KKR vs CSK: ಕೆಕೆಆರ್ ಭರ್ಜರಿ ಬೌಲಿಂಗ್ ಮುಂದೆ ಮಂಡಿಯೂರಿದ ಸಿಎಸ್​ಕೆ

IPL 2020, Chennai vs Kolkata : ಉಭಯ ತಂಡಗಳು ಐಪಿಎಲ್​ನಲ್ಲಿ 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 13 ಬಾರಿ ವಿಜಯ ಸಾಧಿಸಿದ್ರೆ, ಕೊಲ್ಕತ್ತಾ ನೈಟ್ ರೈಡರ್ಸ್ 7 ಬಾರಿ ಮಾತ್ರ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

KKR

KKR

  • Share this:
    ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 21ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ  10 ರನ್​ಗಳ ಭರ್ಜರಿ ಜಯ ಸಾಧಿಸಿದೆ. 168 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಸಿಎಸ್​ಕೆ ಬಾಟ್ಸ್​ಮನ್​ಗಳು ಕೆಕೆಆರ್ ಬೌಲರುಗಳ ಭರ್ಜರಿ ಬೌಲಿಂಗ್ ಮುಂದೆ ಮಂಡಿಯೂರಿದರು. ಈ ಮೂಲಕ ಚೆನ್ನೈ ಟೂರ್ನಿಯ ನಾಲ್ಕನೇ ಸೋಲನುಭವಿಸುವಂತಾಯಿತು. ಇದಕ್ಕೂ ಮುನ್ನ ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿಯ ಆಕರ್ಷಕ ಅರ್ಧಶತಕದ ನೆರವಿನಿಂದ ಕೆಕೆಆರ್ ನಿಗದಿತ 20 ಓವರ್​ನಲ್ಲಿ  167 ರನ್ ಪೇರಿಸಿತು.

    ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಸಿಎಸ್​ಕೆಗೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ ಸ್ಪೋಟಕ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ಕೆಕೆಆರ್ ಬೌಲರುಗಳ ವಿರುದ್ದ ತಿರುಗಿಬಿದ್ದ ಸಿಎಸ್​ಕೆ ಓಪನರ್​ಗಳು 3 ಓವರ್​ ಮುಕ್ತಾಯದ ವೇಳೆಗೆ 25 ರನ್ ಬಾರಿಸಿದ್ದರು. ಆದರೆ 4ನೇ ಓವರ್​ನಲ್ಲಿ ಶಿವಂ ಮಾವಿ ಕೊಲ್ಕತ್ತಾಗೆ ಮೊದಲ ಯಶಸ್ಸು ತಂದುಕೊಟ್ಟರು. 10 ಎಸೆತಗಳಲ್ಲಿ 17 ರನ್ ಬಾರಿಸಿದ್ದ ಫಾಫ್ ಡುಪ್ಲೆಸಿಸ್ ಕೀಪರ್ ದಿನೇಶ್ ಕಾರ್ತಿಕ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

    ಇನ್ನೊಂದೆಡೆ ಬಿರುಸಿನ ಆಟ ಪ್ರದರ್ಶಿಸಿದ ಶೇನ್ ವಾಟ್ಸನ್ 1 ಸಿಕ್ಸ್ ಹಾಗೂ 3 ಬೌಂಡರಿಗಳೊಂದಿಗೆ ಪವರ್ ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 50 ರ ಗಡಿದಾಟಿಸಿದರು. 6 ಓವರ್​ ಬಳಿಕ ಅಬ್ಬರಿಸಲಾರಂಭಿಸಿದ ವಾಟ್ಸನ್ 39 ಎಸೆತಗಳಲ್ಲಿ ಐಪಿಎಲ್​ನಲ್ಲಿ 21ನೇ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ 30 ರನ್ ಬಾರಿಸಿದ ಅಂಬಾಟಿ ರಾಯುಡು ವಿಕೆಟ್ ಒಪ್ಪಿಸಿದರು.

    ಇನ್ನು ಅರ್ಧಶತಕದ ಬೆನ್ನಲ್ಲೇ ಶೇನ್ ವಾಟ್ಸನ್ ಸುನೀಲ್ ನರೈನ್​ಗೆ ವಿಕೆಟ್ ನೀಡಿ ಹೊರನಡೆದರು. ಕೊನೆಯ ಐದು ಓವರ್​ಗಳಲ್ಲಿ ಸಿಎಸ್​ಕೆಗೆ ಗೆಲ್ಲಲು 58 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭದಲ್ಲಿ ಜೊತೆಗೂಡಿದ ಸ್ಯಾಮ್ ಕರ್ರನ್ ಹಾಗೂ ಧೋನಿ ರನ್ ಗಳಿಕೆ ವೇಗ ಹೆಚ್ಚಿಸಿದರು. ಆದರೆ 11 ರನ್ ಗಳಿಸಿದ್ದ ಸಿಎಸ್​ಕೆ ನಾಯಕನನ್ನು ವರಣ್ ಚಕ್ರವರ್ತಿ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಹೊರಗಟ್ಟಿದರು. ಇದರ ಬೆನ್ನಲ್ಲೇ ಸ್ಯಾಮ್ ಕರ್ರನ್ (17) ಕೂಡ ಆಂಡ್ರೆ ರಸೆಲ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

    ಕೊನೆಯ ಎರಡು ಓವರ್​ಗಳಲ್ಲಿ 36 ರನ್​ಗಳ ಗುರಿ ಪಡೆದ ಸಿಎಸ್​ಕೆ ತಂಡವು 19ನೇ ಓವರ್​ನಲ್ಲಿ 10 ರನ್​ ಗಳಿಸಿತು. ಅದರಂತೆ ಕೊನೆಯ ಓವರ್​ನಲ್ಲಿ ರವೀಂದ್ರ ಜಡೇಜಾ ಹಾಗೂ ಕೇದರ್ ಜಾಧವ್ ಮುಂದೆ 6 ಎಸೆತಗಳಲ್ಲಿ 26 ರನ್​ಗಳ ಗುರಿಯಿತ್ತು. ಆದರೆ ಆಂಡ್ರೆ ರಸೆಲ್ ಎಸೆದ ಅಂತಿಮ ಓವರ್​ನಲ್ಲಿ ಮೂಡಿ ಬಂದಿದ್ದು ಕೇವಲ 15 ರನ್​ಗಳು ಮಾತ್ರ. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ 10 ರನ್​ಗಳ ವಿಜಯ ತನ್ನದಾಗಿಸಿಕೊಂಡಿತು.

    ಕೆಕೆಆರ್ ಪರ 4 ಓವರ್​ಗಳಲ್ಲಿ ಕೇವಲ 25 ರನ್ ನೀಡಿ ಪ್ಯಾಟ್ ಕಮಿನ್ಸ್ ಮಿಂಚಿದ್ರೆ, ಸ್ಪಿನ್ನರ್​ಗಳಾದ ಸುನೀಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಉರುಳಿಸಿ ಸಿಎಸ್​ಕೆ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಿದರು.

    ಇದಕ್ಕೂ ಮುನ್ನ  ಟಾಸ್ ಗೆದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ  ಶುಭ್​ಮನ್ ಗಿಲ್ ಜೊತೆ ಸುನೀಲ್ ನರೈನ್ ಬದಲಿಗೆ ರಾಹುಲ್ ತ್ರಿಪಾಠಿ ಆರಂಭಿಕರಾಗಿ ಕಣಕ್ಕಿಳಿದರು.

    ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಆರಂಭಿಸಿದ ಕೆಕೆಆರ್ ಜೋಡಿ ಮೊದಲ ಮೂರು ಓವರ್​ನಲ್ಲಿ 25 ರನ್ ಪೇರಿಸಿತು. ಆದರೆ ಶಾರ್ದುಲ್ ಠಾಕೂರ್ ಎಸೆದ 5ನೇ ಓವರ್​ನಲ್ಲಿ ಶುಭ್​ಮನ್ ಗಿಲ್ (11) ಕೀಪರ್​ಗೆ ಕ್ಯಾಚ್ ನೀಡಿ ಹೊರ ನಡೆದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ತ್ರಿಪಾಠಿ, ನಿತೇಶ್ ರಾಣಾ ಜೊತೆಗೂಡಿ ಪವರ್​ ಪ್ಲೇ ಮುಕ್ತಾಯಕ್ಕೆ ತಂಡದ ಮೊತ್ತವನ್ನು 52 ಕ್ಕೆ ತಂದು ನಿಲ್ಲಿಸಿದರು.

    ತಂಡದ ಮೊತ್ತ 70 ಆಗಿದ್ದ ವೇಳೆ ಸ್ಯಾಮ್ ಕರನ್ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಮುಂದಾದ ನಿತೇಶ್ ರಾಣಾ (9) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ 31 ಎಸೆತಗಳಲ್ಲಿ ರಾಹುಲ್ ತ್ರಿಪಾಠಿ 2 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅರ್ಧಶತಕ ಬಾರಿಸಿ ಮಿಂಚಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸುನೀಲ್ ನರೈನ್ ಒಂದು ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ ಅಬ್ಬರಿಸಿದರು. ಆದರೆ 17 ರನ್​ಗಳಿಸಿದ್ದ ವೇಳೆ ಬೌಂಡರಿ ಲೈನ್​ನಲ್ಲಿ ರವೀಂದ್ರ ಜಡೇಜಾ ಹಿಡಿದ ಅದ್ಭುತ ಕ್ಯಾಚ್​ನಿಂದ ಹೊರ ನಡೆಯಬೇಕಾಯಿತು.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ್ದ ಇಯಾನ್ ಮೋರ್ಗನ್ ಈ ಬಾರಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಎಡವಿದರು. 10 ಎಸೆತಗಳನ್ನು ಎದುರಿಸಿದ್ದ ಮೋರ್ಗನ್ ಕೇವಲ 7 ರನ್​ಗಳಿಸಿ ಸ್ಯಾಮ್ ಕರನ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

    ಮತ್ತೊಂದೆಡೆ ಚೆನ್ನೈ ಬೌಲರುಗಳ ವಿರುದ್ಧ ಸೂಪರ್ ಆಟ ಪ್ರದರ್ಶಿಸಿದ ತ್ರಿಪಾಠಿಯ ನೆರವಿನಿಂದ ಕೆಕೆಆರ್ 15 ಓವರ್​ಗಳಲ್ಲಿ 128 ರನ್​ಗಳಿಸಿತು. ಆದರೆ 16ನೇ ಓವರ್​ನ 2ನೇ ಎಸೆತದಲ್ಲಿ ಆಂಡ್ರೆ ರಸೆಲ್ (2) ಧೋನಿಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಆದರೆ ತ್ರಿಪಾಠಿ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರೆಸಿದ್ದರು. 3 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 51 ಎಸೆತಗಳಲ್ಲಿ 81 ರನ್​​ ಸಿಡಿಸಿದರು. ಆದರೆ ಬ್ರಾವೊ ಎಸೆದ 17ನೇ ಓವರ್​ನಲ್ಲಿ​ ವಿಕೆಟ್ ಒಪ್ಪಿಸಿದರು.

    ಕೊನೆಯ ಮೂರು ಓವರ್​ಗಳಿರುವಾಗ ನಾಯಕನ ಜೊತೆಗೂಡಿದ ಪ್ಯಾಟ್ ಕಮಿನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇನ್ನೊಂದೆಡೆ 19ನೇ ಓವರ್​ನಲ್ಲಿ ಕಾರ್ತಿಕ್ 12 ರನ್​ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಅಂತಿಮ ಓವರ್​ನಲ್ಲಿ  2 ವಿಕೆಟ್ ಉರುಳಿಸಿದ ಡ್ವೇನ್ ಬ್ರಾವೊ ಕೇವಲ 5 ರನ್ ನೀಡುವ ಮೂಲಕ ಕೆಕೆಆರ್ ಮೊತ್ತವನ್ನು 167 ಕ್ಕೆ ನಿಯಂತ್ರಿಸಿದರು. CSK ಪರ ಡ್ವೇನ್ ಬ್ರಾವೊ 4 ಓವರ್​ನಲ್ಲಿ 37 ರನ್ ನೀಡಿದ 3 ವಿಕೆಟ್ ಉರುಳಿಸಿ ಮಿಂಚಿದರು.

    168 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್​ಗಳಿಸಲಷ್ಟೇ ಶಕ್ತರಾದರು. 10 ರನ್​  ಭರ್ಜರಿ ಜಯದೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.



    ಈPOINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
    Published by:zahir
    First published: