news18-kannada Updated:October 1, 2020, 11:34 PM IST
MI vs KXIP
ಅಬುಧಾಬಿ ಶೇಖ್ ಝಯಾದ್ ಮೈದಾನದಲ್ಲಿ ನಡೆದ ಐಪಿಎಲ್ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 48 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ರೋಹಿತ್ ಪಡೆ ಕಿಂಗ್ಸ್ ಇಲೆವೆನ್ ತಂಡಕ್ಕೆ ಗೆಲ್ಲಲು 192 ರನ್ಗಳ ಟಾರ್ಗೆಟ್ ನಿಡಿತು. ಈ ಬೃಹತ್ ಗುರಿ ಬೆನ್ನತಿದ ಕಿಂಗ್ಸ್ ಇಲೆವೆನ್ಗೆ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು.
ಮೊದಲ ಓವರ್ನಿಂದಲೇ ಮುಂಬೈ ಬೌಲರುಗಳನ್ನು ದಂಡಿಸಲು ಪ್ರಾರಂಭಿಸಿದ ಕಿಂಗ್ಸ್ ಓಪನರ್ಗಳು ಮೊದಲ 3 ಓವರ್ನಲ್ಲೇ ತಂಡದ ಮೊತ್ತವನ್ನು 30ರ ಗಡಿದಾಟಿಸಿದರು. ಆದರೆ ಐದನೇ ಓವರ್ನಲ್ಲಿ ಬೌಲಿಂಗ್ ಆರಂಭಿಸಿದ ಬೂಮ್ ಬೂಮ್ ಬುಮ್ರಾ ಎಸೆತವನ್ನು ಗುರುತಿಸುವಲ್ಲಿ ಎಡವಿದ ಅಗರ್ವಾಲ್ (25) ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ಗೋಲ್ಡನ್ ಡಕ್ನೊಂದಿಗೆ ಕರುಣ್ ನಾಯರ್ ಕೂಡ ಬಂದ ವೇಗದಲ್ಲೇ ಪೆವಿಲಿಯನ್ ಕಡೆ ಮುಖ ಮಾಡಿದರು.
ಇನ್ನು ರಾಹುಲ್ ಚಹರ್ ಎಸೆದ 9ನೇ ಓವರ್ನಲ್ಲಿ ಸ್ಕೂಪ್ ಮಾಡಲೋದ ಕೆಎಲ್ ರಾಹುಲ್ (17) ಕ್ಲೀನ್ ಬೌಲ್ಡ್ ಆದರು. ಇದರ ಬಳಿಕ ಜೊತೆಯಾದ ಪೂರನ್ ಹಾಗೂ ಮ್ಯಾಕ್ಸ್ವೆಲ್ ಉತ್ತಮ ಜೊತೆಯಾಟ ಆರಂಭಿಸಿದರು. ಆದರೆ 27 ಎಸೆತಗಳಲ್ಲಿ 44 ರನ್ ಬಾರಿಸಿದ ಪೂರನ್ ಪ್ಯಾಟಿನ್ಸನ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ (11) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಇನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಜಿಮ್ಮಿ ನೀಶಮ್ (7) ಕೂಡ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಬುಮ್ರಾ ಎಸೆತದಲ್ಲಿ ಔಟ್ ಆಗುವ ಮೂಲಕ ಮುಂಬೈ ಪಾಲಿನ 6ನೇ ಯಶಸ್ಸಾದರು.
ಕೊನೆಯ ನಾಲ್ಕು ಓವರ್ಗಳಲ್ಲಿ ಪಂಜಾಬ್ಗೆ ಗೆಲ್ಲಲು 80 ರನ್ಗಳ ಅವಶ್ಯಕತೆಯಿತ್ತು. ಆದರೆ ಮುಂಬೈ ಇಂಡಿಯನ್ಸ್ ಕರಾರುವಾಕ್ ದಾಳಿ ಮುಂದೆ ರನ್ಗಾಗಿ ಪರದಾಡಿದ ಸರ್ಫರಾಜ್ ಖಾನ್ (7), ರವಿ ಬಿಷ್ಣೋಯ್ (1) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು. ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ ಪಂಜಾಬ್ ತಂಡವನ್ನು 8 ವಿಕೆಟ್ನೊಂದಿಗೆ 143 ರನ್ಗಳಿಗೆ ನಿಯಂತ್ರಿಸಿದರು.
ಮುಂಬೈ ಪರ ಮಾರಕ ದಾಳಿ ಸಂಘಟಿಸಿದ ಜೇಮ್ಸ್ ಪ್ಯಾಟಿನ್ಸನ್, ಜಸ್ಪ್ರೀತ್ ಬುಮ್ರಾ ಹಾಗೂ ರಾಹುಲ್ ಚಹರ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: Rohit Sharma: ದಾಖಲೆಯೊಂದಿಗೆ IPL ರನ್ ಸರದಾರರ ಪಟ್ಟಿಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ
ಇದಕ್ಕೂ ಮುನ್ನ ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ನಾಯಕ ರಾಹುಲ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಶೆಲ್ಡೆನ್ ಕಾಟ್ರೆಲ್ ಕ್ವಿಂಟನ್ ಡಿ ಕಾಕ್ರನ್ನು ಮೊದಲ ಓವರ್ನಲ್ಲೇ ಪೆವಿಲಿಯನ್ಗೆ ಕಳುಹಿಸಿ ಸೆಲ್ಯೂಟ್ ಹೊಡೆದು ಸಂಭ್ರಮಿಸಿದರು.ತಂಡದ ಮೊತ್ತ 21 ರನ್ ಇದ್ದಾಗ ರನ್ ಕದಿಯುವ ಆತುರದಲ್ಲಿ ಸೂರ್ಯಕುಮಾರ್ ಯಾದವ್ (10) ಮೊಹಮ್ಮದ್ ಶಮಿ ನಿಖರ ಎಸೆತಕ್ಕೆ ರನೌಟ್ ಆಗಿ ಹೊರನಡೆದರು. ಈ ಬಳಿಕ ಜೊತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್ಪ್ಲೇನಲ್ಲಿ ಮುಂಬೈ ಇಂಡಿಯನ್ಸ್ ಗಳಿಸಿದ್ದು 41 ರನ್ಗಳು ಮಾತ್ರ. ಹಾಗೆಯೇ ಮೊದಲ ಹತ್ತು ಓವರ್ಗಳಲ್ಲಿ ಪೇರಿಸಿದ್ದು 62 ರನ್ಗಳು.
ಹತ್ತು ಓವರ್ಗಳ ಬಳಿಕ ಇಶಾನ್ ಕಿಶನ್ ಒಂದಷ್ಟು ಆರ್ಭಟಿಸಲು ಯತ್ನಿಸಿದರೂ ಪಂಜಾಬ್ ಬೌಲರುಗಳ ಮುಂದೆ ಅದು ಸಾಧ್ಯವಾಗಿಲ್ಲ. ಅದರಲ್ಲೂ 24 ರನ್ಗಳಿಸಿದ್ದಾಗ ರವಿ ಬಿಷ್ಣೋಯ್ ಕ್ಯಾಚ್ ಕೈಚೆಲ್ಲುವ ಮೂಲಕ ಇಶಾನ್ಗೆ ಜೀವದಾನ ನೀಡಿದ್ದರು. ಆದರೆ ಅದನ್ನು ಸದುಪಯೋಗಪಡಿಸುವಲ್ಲಿ ಎಡವಿದ ಮುಂಬೈ ಎಡಗೈ ದಾಂಡಿಗ 28 ರನ್ಗಳಿಸಿ ಕೃಷ್ಣಪ್ಪ ಗೌತಮ್ಗೆ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮಾ 40 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಈ ವೇಳೆಗೆ ಹಿಟ್ಮ್ಯಾನ್ ಬ್ಯಾಟ್ನಿಂದ 1 ಸಿಕ್ಸರ್ ಹಾಗೂ 7 ಬೌಂಡರಿಗಳು ಸಿಡಿದಿದ್ದವು. ಹಾಫ್ ಸೆಂಚುರಿ ಬೆನ್ನಲ್ಲೇ ಆರ್ಭಟ ಶುರು ಮಾಡಿದ ಹಿಟ್ಮ್ಯಾನ್ ಫೋರ್-ಸಿಕ್ಸ್ಗಳ ಸುರಿಮಳೆ ಸುರಿಸಿದರು. ಪರಿಣಾಮ 16 ಓವರ್ಗಳಲ್ಲಿ ತಂಡದ ಮೊತ್ತ 124 ಕ್ಕೆ ಬಂದು ನಿಂತಿತು.
ಆದರೆ 17ನೇ ಓವರ್ನ ಮೊದಲ ಎಸೆತದಲ್ಲೇ ಬೌಂಡರಿ ಲೈನ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೇಮ್ಸ್ ನೀಶಮ್ ಅವರ ಅದ್ಭುತ ಫೀಲ್ಡಿಂಗ್ ಕ್ಯಾಚ್ಗೆ 45 ಎಸೆತಗಳಲ್ಲಿ 70 ರನ್ ಬಾರಿಸಿದ ರೋಹಿತ್ ಹೊರನಡೆಯಬೇಕಾಯಿತು.
ಆ ಬಳಿಕ ಕ್ರೀಸ್ಗೆ ಆಗಮಸಿದ ಹಾರ್ದಿಕ್ ಪಾಂಡ್ಯ ಜಿಮ್ಮಿ ನೀಶಮ್ ಎಸೆದ 18ನೇ ಓವರ್ನಲ್ಲಿ ಸಿಕ್ಸ್-ಫೋರ್ಗಳೊಂದಿಗೆ ಬರೋಬ್ಬರಿ 18 ರನ್ ಕಲೆಹಾಕಿದರು. 19ನೇ ಓವರ್ನಲ್ಲೂ 19 ರನ್ಗಳನ್ನು ಕಲೆಹಾಕುವಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ ಯಶಸ್ವಿಯಾದರು.
ಇನ್ನು ಅಂತಿಮ ಓವರ್ನಲ್ಲಿ 4 ಭರ್ಜರಿ ಸಿಕ್ಸರ್ಗಳೊಂದಿಗೆ 25 ರನ್ ಬಾರಿಸಿ ಪೊಲಾರ್ಡ್-ಪಾಂಡ್ಯ ಜೋಡಿ 23 ಎಸೆತಗಳಲ್ಲಿ 67 ರನ್ಗಳ ಜೊತೆಯಾಟವಾಡಿದರು. ಇದರೊಂದಿಗೆ ತಂಡದ ಮೊತ್ತ ನಿಗದಿತ 20 ಓವರ್ನಲ್ಲಿ 191 ಕ್ಕೆ ಬಂದು ನಿಂತಿತು. ಈ ಮೊತ್ತವನ್ನು ಚೇಸ್ ಮಾಡಲು ಎಡವಿದ ಪಂಜಾಬ್ 48 ರನ್ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಈ ಭರ್ಜರಿ ಜಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಐಪಿಎಲ್ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
Published by:
zahir
First published:
October 1, 2020, 9:36 PM IST