IPL

  • associate partner
HOME » NEWS » Ipl » IPL 2020 KXIP VS MI LIVE SCORE MATCH 13 AT DUBAI ROHIT SHARMA FIFTY ZP

IPL 2020, KXIP vs MI: ಪಂಜಾಬ್​ಗೆ 192 ರನ್​ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್

Dream11 IPL 2020 Live Score: ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್​ನಲ್ಲಿ 24 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 13 ರಲ್ಲಿ ಜಯ ಸಾಧಿಸಿದ್ರೆ, ಪಂಜಾಬ್ 11 ಬಾರಿ ಗೆಲುವು ತನ್ನದಾಗಿಸಿಕೊಂಡಿದೆ.

news18-kannada
Updated:October 1, 2020, 9:27 PM IST
IPL 2020, KXIP vs MI: ಪಂಜಾಬ್​ಗೆ 192 ರನ್​ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್
rohit sharma
  • Share this:
ಅಬುಧಾಬಿ ಶೇಖ್ ಝಯಾದ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್​ನ 13ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ನಾಯಕ ರಾಹುಲ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಶೆಲ್ಡೆನ್ ಕಾಟ್ರೆಲ್ ಕ್ವಿಂಟನ್ ಡಿ ಕಾಕ್​ರನ್ನು ಮೊದಲ ಓವರ್​ನಲ್ಲೇ ಪೆವಿಲಿಯನ್​ಗೆ ಕಳುಹಿಸಿ ಸೆಲ್ಯೂಟ್ ಹೊಡೆದು ಸಂಭ್ರಮಿಸಿದರು.

ತಂಡದ ಮೊತ್ತ 21 ರನ್ ಇದ್ದಾಗ ರನ್ ಕದಿಯುವ ಆತುರದಲ್ಲಿ  ಸೂರ್ಯಕುಮಾರ್ ಯಾದವ್ (10) ಮೊಹಮ್ಮದ್ ಶಮಿ ನಿಖರ ಎಸೆತಕ್ಕೆ ರನೌಟ್ ಆಗಿ ಹೊರನಡೆದರು. ಈ ಬಳಿಕ ಜೊತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇನಲ್ಲಿ ಮುಂಬೈ ಇಂಡಿಯನ್ಸ್​ ಗಳಿಸಿದ್ದು 41 ರನ್​ಗಳು ಮಾತ್ರ. ಹಾಗೆಯೇ ಮೊದಲ ಹತ್ತು ಓವರ್​ಗಳಲ್ಲಿ ಪೇರಿಸಿದ್ದು 62 ರನ್​ಗಳು.

ಹತ್ತು ಓವರ್​ಗಳ ಬಳಿಕ ಇಶಾನ್ ಕಿಶನ್ ಒಂದಷ್ಟು ಆರ್ಭಟಿಸಲು ಯತ್ನಿಸಿದರೂ ಪಂಜಾಬ್ ಬೌಲರುಗಳ ಮುಂದೆ ಅದು ಸಾಧ್ಯವಾಗಿಲ್ಲ. ಅದರಲ್ಲೂ 24 ರನ್​ಗಳಿಸಿದ್ದಾಗ ರವಿ ಬಿಷ್ಣೋಯ್ ಕ್ಯಾಚ್ ಕೈಚೆಲ್ಲುವ ಮೂಲಕ ಇಶಾನ್​ಗೆ ಜೀವದಾನ ನೀಡಿದ್ದರು. ಆದರೆ ಅದನ್ನು ಸದುಪಯೋಗಪಡಿಸುವಲ್ಲಿ ಎಡವಿದ ಮುಂಬೈ ಎಡಗೈ ದಾಂಡಿಗ 28 ರನ್​ಗಳಿಸಿ ಕೃಷ್ಣಪ್ಪ ಗೌತಮ್​ಗೆ ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮಾ 40 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಈ ವೇಳೆಗೆ ಹಿಟ್​ಮ್ಯಾನ್ ಬ್ಯಾಟ್​ನಿಂದ 1 ಸಿಕ್ಸರ್ ಹಾಗೂ 7 ಬೌಂಡರಿಗಳು ಸಿಡಿದಿದ್ದವು. ಹಾಫ್ ಸೆಂಚುರಿ ಬೆನ್ನಲ್ಲೇ ಆರ್ಭಟ ಶುರು ಮಾಡಿದ ಹಿಟ್​ಮ್ಯಾನ್ ಫೋರ್​-ಸಿಕ್ಸ್​ಗಳ ಸುರಿಮಳೆ ಸುರಿಸಿದರು. ಪರಿಣಾಮ 16 ಓವರ್​ಗಳಲ್ಲಿ ತಂಡದ ಮೊತ್ತ 124 ಕ್ಕೆ ಬಂದು ನಿಂತಿತು.

ಆದರೆ 17ನೇ ಓವರ್​ನ ಮೊದಲ ಎಸೆತದಲ್ಲೇ ಬೌಂಡರಿ ಲೈನ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಜೇಮ್ಸ್ ನೀಶಮ್ ಅವರ ಅದ್ಭುತ ಫೀಲ್ಡಿಂಗ್​ ಕ್ಯಾಚ್​ಗೆ 45 ಎಸೆತಗಳಲ್ಲಿ 70 ರನ್​ ಬಾರಿಸಿದ ರೋಹಿತ್ ಹೊರನಡೆಯಬೇಕಾಯಿತು.

ಆ ಬಳಿಕ ಕ್ರೀಸ್​ಗೆ ಆಗಮಸಿದ ಹಾರ್ದಿಕ್ ಪಾಂಡ್ಯ ಜಿಮ್ಮಿ ನೀಶಮ್ ಎಸೆದ 18ನೇ ಓವರ್​ನಲ್ಲಿ ಸಿಕ್ಸ್​-ಫೋರ್​ಗಳೊಂದಿಗೆ ಬರೋಬ್ಬರಿ 18 ರನ್ ಕಲೆಹಾಕಿದರು. 19ನೇ ಓವರ್​ನಲ್ಲೂ 19 ರನ್​ಗಳನ್ನು ಕಲೆಹಾಕುವಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್​ಮನ್​ ಯಶಸ್ವಿಯಾದರು.

ಇನ್ನು ಅಂತಿಮ ಓವರ್​ನಲ್ಲಿ 4 ಭರ್ಜರಿ ಸಿಕ್ಸರ್​ಗಳೊಂದಿಗೆ 25 ರನ್​ ಬಾರಿಸಿ ಪೊಲಾರ್ಡ್-ಪಾಂಡ್ಯ ಜೋಡಿ 23 ಎಸೆತಗಳಲ್ಲಿ 67 ರನ್​ಗಳ ಜೊತೆಯಾಟವಾಡಿದರು. ಇದರೊಂದಿಗೆ ತಂಡದ ಮೊತ್ತ ನಿಗದಿತ 20 ಓವರ್​ನಲ್ಲಿ 191 ಕ್ಕೆ ಬಂದು ನಿಂತಿತು.ಸ್ಕೋರ್: 191/4

ಓವರ್: 20ಉಭಯ ತಂಡಗಳು ಗೆಲುವಿನ ಖಾತೆ ತೆರೆದರೂ, ಆಡಿರುವ ಮೂರು ಪಂದ್ಯಗಳಲ್ಲಿ 2ರಲ್ಲಿ ಸೋಲುನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದ ಮೂಲಕ ಜಯದ ಲಯಕ್ಕೆ ಮರಳಲು ಪೈಪೋಟಿ ನಡೆಸಲಿವೆ.

ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಬಳಗವನ್ನು ಹೊಂದಿದೆ ಎಂಬುದಕ್ಕೆ ಈ ಹಿಂದಿನ ಪಂದ್ಯಗಳೇ ಸಾಕ್ಷಿ. ಕಿಂಗ್ಸ್​ ಇಲೆವೆನ್ ಪಂಜಾಬ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 223 ರನ್​ಗಳನ್ನು ಬಾರಿಸಿತ್ತು. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ 201 ರನ್ ಚೇಸ್ ಮಾಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ರನ್ ಮಳೆ ಹರಿಯುವ ಸಾಧ್ಯತೆಯಿದೆ.

ಪಂಜಾಬ್ ತಂಡದ ಆರಂಭಿಕರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಆದರೆ ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಆಟ ಮೂಡಿ ಬಂದಿಲ್ಲ. ಹಾಗೆಯೇ ಮುಂಬೈ ಇಂಡಿಯನ್ಸ್ ಕಳೆದ ಮೂರು ಪಂದ್ಯಗಳಲ್ಲೂ ಆರಂಭಿಕ ಆಘಾತ ಅನುಭವಿಸಿದೆ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಸಿಡಿಯಬಲ್ಲ ಪೊಲಾರ್ಡ್​-ಕಿಶನ್ ಇರುವುದು ರೋಹಿತ್ ಶರ್ಮಾ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಫಾರ್ಮ್​ ಚಿಂತೆ ಕೂಡ ಮುಂಬೈ ತಂಡಕ್ಕಿದೆ.

ಇನ್ನು ಎರಡೂ ತಂಡಗಳ ಬೌಲಿಂಗ್ ವಿಭಾಗವು ಮತ್ತಷ್ಟು ಮೊನಚಿನ ದಾಳಿ ಸಂಘಟಿಸುವ ಅಗತ್ಯವಿದೆ. ಆರ್​ಸಿಬಿ ವಿರುದ್ಧ ಮುಂಬೈ ವೇಗಿ ಜಸ್​​ಪ್ರೀತ್ ಬುಮ್ರಾ ಎಡವಿದ್ರೆ, ರಾಜಸ್ಥಾನ್ ವಿರುದ್ದ ಕಿಂಗ್ಸ್​ ವೇಗಿ ಶೆಲ್ಡನ್ ಕಾಟ್ರೆಲ್ 30 ರನ್ ನೀಡಿ ದುಬಾರಿ ಎನಿಸಿಕೊಂಡಿದ್ದರು. ಹೀಗಾಗಿ ತಂಡದ ಪ್ರಮುಖ ವೇಗಿಗಳು ಮತ್ತೆ ಉತ್ತಮ ಲಯಕ್ಕೆ ಮರಳಬೇಕಿದೆ. ಇದರ ಹೊರತಾಗಿಯೂ ಮುಂಬೈ ಪರ ಟ್ರೆಂಟ್ ಬೌಲ್ಟ್ ಹಾಗೂ ಕಿಂಗ್ಸ್​ ಪರ ಮೊಹಮ್ಮದ್ ಶಮಿ ಉತ್ತಮವಾಗಿಯೇ ಬೌಲಿಂಗ್ ಮಾಡುತ್ತಿದ್ದಾರೆ.

ಅಂಕ ಪಟ್ಟಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಐದನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ಆರನೇ ಸ್ಥಾನ ಪಡೆದುಕೊಂಡಿದೆ. ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಉಭಯ ತಂಡಗಳು ಟಾಪ್ 4 ಗೆ ಎಂಟ್ರಿ ಕೊಡುವ ತವಕದಲ್ಲಿದೆ. ಹೀಗಾಗಿ ಅಬುಧಾಬಿಯ ಮೈದಾನದಲ್ಲಿ ಇಂದು ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
Published by: zahir
First published: October 1, 2020, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories