KXIP vs MI: ಕಿಂಗ್ಸ್ ಇಲೆವೆನ್ ಪಂಜಾಬ್​ 'ಸೂಪರ್' ಆಟಕ್ಕೆ ಶರಣಾದ ಮುಂಬೈ ಇಂಡಿಯನ್ಸ್

Mumbai Indians vs Kings XI Punjab Live Score: ಉಭಯ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 14 ಪಂದ್ಯಗಳನ್ನು ಗೆಲ್ಲುವ ಮೂಲಕ ಮುಂಬೈ ಮೇಲುಗೈ ಸಾಧಿಸಿದೆ.

ಪಂಜಾಬ್

ಪಂಜಾಬ್

 • Share this:
  ದುಬೈನಲ್ಲಿ ನಡೆದ ಐಪಿಎಲ್​ನ 36ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಕಿಂಗ್ಸ್​ ಇಲೆವೆನ್ ಪಂಜಾಬ್ ಸೂಪರ್ ಓವರ್​ನಲ್ಲಿ ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರೋಹಿತ್ ಪಡೆ ಪಂಜಾಬ್​ಗೆ 177 ರನ್​ಗಳ ಟಾರ್ಗೆಟ್ ನೀಡಿತು. ಈ ಕಠಿಣ ಸವಾಲು ಬೆನ್ನತ್ತಿದ ಪಂಜಾಬ್ ತಂಡಕ್ಕೆ ಮತ್ತೊಮ್ಮೆ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದರು. ಮೊದಲ 3 ಓವರ್​ನಲ್ಲಿ ತಂಡದ ಮೊತ್ತವನ್ನು 30 ರ ಗಡಿ ತಲುಪಿಸಿ ಉತ್ತಮ ಅಡಿಪಾಯ ಹಾಕಿದರು. ಆದರೆ 4ನೇ ಓವರ್​ನಲ್ಲಿ ಬುಮ್ರಾ ಎಸೆತವನ್ನು ಗುರುತಿಸುವಲ್ಲಿ ಎಡವಿದ ಮಯಾಂಕ್ (11) ಕ್ಲೀನ್ ಬೌಲ್ಡ್ ಆದರು. ಇದಾಗ್ಯೂ ಪವರ್ ಪ್ಲೇ ಮುಕ್ತಾಯಕ್ಕೆ ತಂಡದ ಮೊತ್ತವನ್ನು 51ಕ್ಕೆ ತಲುಪಿಸಿದರು.

  ಇನ್ನು ಪವರ್ ಪ್ಲೇ ಬಳಿಕ ಒಂದಷ್ಟು ಅಬ್ಬರಿಸಿದ ಕ್ರಿಸ್ ಗೇಲ್ 2 ಸಿಕ್ಸರ್​ನೊಂದಿಗೆ 21 ಎಸೆತಗಳಲ್ಲಿ 24 ರನ್ ಬಾರಿಸಿ ರಾಹುಲ್ ಚಹರ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ನಿಕೋಲಸ್ ಪೂರನ್ ಸ್ಪೋಟಕವಾಗಿ ಇನಿಂಗ್ಸ್ ಆರಂಭಿಸಿದರೂ ಅದನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ಎಡವಿದರು. 2 ಭರ್ಜರಿ ಸಿಕ್ಸರ್​ನೊಂದಿಗೆ 12 ಎಸೆತಗಳಲ್ಲಿ 24 ರನ್ ಬಾರಿಸಿ ಪೂರನ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು.

  ಆದರೆ ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಕೆಎಲ್ ರಾಹುಲ್ 35 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಈ ವೇಳೆಗೆ ರಾಹುಲ್ ಬ್ಯಾಟ್​ನಿಂದ 3 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳು ಮೂಡಿಬಂದಿದ್ದವು. ಆದರೆ ಇನ್ನೊಂದು ತುದಿಯಲ್ಲಿ ಕ್ರೀಸ್​ಗೆ ಇಳಿದ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೊಮ್ಮೆ ಶೂನ್ಯಕ್ಕೆ ಔಟಾಗುವ ಮೂಲಕ ಬಂದ ವೇಗದಲ್ಲೇ ಹಿಂತಿರುಗಿದರು.

  ಕೊನೆಯ 30 ಎಸೆತಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್​ಗೆ ಗೆಲ್ಲಲು 52 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಅತ್ಯುತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ರಾಹುಲ್- ಹೂಡಾ 15 ರನ್ ಕಲೆಹಾಕಿದರು. ಅದರಂತೆ 4 ಓವರ್​ನಲ್ಲಿ 37 ರನ್​ಗಳು ಬೇಕಿತ್ತು. 17ನೇ ಓವರ್​ನಲ್ಲಿ 10 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 150 ಕ್ಕೆ ತಲುಪಿಸಿದರು.  16 ಎಸೆತಗಳಲ್ಲಿ 24 ರನ್ ಬೇಕಿದ್ದ ವೇಳೆ ಕೆಎಲ್ ರಾಹುಲ್ ಜಸ್​ಪ್ರೀತ್ ಬುಮ್ರಾ ಅವರ ಯಾರ್ಕರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ 51 ಎಸೆತಗಳಲ್ಲಿ 77 ರನ್ ಬಾರಿಸಿದ್ದ ರಾಹುಲ್ ಇನಿಂಗ್ಸ್ ಅಂತ್ಯಗೊಂಡಿತು.

  ಅಂತಿಮ 2 ಓವರ್​ನಲ್ಲಿ ಪಂಜಾಬ್​ಗೆ ಗೆಲ್ಲಲು 22 ರನ್​ಗಳು ಬೇಕಾಗಿತ್ತು. ಕೌಲ್ಟನ್ ನೈಲ್ ಎಸೆದ 19ನೇ ಓವರ್​ನಲ್ಲಿ ಹೂಡಾ - ಜೋರ್ಡನ್ 13 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಮತ್ತಷ್ಟು ರೋಚಕಗೊಳಿಸಿದರು. ಕೊನೆಯ 6 ಎಸೆತಗಳಲ್ಲಿ 9 ರನ್​ಗಳ ಅವಶ್ಯಕತೆ. ಟ್ರೆಂಟ್ ಬೌಲ್ಟ್ ಮೊದಲ ಎಸೆತದಲ್ಲಿ 1 ರನ್. 2ನೇ ಎಸೆತದಲ್ಲಿ ಜೋರ್ಡನ್ ಬ್ಯಾಟ್ ಸವರಿ ಫೋರ್. 3ನೇ ಎಸೆತದಲ್ಲಿ 1 ರನ್ ಮಾತ್ರ. 4ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಒಂದು ರನ್ ಕಲೆಹಾಕಿದರೂ, 2ನೇ ಓಟದಲ್ಲಿ ಜೋರ್ಡನ್ ರನೌಟ್ ಆದರು. ಪರಿಣಾಮ ಪಂದ್ಯ ಟೈ ಆಯಿತು.

  ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ಜಸ್​ಪ್ರೀತ್ ಬುಮ್ರಾ ಓವರ್​ನಲ್ಲಿ ಕೇವಲ 5 ರನ್​ಗಳಿಸಲಷ್ಟೇ ಶಕ್ತವಾಯಿತು. 6 ಎಸೆತಗಳಲ್ಲಿ ಸಾಧಾರಣ ಗುರಿ ಪಡೆದ ಮುಂಬೈ ಇಂಡಿಯನ್ಸ್​ ಕೂಡ 5 ರನ್​ಗಳಿಸುವುದರೊಂದಿಗೆ ಸಮಬಲ ಸಾಧಿಸಿತು. ಮೊಹಮ್ಮದ್ ಶಮಿ ಭರ್ಜರಿ ಬೌಲಿಂಗ್ ಮುಂದೆ ರೋಹಿತ್ - ಡಿಕಾಕ್ ರನ್​ಗಳಿಸಲು ಪರದಾಡಿದರು. ಅಂತಿಮ ಎಸೆತದಲ್ಲಿ 2 ರನ್​ಗಳ ಅವಶ್ಯತೆಯಿದ್ದಾಗ ಕೆಎಲ್ ರಾಹುಲ್ ಡಿಕಾಕ್ ಅವರನ್ನು ಅದ್ಭುತವಾಗಿ ರನೌಟ್ ಮಾಡಿ ಸೂಪರ್ ಓವರ್ ಅನ್ನು ಸಹ ಟೈ ಆಗಿಸಿದರು.

  2ನೇ ಸೂಪರ್ ನಿಯಮದ ಪ್ರಕಾರ, ಮೊದಲ ಸೂಪರ್ ಓವರ್ ಆಡಿದ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವಂತಿಲ್ಲ. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಕಣಕ್ಕಿಳಿದರು. ಕ್ರಿಸ್ ಜೋರ್ಡನ್ ಎಸೆದ ಈ ಸೂಪರ್ ಓವರ್​ನಲ್ಲಿ ಮುಂಬೈ 11 ರನ್​ ಕಲೆಹಾಕಿತು.

  12 ರನ್​ಗಳ ಟಾರ್ಗೆಟ್ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಗೇಲ್ ಬ್ಯಾಟ್ ಬೀಸಿದರು. ಟ್ರೆಂಟ್ ಬೌಲ್ಟ್ ಮೊದಲ ಎಸೆತದಲ್ಲೇ ಗೇಲ್ ಸಿಕ್ಸರ್ ಸಿಡಿಸಿ, ಗೆಲುವಿನ ಅಂತರವನ್ನು ಕಡಿಮೆಗೊಳಿಸಿದರು. 2ನೇ ಎಸೆತದಲ್ಲಿ ಸಿಂಗಲ್ ಬಂದರೆ, 3ನೇ ಹಾಗೂ 4ನೇ ಎಸೆತಗಳಲ್ಲಿ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಮಯಾಂಕ್ ಅಗರ್ವಾಲ್ ತಂಡಕ್ಕೆ ಸೂಪರ್ ಜಯ ತಂದುಕೊಟ್ಟರು.  ಇದಕ್ಕೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅವರ ಆಕರ್ಷಕ ಅರ್ಧಶತಕ, ಕೀರನ್ ಪೊಲಾರ್ಡ್​ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ  ಸ್ಪರ್ಧಾತ್ಮಕ ಮೊತ್ತ ಪೇರಿಸುವಂತಾಯಿತು.  ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಿರೀಕ್ಷಿತ ಮಟ್ಟದ ಆರಂಭ ಒದಗಿಸುವಲ್ಲಿ ಹಿಟ್​ಮ್ಯಾನ್ ಎಡವಿದರು.

  3ನೇ ಓವರ್​ನಲ್ಲಿ ಹರ್ಷದೀಪ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗುವ ಮೂಲಕ ರೋಹಿತ್ ಶರ್ಮಾ (9) ಹೊರ ನಡೆದರು. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್​ನೊಂದಿಗೆ ಬಂದ ವೇಗದಲ್ಲೇ ಮರಳಿದರು. ಪವರ್​ ಪ್ಲೇನ ಕೊನೆಯ ಓವರ್​ನಲ್ಲಿ ಹರ್ಷದೀಪ್ ಸಿಂಗ್ ಇಶಾನ್ ಕಿಶನ್ (1) ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಮೂರನೇ ಯಶಸ್ಸು ತಂದುಕೊಟ್ಟರು.

  ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಉತ್ತಮವಾಗಿ ಬ್ಯಾಟ್ ಬೀಸಿದರು. 3 ವಿಕೆಟ್ ಪತನದ ಬಳಿಕ ಕೃನಾಲ್ ಪಾಂಡ್ಯ ಜೊತೆಗೂಡಿ ಮೊದಲ 10 ಓವರ್​ನಲ್ಲಿ ತಂಡದ ಮೊತ್ತವನ್ನು 70 ಕ್ಕೆ ತಂದು ನಿಲ್ಲಿಸಿದರು.

  ಇನ್ನೊಂದೆಡೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಕೃನಾಲ್ ಪಾಂಡ್ಯ 30 ಎಸೆತಗಳಲ್ಲಿ 34 ರನ್ ಬಾರಿಸಿ ರವಿ ಬಿಷ್ಣೋಯ್​​ಗೆ ವಿಕೆಟ್ ಒಪ್ಪಿಸಿದರು. ಈ ನಡುವೆ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶಿಸಿದ ಡಿ ಕಾಕ್ 39 ಎಸೆತಗಳಲ್ಲಿ  3 ಸಿಕ್ಸರ್, 3 ಬೌಂಡರಿ ಸಹಾಯದಿಂದ ಟೂರ್ನಿಯ 4ನೇ ಅರ್ಧಶತಕ ಪೂರೈಸಿದರು. ಆದರೆ ಸೀನಿಯರ್ ಪಾಂಡ್ಯ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (8) ಬಂದ ವೇಗದಲ್ಲೇ ಶಮಿ ಎಸೆತದಲ್ಲಿ ಪೂರನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

  ಕ್ರಿಸ್ ಜೋರ್ಡನ್ ಎಸೆದ 17ನೇ ಓವರ್​ನಲ್ಲಿ ಬಿಗ್ ಹಿಟ್​ಗೆ ಮುಂದಾದ ಡಿಕಾಕ್ ಮಯಾಂಕ್ ಹಿಡಿದ ಉತ್ತಮ ಕ್ಯಾಚ್​ನೊಂದಿಗೆ 53 ರನ್​ಗಳ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಈ ವೇಳೆ ತಂಡದ ಮೊತ್ತ 17 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 122 ರನ್ ಆಗಿತ್ತು.

  ಆದರೆ ಹರ್ಷದೀಪ್ ಅವರ 18ನೇ ಓವರ್​ನಲ್ಲಿ ಪೊಲಾರ್ಡ್​-ಕೌಲ್ಟರ್ ನೈಲ್ ಜೊತೆಗೂಡಿ 22 ರನ್​ ಕಲೆಹಾಕಿದರು. ಶಮಿ ಎಸೆದ 19ನೇ ಓವರ್​ನಲ್ಲಿ ನೈಲ್ 12 ರನ್ ಬಾರಿಸಿದರು. ಅಂತಿಮ ಓವರ್​ನಲ್ಲಿ 20 ರನ್ ಕಲೆಹಾಕುವ ಮೂಲಕ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿತು. ಅಂತಿಮ ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪದರ್ಶಿಸಿದ ಪೊಲಾರ್ಡ್ 12 ಎಸೆತಗಳಲ್ಲಿ 4 ಸಿಕ್ಸರ್​ನೊಂದಿಗೆ 34 ರನ್ ಬಾರಿಸಿದ್ರೆ, ಕೌಲ್ಟರ್ ನೈಲ್ 12 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 24 ರನ್ ಕಲೆಹಾಕಿದರು. ಇನ್ನು ಪಂಜಾಬ್ ಪರ 4 ಓವರ್​ನಲ್ಲಿ 30 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಶಮಿ ಗಮನ ಸೆಳೆದರು.

  ಈ ಸೂಪರ್ ಗೆಲುವಿನೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ 6ನೇ ಸ್ಥಾನಕ್ಕೆ ಜಿಗಿಯಿತು. ಅಲ್ಲದೆ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಿರಿಸಿಕೊಂಡಿತು.  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
  Published by:zahir
  First published: