IPL 2020, KKR vs CSK: ಸಿಎಸ್​ಕೆ 168 ರನ್​ಗಳ ಟಾರ್ಗೆಟ್ ನೀಡಿದ ಕೆಕೆಆರ್

IPL 2020, Chennai vs Kolkata: ಉಭಯ ತಂಡಗಳು ಐಪಿಎಲ್​ನಲ್ಲಿ 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 13 ಬಾರಿ ವಿಜಯ ಸಾಧಿಸಿದ್ರೆ, ಕೊಲ್ಕತ್ತಾ ನೈಟ್ ರೈಡರ್ಸ್ 7 ಬಾರಿ ಮಾತ್ರ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

csk

csk

  • Share this:
    IPLನಲ್ಲಿ ನಡೆಯುತ್ತಿರುವ  21ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಈ ಬಾರಿ ಶುಭ್​ಮನ್ ಗಿಲ್ ಜೊತೆ ಸುನೀಲ್ ನರೈನ್ ಬದಲಿಗೆ ರಾಹುಲ್ ತ್ರಿಪಾಠಿ ಆರಂಭಿಕರಾಗಿ ಕಣಕ್ಕಿಳಿದರು.

    ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಆರಂಭಿಸಿದ ಕೆಕೆಆರ್ ಜೋಡಿ ಮೊದಲ ಮೂರು ಓವರ್​ನಲ್ಲಿ 25 ರನ್ ಪೇರಿಸಿತು. ಆದರೆ ಶಾರ್ದುಲ್ ಠಾಕೂರ್ ಎಸೆದ 5ನೇ ಓವರ್​ನಲ್ಲಿ ಶುಭ್​ಮನ್ ಗಿಲ್ (11) ಕೀಪರ್​ಗೆ ಕ್ಯಾಚ್ ನೀಡಿ ಹೊರ ನಡೆದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ತ್ರಿಪಾಠಿ, ನಿತೇಶ್ ರಾಣಾ ಜೊತೆಗೂಡಿ ಪವರ್​ ಪ್ಲೇ ಮುಕ್ತಾಯಕ್ಕೆ ತಂಡದ ಮೊತ್ತವನ್ನು 52 ಕ್ಕೆ ತಂದು ನಿಲ್ಲಿಸಿದರು.

    ತಂಡದ ಮೊತ್ತ 70 ಆಗಿದ್ದ ವೇಳೆ ಸ್ಯಾಮ್ ಕರನ್ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಮುಂದಾದ ನಿತೇಶ್ ರಾಣಾ (9) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ 31 ಎಸೆತಗಳಲ್ಲಿ ರಾಹುಲ್ ತ್ರಿಪಾಠಿ 2 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅರ್ಧಶತಕ ಬಾರಿಸಿ ಮಿಂಚಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸುನೀಲ್ ನರೈನ್ ಒಂದು ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ ಅಬ್ಬರಿಸಿದರು. ಆದರೆ 17 ರನ್​ಗಳಿಸಿದ್ದ ವೇಳೆ ಬೌಂಡರಿ ಲೈನ್​ನಲ್ಲಿ ರವೀಂದ್ರ ಜಡೇಜಾ ಹಿಡಿದ ಅದ್ಭುತ ಕ್ಯಾಚ್​ನಿಂದ ಹೊರ ನಡೆಯಬೇಕಾಯಿತು.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ್ದ ಇಯಾನ್ ಮೋರ್ಗನ್ ಈ ಬಾರಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಎಡವಿದರು. 10 ಎಸೆತಗಳನ್ನು ಎದುರಿಸಿದ್ದ ಮೋರ್ಗನ್ ಕೇವಲ 7 ರನ್​ಗಳಿಸಿ ಸ್ಯಾಮ್ ಕರನ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

    ಮತ್ತೊಂದೆಡೆ ಚೆನ್ನೈ ಬೌಲರುಗಳ ವಿರುದ್ಧ ಸೂಪರ್ ಆಟ ಪ್ರದರ್ಶಿಸಿದ ತ್ರಿಪಾಠಿಯ ನೆರವಿನಿಂದ ಕೆಕೆಆರ್ 15 ಓವರ್​ಗಳಲ್ಲಿ 128 ರನ್​ಗಳಿಸಿತು. ಆದರೆ 16ನೇ ಓವರ್​ನ 2ನೇ ಎಸೆತದಲ್ಲಿ ಆಂಡ್ರೆ ರಸೆಲ್ (2) ಧೋನಿಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಆದರೆ ತ್ರಿಪಾಠಿ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರೆಸಿದ್ದರು. 3 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 51 ಎಸೆತಗಳಲ್ಲಿ 81 ರನ್​​ ಸಿಡಿಸಿದರು. ಆದರೆ ಬ್ರಾವೊ ಎಸೆದ 17ನೇ ಓವರ್​ನಲ್ಲಿ​ ವಿಕೆಟ್ ಒಪ್ಪಿಸಿದರು.

    ಕೊನೆಯ ಮೂರು ಓವರ್​ಗಳಿರುವಾಗ ನಾಯಕನ ಜೊತೆಗೂಡಿದ ಪ್ಯಾಟ್ ಕಮಿನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇನ್ನೊಂದೆಡೆ 19ನೇ ಓವರ್​ನಲ್ಲಿ ಕಾರ್ತಿಕ್ 12 ರನ್​ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಅಂತಿಮ ಓವರ್​ನಲ್ಲಿ  2 ವಿಕೆಟ್ ಉರುಳಿಸಿದ ಡ್ವೇನ್ ಬ್ರಾವೊ ಕೇವಲ 5 ರನ್ ನೀಡುವ ಮೂಲಕ ಕೆಕೆಆರ್ ಮೊತ್ತವನ್ನು 167 ಕ್ಕೆ ನಿಯಂತ್ರಿಸಿದರು. CSK ಪರ ಡ್ವೇನ್ ಬ್ರಾವೊ 4 ಓವರ್​ನಲ್ಲಿ 37 ರನ್ ನೀಡಿದ 3 ವಿಕೆಟ್ ಉರುಳಿಸಿ ಮಿಂಚಿದರು.

    ಸ್ಕೋರ್: 167/10

    ಓವರ್: 20







    ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಸಿಎಸ್​ಕೆ ತಂಡವು, ಇಂದು ಕೂಡ ಕೆಕೆಆರ್ ವಿರುದ್ಧ ಸವಾರಿ ಮಾಡುವ ವಿಶ್ವಾಸದಲ್ಲಿದೆ. ಮತ್ತೊಂದಡೆ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 228 ರನ್​ಗಳನ್ನು ಭರ್ಜರಿಯಾಗಿ ಬೆನ್ನತ್ತಿ ಕೊನೆಯಲ್ಲಿ ಎಡವಿ 18 ರನ್​ಗಳಿಂದ ಸೋಲೊಪ್ಪಿಕೊಂಡ ಕೆಕೆಆರ್​ ಕೂಡ ಆತ್ಮ ವಿಶ್ವಾಸದಿಂದ ಪುಟಿದೇಳುತ್ತಿದೆ. ಇದೇ ಕಾರಣದಿಂದ ಇಂದು ಅಬುಧಾಬಿ ಶೇಖ್ ಝಾಯದ್ ಮೈದಾನದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

    ಆಡಿದ 4 ಪಂದ್ಯಗಳಲ್ಲಿ 2 ಜಯ, 2 ಸೋಲಿನ ಮಿಶ್ರ ಅನುಭವ ಪಡೆದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಇಂದು ಸಿಎಸ್​ಕೆ ವಿರುದ್ಧ ಜಯಗಳಿಸುವ ಮೂಲಕ ಟಾಪ್ 4 ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿದೆ. ಆದರೆ 5ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್​ ಇಂದು ಕೂಡ ಸೂಪರ್ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ಇರಾದೆಯಲ್ಲಿದೆ.

    ಉಭಯ ತಂಡಗಳು ಬ್ಯಾಟಿಂಗ್​ನಲ್ಲಿ ಬಲಿಷ್ಠವಾಗಿದ್ದು, ಆದರೆ ಬೌಲರುಗಳು ಕೈಕೊಡುತ್ತಿರುವುದೇ ನಾಯಕರುಗಳ ಚಿಂತೆ. ಹಾಗೆಯೇ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿಯಾಗಿ ಸಿಎಸ್​ಕೆ ಆರಂಭಿಕರು ಬ್ಯಾಟ್ ಬೀಸಿದ್ದು, ಧೋನಿಯ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಅಲ್ಲದೆ ತಂಡದಲ್ಲಿ ಆಲ್​ರೌಂಡರ್​ಗಳಾಗಿ ಸ್ಯಾಮ್ ಕರ್ರನ್ ಹಾಗೂ ಡ್ವೇನ್ ಬ್ರಾವೊ ಇರುವುದು ಕೂಡ ಸಿಎಸ್​ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಶಕ್ತಿಯನ್ನು ಹೆಚ್ಚಿಸಿದೆ.

    ಮತ್ತೊಂದಡೆ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರ ಸತತ ವೈಫಲ್ಯವು ತಂಡದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದ್ದು, ಅದರೊಂದಿಗೆ ಆರಂಭಿಕ ಆಟಗಾರನಾಗಿ ಸುನೀಲ್ ನರೈನ್ ಕೈಕೊಡುತ್ತಿದ್ದಾರೆ. ಈ ತಪ್ಪನ್ನು ಸರಿಪಡಿಸಿಕೊಳ್ಳುವ ಮೂಲಕ ಮತ್ತೆ ಅಬ್ಬರಿಸುವ ವಿಶ್ವಾಸದಲ್ಲಿದೆ ಕೆಕೆಆರ್.

    ಈPOINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
    Published by:zahir
    First published: