IPL

  • associate partner
HOME » NEWS » Ipl » IPL 2020 LIVE SCORE MI VS RR TODAY CRICKET MATCH RR LOSE THREE MI ON TOP VB

IPL 2020 LIVE Score, MI vs RR: ಸೋಲಿನ ಸುಳಿಯಲ್ಲಿ ರಾಜಸ್ಥಾನ್

IPL 2020, Mumbai v Rajasthan Live Score: ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 10 ಹಾಗೂ ರಾಜಸ್ಥಾನ್ ರಾಯಲ್ಸ್ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಮಬಲದಿಂದ ಕೂಡಿದೆ.

news18-kannada
Updated:October 6, 2020, 10:53 PM IST
IPL 2020 LIVE Score, MI vs RR: ಸೋಲಿನ ಸುಳಿಯಲ್ಲಿ ರಾಜಸ್ಥಾನ್
ಮುಂಬೈ ಇಂಡಿಯನ್ಸ್
  • Share this:
ಅಬುಧಾಬಿ (ಅ. 06): ಇಲ್ಲಿನ ಶೇಖ್ ಝಯೀದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸವಾಲಿನ ಟಾರ್ಗೆಟ್ ನೀಡಿದೆ. ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕದ ನೆರವಿನಿಂದ ರೋಹಿತ್ ಪಡೆ 20 ಓವರ್​ನಲ್ಲಿ 193 ರನ್ ಬಾರಿಸಿದೆ.

ಸದ್ಯ ಗುರಿ ಬೆನ್ನಟ್ಟಿರುವ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಮೊದಲ ಓವರ್​ನಲ್ಲೇ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟ್ ಆಗಿ ಮತ್ತೆ ನಿರಾಸೆ ಮೂಡಿಸಿದರೆ, ನಾಯಕ ಸ್ಟೀವ್ ಸ್ಮಿತ್ ಒಂದು ಸಿಕ್ಸ್ ಬಾರಿಸಿ ನಿರ್ಗಮಿಸಿದರು. ಸಂಜು ಸ್ಯಾಮ್ಸನ್ ಸೊನ್ನೆ ಸುತ್ತಿದರು.

ಮಾಹಿಪಾಲ್ ಲಮ್ರೋರ್ 11 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ತಂಡದ ಗೆಲುವಿಗೆ ಹೋರಾಟ ನಡೆಸಿದ ಜಾಸ್ ಬಟ್ಲರ್ ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಸಿದರು. ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಒಂದು ಸಂದರ್ಭ ಮುಂಬೈಗೆ ಸೋಲಿನ ಭೀತಿ ತಂದಿಟ್ಟರು. ಆದರೆ, 14ನೇ ಓವರ್​ನ ಪ್ಯಾಟಿಸನ್ ಬೌಲಿಂಗ್​ನಲ್ಲಿ ಸಿಕ್ಸ್​ ಸಿಡಿಸಲೋಗಿ ಔಟ್ ಆದರು. ಬಟ್ಲರ್ ಕೇವಲ 44 ಎಸೆತಗಳಲ್ಲಿ 4 ಬೌಂಡರಿ, ಅಮೋಘ 5 ಸಿಕ್ಸರ್ ಸಿಡಿಸಿ 70 ರನ್ ಚಚ್ಚಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಪ್ರಮುಖ ವಿಕೆಟ್ ಕಳೆದುಕೊಂಡಿತು. ಪದಾರ್ಪಣೆ ಪಂದ್ಯದಲ್ಲಿ ಕಾರ್ತಿಕ್ ತ್ಯಾಗಿ ಅವರು ಕ್ವಿಂಟನ್ ಡಿಕಾಕ್(23) ಅವರನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರು.

ಈ ಸಂದರ್ಭ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು. ಆದರೆ, ಅದು ಯಶಸ್ವಿ ಆಗಲಿಲ್ಲ. ರೋಹಿತ್ 23 ಎಸೆತಗಳಲ್ಲಿ 35 ರನ್ ಗಳಿಸಿದ್ದಾಗ ಶ್ರೇಯಸ್ ಗೋಪಾಲ್ ಬೌಲಿಂಗ್​ನಲ್ಲಿ ಔಟ್ ಆದರು. ಇದರ ಮುಂದಿನ ಎಸೆದಲ್ಲೇ ಇಶಾನ್ ಕಿಶನ್ ಔಟ್ ಆಗಿ ಆಘಾತ ನೀಡಿದರು. ಕ್ರುನಾಲ್ ಪಾಂಡ್ಯ ಆಟ 12 ರನ್​ಗೆ ಅಂತ್ಯವಾಯಿತು.

ಬಳಿಕ ಸೂರ್ಯಕುಮಾರ್ ಯಾದವ್ ಜೊತೆಯಾದ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾದರು. ಸೂರ್ಯಕುಮಾರ್ ಈ ಬಾರಿಯ ಐಪಿಎಲ್​ನಲ್ಲಿ ಮೊದಲ ಅರ್ಧಶತಕ ಬಾರಿಸಿದರು. ಫಿಫ್ಟಿ ಬಳಿಕ ಸ್ಫೋಟಕ ಆಟವಾಡಿದ ಸೂರ್ಯ ತಂಡದ ರನ್ ಗತಿಯನ್ನು ಮತ್ತಷ್ಟು ಏರಿಸಿದರು. ಪಾಂಡ್ಯ ಕೂಡ ಇವರಿಗೆ ಉತ್ತಮ ಸಾತ್ ನೀಡಿದರು. ಅರ್ಧಶತಕದ ಜೊತೆಯಾಟವನ್ನೂ ಪೂರೈಸಿದರು.

ಸೂರ್ಯಕುಮಾರ್ 47 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 79 ರನ್ ಬಾರಿಸಿದರೆ, ಹಾರ್ದಿಕ್ 19 ಎಸೆತಗಳಲ್ಲಿ ಅಜೇಯ 30 ರನ್ ಚಚ್ಚಿದರು.

ಅಂತಿಮವಾಗಿ ಮುಂಬೈ ತಂಡ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತು. ಆರ್​ಆರ್ ಪರ ಶ್ರೇಯಸ್ ಗೋಪಾಲ್ 2 ವಿಕೆಟ್ ಕಿತ್ತರೆ, ಜೋಫ್ರಾ ಆರ್ಚರ್ ಹಾಗೂ ಕಾರ್ತಿಕ್ ತ್ಯಾಗಿ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ರೋಹಿತ್ ಪಡೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡದಲ್ಲಿದ್ದ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ.

ಮುಂಬೈ ಇಂಡಿಯನ್ಸ್‌: ರೋಹಿತ್ಶರ್ಮಾ(ನಾಯಕ), ಕ್ವಿಂಟನ್ಡಿ ಕಾಕ್‌(ವಿ.ಕೀ), ಸೂರ್ಯಕುಮಾರ್ಯಾದವ್‌, ಇಶಾನ್ ಕಿಶನ್, ಕೀರನ್ಪೊಲಾರ್ಡ್‌, ಹಾರ್ದಿಕ್ಪಾಂಡ್ಯ, ಕೃನಾಲ್ಪಾಂಡ್ಯ, ಜೇಮ್ಸ್ ಪ್ಯಾಟಿಸನ್, ರಾಹುಲ್ಚಹರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ಬೌಲ್ಟ್‌.

ಇತ್ತ ರಾಜಸ್ಥಾನ್ ತಂಡದಲ್ಲಿ 3 ಪ್ರಮುಖ ಬದಲಾವಣೆ ಮಾಡಲಾಗಿದೆ. ಭಾರತ ಅಂಡರ್-19 ತಂಡದ ಆಟಗಾರ ಕಾರ್ತಿಕ್ ತ್ಯಾಗಿ ಆರ್​ಆರ್​ ತಂಡದ ಮೂಲಕ ಇಂದು ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಹಾಗೂ ಅಂಕಿತ್ ರಜಪೂತ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಹುಲ್ ತೇವಾಟಿಯಾ, ಮಾಹಿಪಾಲ್ ಲಮ್ರೋರ್, ಶ್ರೇಯಸ್ ಗೋಪಾಲ್, ಟಾಮ್ ಕುರ್ರನ್, ಜೋಫ್ರಾ ಆರ್ಚರ್, ಅಂಕಿತ್ ರಜಪೂತ್, ಕಾರ್ತಿಕ್ ತ್ಯಾಗಿ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಹುತೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು ತಂಡಕ್ಕೆ ನೆರವಾಗುತ್ತಿದ್ದಾರೆ. ಆರಂಭಿಕ ಬ್ಯಾಟ್ಸ್​ಮನ್​ ಕ್ವಿಂಟನ್ ಡಿಕಾಕ್ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಫಾರ್ಮ್​ ಕಂಡುಕೊಂಡಿದ್ದಾರೆ. ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಕೀರೊನ್ ಪೊಲಾರ್ಡ್​ ಹಾಗೂ ಪಾಂಡ್ಯ ಬ್ರದರ್ಸ್​ ಸಖತ್ ಆಗಿ ನಿರ್ವಹಿಸುತ್ತಿದ್ದಾರೆ.

ಇತ್ತ ಅನುಭವಿ ಜೋಸ್ ಬಟ್ಲರ್ ಹಾಗೂ ನಾಯಕ ಸ್ಟೀವ್ ಸ್ಮಿತ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದಿರುವುದು ಆರ್​ಆರ್ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೂಡ ಬೇಗನೆ ಔಟ್ ಆಗಿದ್ದರು. ಹೀಗಾಗಿ ಆರ್​ಆರ್​ ತಂಡದ ಬ್ಯಾಟಿಂಗ್​ ಲೈನ್​ಅಪ್​ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 10 ಹಾಗೂ ರಾಜಸ್ಥಾನ್ ರಾಯಲ್ಸ್ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಮಬಲದಿಂದ ಕೂಡಿದೆ.
Published by: Vinay Bhat
First published: October 6, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories