬುಧಾಬಿ (ಅ. 06): ಇಲ್ಲಿನ ಶೇಖ್ ಝಯೀದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 20ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 57 ರನ್ಗಳ ಭರ್ಜರಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಜಾಸ್ ಬಟ್ಲರ್(70) ಏಕಾಂಗಿ ಹೋರಾಟಕ್ಕೆ ಫಲ ಸಿಗದೆ ಆರ್ಆರ್ ತಂಡ ಸತತ ಮೂರನೇ ಸೋಲುಕಂಡಿದೆ. ಜಸ್ಪ್ರೀತ್ ಬುಮ್ರಾ ಮರಳಿ ಫಾರ್ಮ್ಗೆ ಬಂದಿದ್ದು ಕೇವಲ 20 ರನ್ಗೆ 4 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮುಂಬೈ ನೀಡಿದ್ದ 194 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 12 ರನ್ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್ನಲ್ಲೇ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟ್ ಆಗಿ ಮತ್ತೆ ನಿರಾಸೆ ಮೂಡಿಸಿದರೆ, ನಾಯಕ ಸ್ಟೀವ್ ಸ್ಮಿತ್ ಒಂದು ಸಿಕ್ಸ್ ಬಾರಿಸಿ ನಿರ್ಗಮಿಸಿದರು. ಸಂಜು ಸ್ಯಾಮ್ಸನ್ ಸೊನ್ನೆ ಸುತ್ತಿದರು.
ಮಾಹಿಪಾಲ್ ಲಮ್ರೋರ್ 11 ರನ್ಗೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ತಂಡದ ಗೆಲುವಿಗೆ ಹೋರಾಟ ನಡೆಸಿದ ಜಾಸ್ ಬಟ್ಲರ್ ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದರು. ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಒಂದು ಸಂದರ್ಭ ಮುಂಬೈಗೆ ಸೋಲಿನ ಭೀತಿ ತಂದಿಟ್ಟರು. ಆದರೆ, 14ನೇ ಓವರ್ನ ಪ್ಯಾಟಿಸನ್ ಬೌಲಿಂಗ್ನಲ್ಲಿ ಸಿಕ್ಸ್ ಸಿಡಿಸಲೋಗಿ ಔಟ್ ಆದರು. ಬಟ್ಲರ್ ಕೇವಲ 44 ಎಸೆತಗಳಲ್ಲಿ 4 ಬೌಂಡರಿ, ಅಮೋಘ 5 ಸಿಕ್ಸರ್ ಸಿಡಿಸಿ 70 ರನ್ ಚಚ್ಚಿದರು.
50 for Jos Buttler!
Six! Dragged down and Buttler brings up his half-century.
ನಂತರ ಬಂದ ಬ್ಯಾಟ್ಸ್ಮನ್ಗಳು ಯಾರೂ ತಂಡವನ್ನು ಗೆಲುವಿನತ್ತ ಸಾಗಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆರ್ಆರ್ 19.1 ಓವರ್ನಲ್ಲಿ 136 ರನ್ಗೆ ಸರ್ವಪತನ ಕಂಡಿತು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಿತ್ತರೆ, ಟ್ರೆಂಟ್ ಬೌಲ್ಟ್ ಹಾಗೂ ಪ್ಯಾಟಿಸನ್ ತಲಾ 2, ಕೀರೊನ್ ಪೊಲಾರ್ಡ್ ಹಾಗೂ ರಾಹುಲ್ ಚಹಾರ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಪ್ರಮುಖ ವಿಕೆಟ್ ಕಳೆದುಕೊಂಡಿತು. ಪದಾರ್ಪಣೆ ಪಂದ್ಯದಲ್ಲಿ ಕಾರ್ತಿಕ್ ತ್ಯಾಗಿ ಅವರು ಕ್ವಿಂಟನ್ ಡಿಕಾಕ್(23) ಅವರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದರು.
ಈ ಸಂದರ್ಭ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು. ಆದರೆ, ಅದು ಯಶಸ್ವಿ ಆಗಲಿಲ್ಲ. ರೋಹಿತ್ 23 ಎಸೆತಗಳಲ್ಲಿ 35 ರನ್ ಗಳಿಸಿದ್ದಾಗ ಶ್ರೇಯಸ್ ಗೋಪಾಲ್ ಬೌಲಿಂಗ್ನಲ್ಲಿ ಔಟ್ ಆದರು. ಇದರ ಮುಂದಿನ ಎಸೆದಲ್ಲೇ ಇಶಾನ್ ಕಿಶನ್ ಔಟ್ ಆಗಿ ಆಘಾತ ನೀಡಿದರು. ಕ್ರುನಾಲ್ ಪಾಂಡ್ಯ ಆಟ 12 ರನ್ಗೆ ಅಂತ್ಯವಾಯಿತು.
FIFTY!
A deft cut to get to the 8th IPL half-century for @surya_14kumar.
ಬಳಿಕ ಸೂರ್ಯಕುಮಾರ್ ಯಾದವ್ ಜೊತೆಯಾದ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾದರು. ಸೂರ್ಯಕುಮಾರ್ ಈ ಬಾರಿಯ ಐಪಿಎಲ್ನಲ್ಲಿ ಮೊದಲ ಅರ್ಧಶತಕ ಬಾರಿಸಿದರು. ಫಿಫ್ಟಿ ಬಳಿಕ ಸ್ಫೋಟಕ ಆಟವಾಡಿದ ಸೂರ್ಯ ತಂಡದ ರನ್ ಗತಿಯನ್ನು ಮತ್ತಷ್ಟು ಏರಿಸಿದರು. ಪಾಂಡ್ಯ ಕೂಡ ಇವರಿಗೆ ಉತ್ತಮ ಸಾತ್ ನೀಡಿದರು. ಅರ್ಧಶತಕದ ಜೊತೆಯಾಟವನ್ನೂ ಪೂರೈಸಿದರು.
ಸೂರ್ಯಕುಮಾರ್ 47 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 79 ರನ್ ಬಾರಿಸಿದರೆ, ಹಾರ್ದಿಕ್ 19 ಎಸೆತಗಳಲ್ಲಿ ಅಜೇಯ 30 ರನ್ ಚಚ್ಚಿದರು.
ಅಂತಿಮವಾಗಿ ಮುಂಬೈ ತಂಡ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತು. ಆರ್ಆರ್ ಪರ ಶ್ರೇಯಸ್ ಗೋಪಾಲ್ 2 ವಿಕೆಟ್ ಕಿತ್ತರೆ, ಜೋಫ್ರಾ ಆರ್ಚರ್ ಹಾಗೂ ಕಾರ್ತಿಕ್ ತ್ಯಾಗಿ ತಲಾ 1 ವಿಕೆಟ್ ಪಡೆದರು.
Published by:Vinay Bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ