news18-kannada Updated:October 10, 2020, 7:32 PM IST
ಮಯಾಂಕ್-ರಾಹುಲ್
ಅಬುಧಾಬಿ (ಅ. 10): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಡೆದ 24ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2 ರನ್ಗಳ ರೋಚಕ ಗೆಲುವು ಸಾಧಿಸಿದೆ. ಕನ್ನಡಿಗರಾದ ನಾಯಕ ಕೆ. ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಹೋರಟಕ್ಕೆ ಫಲ ಸಿಗದೆ ಪಂಜಾಬ್ ಟೂರ್ನಿಯಲ್ಲಿ 5ನೇ ಸೋಲುಕಂಡಿತು.
ಕೆಕೆಆರ್ ನೀಡಿದ್ದ 165 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಮೊದಲ 6 ಓವರ್ನಲ್ಲಿ ಕೇವಲ 47 ರನ್ ಹರಿದುಬಂತು.
ಆದರೆ, ಪವರ್ ಪ್ಲೇ ಓವರ್ ನಂತರ ಬಿರುಸಿನ ಬ್ಯಾಟಿಂಗ್ ನಡೆಸಿದ ಇವರಿಬ್ಬರು (115 ರನ್) ಶತಕದ ಜೊತೆಯಾಟ ಆಡಿದರು. ಭರ್ಜರಿ ಬ್ಯಾಟಿಂಗ್ ನಡೆಸಿದ ರಾಹುಲ್- ಮಯಾಂಕ್ ಪಂಜಾಬ್ ಬೌಲರ್ಗಳ ಬೆವರಿಳಿಸಿದರು.
ಮಯಾಂಕ್ 39 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಿಡಿಸಿ 56 ರನ್ ಗಳಿಸಿದರು. ಕೊನೆ ಹಂತದಲ್ಲಿ ಕೆಕೆಆರ್ ಬೌಲರ್ಗಳ ಅದ್ಭುತ ಪ್ರದರ್ಶನದಿಂದ ಕಾರ್ತಿಕ್ ಪಡೆ ಪಂದ್ಯದಲ್ಲಿ ಹಿಡಿತ ಸಾಧಿಸಿತು. ರಾಹುಲ್ 19ನೇ ಓವರ್ನ ಕೊನೆಯ ಎಸೆತದಲ್ಲಿ ಔಟ್ ಆದರು. 58 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 74 ರನ್ ಗಳಿಸಿದರು.
ಕೊನೆಯ ಓವರ್ನಲ್ಲಿ ಪಂಜಾಬ್ಗೆ ಗೆಲ್ಲಲು 14 ರನ್ಗಳ ಅವಶ್ಯಕತೆಯಿತ್ತು. ಕ್ರೀಸ್ನಲ್ಲಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮಂದೀಪ್ ಸಿಂಗ್ ಗೆಲುವಿಗೆ ಹೋರಾಟ ನಡೆಸಿದರಾದರೂ ನರೈಸ್ ಸ್ಪಿನ್ ಜಾದುವಿನ ಎದುರು ಗೆಲುವು ಸಾಧ್ಯವಾಗಲಿಲ್ಲ. ಕೊನೆಯ ಎಸೆತದಲ್ಲಿ ಗೆಲ್ಲಲು 7 ರನ್ಗಳ ಅವಶ್ಯಕತೆಯಿತ್ತು. ಆದರೆ ಮ್ಯಾಕ್ಸ್ವೆಲ್ ಬೌಂಡರಿ ಬಾರಿಸಲಷ್ಟೇ ಶಕ್ತರಾಗಿ ಸೋಲೊಪ್ಪಿಗೊಂಡಿತು.
ಪಂಜಾಬ್ 20 ಓವರ್ನಲ್ಲೇ 5 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ ಗೆಲುವು ಕಾಣುವಲ್ಲಿ ವಿಫಲವಾಯಿತು.
ಇದಕ್ಕೂ ಮುನ್ನ
ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿದ್ದ ರಾಹುಲ್ ತ್ರಿಪಾಠಿ ಈ ಬಾರಿ ಕೇವಲ 4 ರನ್ಗೆ ಔಟ್ ಆದರೆ, ನಿತೀಶ್ ರಾಣ(2) ರನೌಟ್ಗೆ ಬಲಿಯಾಗಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ಒಂದಾದ ಶುಭ್ಮನ್ ಗಿಲ್ ಹಾಗೂ ಈಯಾನ್ ಮಾರ್ಗನ್ ತಂಡಕ್ಕೆ ಆಸರೆಯಾಗಿ ನಿಂತರು.
ಎಚ್ಚರಿಕೆಯ ಆಟವಾಡಿದ ಈ ಜೋಡಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿತು. ಗಿಲ್- ಮಾರ್ಗನ್ 49 ರನ್ಗಳ ಜೊತೆಯಾಟ ಆಡಿದರು. ಚೆನ್ನಾಗಿಯೆ ಆಡುತ್ತಿದ್ದ ಮಾರ್ಗನ್ 23 ಎಸೆತಗಳಲ್ಲಿ 24 ರನ್ ಗಳಿಸಿ ಮ್ಯಾಕ್ಸ್ವೆಲ್ಗೆ ಕ್ಯಾಚಿತ್ತು ನಿರ್ಗಮಿಸಿದ್ದು ತಂಡಕ್ಕೆ ಹೊಡೆತ ಬಿದ್ದಂತಾಯಿತು.
ಬಳಿಕ ಸೆಟ್ ಬ್ಯಾಟ್ಸ್ಮನ್ ಗಿಲ್ ಜೊತೆಯಾದ ನಾಯಕ ದಿನೇಶ್ ಕಾರ್ತಿಕ್ ತಂಡದ ರನ್ ಗತಿಯನ್ನು ಏರಿಸಲು ಹೋರಾಟ ನಡೆಸಿದರು. ಭರ್ಜರಿ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 150ರ ಅಂಚಿಗೆ ತಂದಿಟ್ಟಿತು. 81 ರನ್ಗಳ ಅಮೋಘ ಕಾಣಿಕೆ ನೀಡಿತು.
ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿದರೆ, ಕಳಪೆ ಫಾರ್ಮ್ನಿಂದ ತತ್ತರಿಸಿದ್ದ ಕಾರ್ತಿಕ್ ಅಂತಿಮ ಹಂತದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ಗಿಲ್ 47 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 57 ರನ್ ಗಳಿಸಿದರೆ, ಕಾರ್ತಿಕ್ ಕೇವಲ 29 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಿಡಿಸಿ 58 ರನ್ ಚಚ್ಚಿದರು.
ಅಂತಿಮವಾಗಿ ಕೆಕೆಆರ್ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು. ಪಂಜಾಬ್ ಪರ ಮೊಹಮ್ಮದ್ ಶಮಿ, ಅರ್ಶ್ದೀಪ್ ನಾಥ್ ಹಾಗೂ ರವಿ ಬೊಷ್ಟೋಯಿ ತಲಾ 1 ವಿಕೆಟ್ ಪಡೆದರು.
Published by:
Vinay Bhat
First published:
October 10, 2020, 7:28 PM IST