IPL

  • associate partner

KXIP vs RCB: ಆರ್​ಸಿಬಿ ವಿರುದ್ಧ ಆರ್ಭಿಟಿಸಿದ ರಾಹುಲ್: ಪಂಜಾಬ್​ಗೆ ಭರ್ಜರಿ ಜಯ

Dream11 IPL 2020: ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡವು ಭರ್ಜರಿ ವಿಜಯ ಸಾಧಿಸಿದೆ.

news18-kannada
Updated:September 24, 2020, 11:14 PM IST
KXIP vs RCB: ಆರ್​ಸಿಬಿ ವಿರುದ್ಧ ಆರ್ಭಿಟಿಸಿದ ರಾಹುಲ್: ಪಂಜಾಬ್​ಗೆ ಭರ್ಜರಿ ಜಯ
KL Rahul
  • Share this:
ದುಬೈನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್​ನ 6ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 97 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡವು ನಾಯಕನ ಅದ್ಭುತ ಶತಕದ ನೆರವಿನಿಂದ 206 ರನ್​ ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನತ್ತುವಲ್ಲಿ ವಿಫಲವಾದ ವಿರಾಟ್ ಕೊಹ್ಲಿ ಹೀನಾಯ ಸೋಲನುಭವಿಸಿದೆ.

207 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಮಿಂಚಿದ್ದ ದೇವದತ್​ ಪಡಿಕ್ಕಲ್ ಕೇವಲ 1 ರನ್​ಗಳಿಸಿ ಮೊದಲ ಓವರ್​ನಲ್ಲೇ ಕಾಟ್ರೆಲ್​ಗೆ ವಿಕೆಟ್ ಒಪ್ಪಿಸಿದರು.

ಇದರ ಬೆನ್ನಲ್ಲೇ 2ನೇ ಓವರ್​ನಲ್ಲಿ ಶಮಿ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಜೋಶ್ ಫಿಲಿಪ್ ಗೋಲ್ಡನ್ ಡಕ್​ನೊಂದಿಗೆ ಹೊರನಡೆದರು. 4ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ನಾಯಕ ವಿರಾಟ್ ಕೊಹ್ಲಿಯನ್ನು ಕೇವಲ 1 ರನ್​ಗೆ ಔಟ್ ಮಾಡುವ ಮೂಲಕ ಕಾಟ್ರೆಲ್ ಸೆಲ್ಯೂಟ್ ಹೊಡೆದು ಸಂಭ್ರಮಿಸಿದರು.

ಮೂರು ಬೌಂಡರಿ ಬಾರಿ ಅಪಾಯಕಾರಿಯಾಗಲಿದ್ದ ಆರೋನ್ ಫಿಂಚ್​ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಪಂಜಾಬ್​ಗೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಮತ್ತೊಂದೆಡೆ ಭರವಸೆ ಮೂಡಿಸಿದ್ದ ಎಬಿ ಡಿವಿಲಿಯರ್ಸ್ 18 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿಯೊಂದಿಗೆ 28 ರನ್ ಬಾರಿಸಿ ಮುರುಗನ್ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದರು.

ತಂಡದ ಮೊತ್ತ 83 ಇದ್ದಾಗ ಗ್ಲೆನ್ ಮ್ಯಾಕ್ಸ್​ವೆಲ್ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಶಿವಂ ದುಬೆ(12) ನಿರ್ಗಮಿಸಿದರು. ಇನ್ನು ಬೆಂದ ಬೆನ್ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಉಮೇಶ್ ಯಾದವ್ ಕೂಡ ಮರಳಿದರು. ಆರ್​ಸಿಬಿ ಮೊತ್ತವನ್ನು 100ರ ಗಡಿದಾಟಿಸಿದ ವಾಷಿಂಗ್ಟನ್ ಸುಂದರ್ (30), ಬಿಷ್ಣೋಯ್ ಎಸೆತದಲ್ಲಿ ಕ್ಯಾಚ್ ನೀಡಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. 17ನೇ ಓವರ್​ನಲ್ಲಿ ಕೊನೆಯ ವಿಕೆಟ್ ಉರುಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 109 ರನ್​ಗಳಿಗೆ ಕಟ್ಟಿಹಾಕಿದರು. ಇದರೊಂದಿಗೆ ಕಿಂಗ್ಸ್​ ಇಲೆವೆನ್ ಪಂಜಾಬ್ 97 ರನ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

ಕಿಂಗ್ಸ್ ಇಲೆವೆನ್ ಪರ ಉತ್ತಮ ದಾಳಿ ಸಂಘಟಿಸಿದ ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಮುರುಗನ್ ಅಶ್ವಿನ್ ತಲಾ 3 ವಿಕೆಟ್ ಉರುಳಿಸಿದ್ರೆ, ಕಾಟ್ರೆಲ್ 2 ಹಾಗೂ ಶಮಿ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಆದರೆ ನಾಯಕನ ನಿರೀಕ್ಷೆಯಂತೆ ಆರ್​ಸಿಬಿ ಬೌಲರುಗಳು ಆರಂಭಿಕ ಯಶಸ್ಸು ಸಾಧಿಸಲಿಲ್ಲ.ಮಯಾಂಕ್ ಅಗರ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್, ಉಮೇಶ್ ಯಾದವ್​ ಅವರ ಮೊದಲ ಓವರ್​ನಲ್ಲಿ 8 ರನ್ ಕಲೆಹಾಕಿದರು. ಡೇಲ್ ಸ್ಟೇನ್ ಎಸೆದ 2ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ಐಪಿಎಲ್​ನಲ್ಲಿ 2 ಸಾವಿರ ರನ್ ಪೂರೈಸಿದ ಸಾಧನೆ ಮೆರೆದರು. 60ನೇ ಇನಿಂಗ್ಸ್​ ಮೂಲಕ ಈ ಸಾಧನೆ ಮಾಡಿ ಐಪಿಎಲ್​ನಲ್ಲಿ ಅತೀ ವೇಗದಲ್ಲಿ 2 ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟ್ಸ್​ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಮಾಸ್ಟರ್ ಬ್ಲಾಸ್ಟರ್ 63 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರು.

ಆರ್​ಸಿಬಿ ಬೌಲರುಗಳ ವಿರುದ್ಧ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ರಾಹುಲ್-ಮಯಾಂಕ್ ಪವರ್​ಪ್ಲೇನಲ್ಲಿ ಅರ್ಧಶತಕದ ಜೊತೆಯಾಟದೊಂದಿಗೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಚಹಾಲ್ ಅವರ 7ನೇ ಓವರ್​ನಲ್ಲಿ ಚೆಂಡನ್ನು ಗುರುತಿಸುವಲ್ಲಿ ಎಡವಿದ ಮಯಾಂಕ್ (26) ಕ್ಲೀನ್ ಬೌಲ್ಡ್ ಆಗುವ ಮೂಲಕ ಹೊರ ನಡೆದರು.

ನಂತರ ಜೊತೆಗೂಡಿ ಪೂರನ್ ಹಾಗೂ ರಾಹುಲ್ ಎಚ್ಚರಿಕೆಯ ಆಟದೊಂದಿಗೆ ರನ್ ಕದಿಯುವಲ್ಲಿ ಹೆಚ್ಚಿನ ಒತ್ತು ನೀಡಿದರು. ಪರಿಣಾಮ ಮೊದಲ 10 ಓವರ್​ಗಳಲ್ಲಿ ಕಿಂಗ್ಸ್ ಮೊತ್ತವು 90 ಕ್ಕೆ ಬಂದು ನಿಂತಿತು. ಇದರ ಬೆನ್ನಲ್ಲೇ ತಮ್ಮ ಅರ್ಧಶತಕ ಪೂರೈಸಿದ ಪಂಜಾಬ್ ನಾಯಕ ಬ್ಯಾಟ್ ಮೇಲೆಕ್ಕೆತ್ತಿದರು. 36 ಎಸೆತಗಳನ್ನು ಎದುರಿಸಿದ ರಾಹುಲ್ ಈ ವೇಳೆಗೆ 1 ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದ್ದರು. 12 ಓವರ್​ಗಳಲ್ಲಿ 100 ರನ್ ಪೂರೈಸಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಆದರೆ ಶಿವಂ ದುಬೆ ಎಸೆತದಲ್ಲಿ ಎಬಿಡಿಗೆ ಕ್ಯಾಚ್ ನೀಡುವುದರೊಂದಿಗೆ ಪೂರನ್ (17) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಇದರ ಬೆನ್ನಲ್ಲೇ ಸ್ಪೋಟಕ ಬ್ಯಾಟ್ಸ್​ಮನ್ ಗ್ಲೆನ್ ಮ್ಯಾಕ್ಸ್​ವೆಲ್ (5) ಕೂಡ ವಿಕೆಟ್ ಒಪ್ಪಿಸಿ ಹೊರ ನಡೆದರು.

83 ​ ಹಾಗೂ 89 ರನ್​ ಗಳಿಸಿದ್ದ ವೇಳೆ ಕೊಹ್ಲಿ ಬಿಟ್ಟ 2 ಕ್ಯಾಚ್​ನಿಂದ ಜೀವದಾನ ಪಡೆದ ಕೆಎಲ್ ರಾಹುಲ್, ಬಳಿಕ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ಸ್ಟೇನ್ ಅವರ 19ನೇ ಓವರ್​ನಲ್ಲಿ ಮೊದಲ ಎರಡು ಎಸೆತಗಳಲ್ಲಿ ಸಿಕ್ಸ್ ಹಾಗೂ ಫೋರ್​ ಬಾರಿಸಿ  62 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ ಈ ಓವರ್​ನಲ್ಲಿ ಒಟ್ಟು 26 ರನ್ ಕಲೆಹಾಕಿದರು.


ಕೊನೆಯ ಓವರ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ 23 ರನ್​ ಬಾಚಿದ ರಾಹುಲ್ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಕೊನೆಯ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ ಪಂಜಾಬ್ ಮೊತ್ತವನ್ನು 206ಕ್ಕೆ ತಂದು ನಿಲ್ಲಿಸಿದರು.

ನಾಯಕನ ಆಟವಾಡಿದ ಕೆಎಲ್ ರಾಹುಲ್ 69 ಎಸೆತಗಳಲ್ಲಿ 132 ರನ್ ಚಚ್ಚುವ ಮೂಲಕ ಹೊಸ ದಾಖಲೆ ಬರೆದರು. ಈ ಸ್ಪೋಟಕ ಇನಿಂಗ್ಸ್​ನಲ್ಲಿ ರಾಹುಲ್ ಬ್ಯಾಟ್​ನಿಂದ ಸಿಡಿದದ್ದು ಭರ್ಜರಿ 7 ಸಿಕ್ಸರ್​ಗಳು ಹಾಗೂ 14 ಬೌಂಡರಿಗಳು. ಆರ್​ಸಿಬಿ ಪರ 2 ವಿಕೆಟ್ ಪಡೆದ ಶಿವಂ ದುಬೆ ಯಶಸ್ವಿ ಬೌಲರ್ ಎನಿಸಿಕೊಂಡರು. ಇದೀಗ 97 ರನ್​ಗಳ ಭರ್ಜರಿ ಜಯದೊಂದಿಗೆ ಕಿಂಗ್ಸ್​ ಇಲೆವೆನ್ ಪಂಜಾಬ್ ತನ್ನ ಜಯದ ಖಾತೆಯನ್ನು ತೆರೆದಿದೆ.

POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ KXIP vs RCB ಹೈವೋಲ್ಟೇಜ್ ಪಂದ್ಯ
Published by: zahir
First published: September 24, 2020, 9:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading