IPL 2020, MI vs RR: ಪಾಂಡ್ಯ ಪವರ್: ರಾಜಸ್ಥಾನ್​ಗೆ 196 ರನ್​ಗಳ ಟಾರ್ಗೆಟ್

Rajasthan Royals vs Mumbai Indians: ಐಪಿಎಲ್‌ನಲ್ಲಿ ಇದುವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ 11 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ 10 ರಲ್ಲಿ ವಿಜಯ ಸಾಧಿಸಿದೆ.

ಆರ್​ಆರ್

ಆರ್​ಆರ್

 • Share this:
  ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸುತ್ತಿದೆ. ಟಾಸ್ ಗೆದ್ದ ಮುಂಬೈ ಹಂಗಾಮಿ ನಾಯಕ ಕೀರನ್ ಪೊಲಾರ್ಡ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಈ ಬಾರಿ ಕ್ವಿಂಟನ್ ಡಿ ಕಾಕ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ವೈಯುಕ್ತಿಕ 6 ರನ್​ಗಳಿಸಿದ್ದ ವೇಳೆ ಡಿಕಾಕ್  ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು.

  ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅದರೊಂದಿಗೆ ಒನ್​ಡೌನ್​ನಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಆರಂಭದಿಂದಲೇ ಅಬ್ಬರಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತ 59 ಕ್ಕೆ ಬಂದು ನಿಂತಿತು.

  ಪವರ್​ಪ್ಲೇ ಬಳಿಕ ಉತ್ತಮ ಜೊತೆಯಾಟವಾಡಿದ ಕಿಶನ್-ಸೂರ್ಯ 10 ಓವರ್​ನಲ್ಲಿ ತಂಡದ ಮೊತ್ತವನ್ನು 89ಕ್ಕೇರಿಸಿದರು. ಆದರೆ ಕಾರ್ತಿಕ್ ತ್ಯಾಗಿ ಎಸೆದ 11ನೇ ಓವರ್​ನಲ್ಲಿ ಜೋಫ್ರಾ ಆರ್ಚರ್ ಹಿಡಿದ ಅದ್ಭುತ ಕ್ಯಾಚ್​​ಗೆ ಇಶಾನ್ ಕಿಶನ್ (37) ತಮ್ಮ ಇನಿಂಗ್ಸ್​ ಅಂತ್ಯಗೊಳಿಸಲೇಬೇಕಾಯಿತು. ಇದರ ಬೆನ್ನಲ್ಲೇ ಶ್ರೇಯಸ್ ಗೋಪಾಲ್​ಗೆ ವಿಕೆಟ್ ಒಪ್ಪಿಸಿ ಸೂರ್ಯಕುಮಾರ್ ಯಾದವ್ (40) ಹೊರ ನಡೆದರು. ಬಳಿಕ ಬಂದ ಪೊಲಾರ್ಡ್​ ಒಂದು ಸಿಕ್ಸರ್ ಸಿಡಿಸಿ ಶ್ರೇಯಸ್ ಗೋಪಾಲ್​ ಎಸೆತದಲ್ಲಿ ಕ್ಲೀನ್ ಬೌಲ್ಡ್​ ಆಗಿ ನಿರ್ಗಮಿಸಿದರು. ಈ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರುಗಳು ಮೇಲುಗೈ ಸಾಧಿಸಿದ್ದರು.

  ಆದರೆ ಅಂತಿಮ ಓವರ್​ಗಳಲ್ಲಿ ಕಂಬ್ಯಾಕ್ ಮಾಡಿದ ಮುಂಬೈ ಬ್ಯಾಟ್ಸ್​ಮನ್​ಗಳಾದ ಸೌರಭ್ ತಿವಾರಿ ಹಾಗೂ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ಅಂಕಿತ್ ರಜಪೂತ್ ಎಸೆದ 18ನೇ ಓವರ್​ನಲ್ಲಿ ಪಾಂಡ್ಯ 4​ ಸಿಕ್ಸರ್​ನೊಂದಿಗೆ ಒಟ್ಟು 27 ರನ್ ಕಲೆಹಾಕಿದರು. ಜೋಫ್ರಾ ಆರ್ಚರ್ ಅವರ 19ನೇ ಓವರ್​ನ ಮೊದಲ ಎಸೆತದಲ್ಲೇ ಸೌರಭ್ ತಿವಾರಿ (34) ಕ್ಯಾಚ್ ನೀಡಿ ಹೊರ ನಡೆದರು. ಈ ಓವರ್​ನಲ್ಲಿ ಆರ್ಚರ್ ನೀಡಿದ್ದು ಕೇವಲ 3 ರನ್ ಮಾತ್ರ.

  ಅಂತಿಮ ಓವರ್​ನಲ್ಲಿ ಮತ್ತೆ ಅಬ್ಬರಿಸಿದ ಪಾಂಡ್ಯ ಸಿಕ್ಸ್, ಫೋರ್, ಫೋರ್​, ಸಿಕ್ಸ್​ ಮೂಲಕ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಕಾರ್ತಿಕ್ ತ್ಯಾಗಿ ಎಸೆದ ಕೊನೆಯ ಓವರ್​ನಲ್ಲಿ 27 ರನ್​ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 195 ಕ್ಕೆ ತಂದು ನಿಲ್ಲಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಶ್ರೇಯಸ್ ಗೋಪಾಲ್ 4 ಓವರ್​ನಲ್ಲಿ 30 ರನ್ ನೀಡಿ 2 ವಿಕೆಟ್ ಕಬಳಿಸಿ ಗಮನ ಸೆಳೆದರು.  ಇಂದಿನ ಪಂದ್ಯವು ರಾಜಸ್ಥಾನ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲ್ಲುವ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದೆ. ಹಾಗೆಯೇ ಮುಂಬೈ ಇಂಡಿಯನ್ಸ್​ ಇಂದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್​ ಅನ್ನು ಖಚಿತಪಡಿಸಿಕೊಳ್ಳಲಿದೆ.


  ಐಪಿಎಲ್‌ನಲ್ಲಿ ಇದುವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ 11 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ 10 ರಲ್ಲಿ ವಿಜಯ ಸಾಧಿಸಿದೆ.

  ಈ ಸೀಸನ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ್ ವಿರುದ್ದ 20 ಓವರ್‌ಗಳಲ್ಲಿ 193 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಸ್ಮಿತ್ ಪಡೆ ಕೇವಲ 18.1 ಓವರ್‌ಗಳಲ್ಲಿ 136 ರನ್​ಗಳಿಗೆ ಆಲೌಟ್ ಆಗುವ ಮೂಲಕ 57 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ರೋಹಿತ್ ಪಡೆ ಕಣಕ್ಕಿಳಿಯಲಿದೆ.

  ಅತ್ತ ರಾಜಸ್ಥಾನ್ ರಾಯಲ್ಸ್ ಕಳೆದ ಪಂದ್ಯದ ಸೋಲಿನ ಸೇಡನ್ನು ತೀರಿಸುವ ತವಕದಲ್ಲಿದ್ದು, ಅದರೊಂದಿಗೆ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸುವ ಇರಾದೆಯಲ್ಲಿದೆ.
  Published by:zahir
  First published: