news18-kannada Updated:October 18, 2020, 9:18 PM IST
ಡಿಕಾಕ್
ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ನ 36ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ಗೆ 177 ರನ್ಗಳ ಟಾರ್ಗೆಟ್ ನೀಡಿದೆ. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅವರ ಆಕರ್ಷಕ ಅರ್ಧಶತಕ, ಕೀರನ್ ಪೊಲಾರ್ಡ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಮುಂಬೈ ಸ್ಪರ್ಧಾತ್ಮಕ ಮೊತ್ತ ಪೇರಿಸುವಂತಾಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಿರೀಕ್ಷಿತ ಮಟ್ಟದ ಆರಂಭ ಒದಗಿಸುವಲ್ಲಿ ಹಿಟ್ಮ್ಯಾನ್ ಎಡವಿದರು.
3ನೇ ಓವರ್ನಲ್ಲಿ ಹರ್ಷದೀಪ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗುವ ಮೂಲಕ ರೋಹಿತ್ ಶರ್ಮಾ (9) ಹೊರ ನಡೆದರು. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್ನೊಂದಿಗೆ ಬಂದ ವೇಗದಲ್ಲೇ ಮರಳಿದರು. ಪವರ್ ಪ್ಲೇನ ಕೊನೆಯ ಓವರ್ನಲ್ಲಿ ಹರ್ಷದೀಪ್ ಸಿಂಗ್ ಇಶಾನ್ ಕಿಶನ್ (1) ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಮೂರನೇ ಯಶಸ್ಸು ತಂದುಕೊಟ್ಟರು.
ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಉತ್ತಮವಾಗಿ ಬ್ಯಾಟ್ ಬೀಸಿದರು. 3 ವಿಕೆಟ್ ಪತನದ ಬಳಿಕ ಕೃನಾಲ್ ಪಾಂಡ್ಯ ಜೊತೆಗೂಡಿ ಮೊದಲ 10 ಓವರ್ನಲ್ಲಿ ತಂಡದ ಮೊತ್ತವನ್ನು 70 ಕ್ಕೆ ತಂದು ನಿಲ್ಲಿಸಿದರು.
ಇನ್ನೊಂದೆಡೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಕೃನಾಲ್ ಪಾಂಡ್ಯ 30 ಎಸೆತಗಳಲ್ಲಿ 34 ರನ್ ಬಾರಿಸಿ ರವಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು. ಈ ನಡುವೆ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶಿಸಿದ ಡಿ ಕಾಕ್ 39 ಎಸೆತಗಳಲ್ಲಿ 3 ಸಿಕ್ಸರ್, 3 ಬೌಂಡರಿ ಸಹಾಯದಿಂದ ಟೂರ್ನಿಯ 4ನೇ ಅರ್ಧಶತಕ ಪೂರೈಸಿದರು. ಆದರೆ ಸೀನಿಯರ್ ಪಾಂಡ್ಯ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (8) ಬಂದ ವೇಗದಲ್ಲೇ ಶಮಿ ಎಸೆತದಲ್ಲಿ ಪೂರನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಕ್ರಿಸ್ ಜೋರ್ಡನ್ ಎಸೆದ 17ನೇ ಓವರ್ನಲ್ಲಿ ಬಿಗ್ ಹಿಟ್ಗೆ ಮುಂದಾದ ಡಿಕಾಕ್ ಮಯಾಂಕ್ ಹಿಡಿದ ಉತ್ತಮ ಕ್ಯಾಚ್ನೊಂದಿಗೆ 53 ರನ್ಗಳ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಈ ವೇಳೆ ತಂಡದ ಮೊತ್ತ 17 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 122 ರನ್ ಆಗಿತ್ತು.
ಆದರೆ ಹರ್ಷದೀಪ್ ಅವರ 18ನೇ ಓವರ್ನಲ್ಲಿ ಪೊಲಾರ್ಡ್-ಕೌಲ್ಟರ್ ನೈಲ್ ಜೊತೆಗೂಡಿ 22 ರನ್ ಕಲೆಹಾಕಿದರು. ಶಮಿ ಎಸೆದ 19ನೇ ಓವರ್ನಲ್ಲಿ ನೈಲ್ 12 ರನ್ ಬಾರಿಸಿದರು. ಅಂತಿಮ ಓವರ್ನಲ್ಲಿ 20 ರನ್ ಕಲೆಹಾಕುವ ಮೂಲಕ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿತು. ಅಂತಿಮ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪದರ್ಶಿಸಿದ ಪೊಲಾರ್ಡ್ 12 ಎಸೆತಗಳಲ್ಲಿ 4 ಸಿಕ್ಸರ್ನೊಂದಿಗೆ 34 ರನ್ ಬಾರಿಸಿದ್ರೆ, ಕೌಲ್ಟರ್ ನೈಲ್ 12 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 24 ರನ್ ಕಲೆಹಾಕಿದರು. ಇನ್ನು ಪಂಜಾಬ್ ಪರ 4 ಓವರ್ನಲ್ಲಿ 30 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಶಮಿ ಗಮನ ಸೆಳೆದರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by:
zahir
First published:
October 18, 2020, 9:12 PM IST